Advertisement

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

12:24 AM Oct 02, 2023 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರ ಪರ್ವತಕ್ಕೆ ಚಾರಣ ಹೋಗಲು ಅ. 3ರಿಂದ ನಿರ್ಬಂಧ ವಿಧಿಸಲಾಗಿದೆ.

Advertisement

ಪ್ರಸ್ತುತ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಾಗೂ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್‌ ಎಲರ್ಟ್‌ ಘೋಷಿಸಿದ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಭಾರೀ ಮಳೆಯಿಂದ ಕಡಿದಾದ ಬೆಟ್ಟವನ್ನು ಏರಲು ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಇಲಾಖೆಯ ಈ ಆದೇಶಕ್ಕೆ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ವಿನಂತಿಸಿದೆ.

750ಕ್ಕೂ ಹೆಚ್ಚಿನ ಚಾರಣಿಗರು
ಮೇ ತಿಂಗಳಿನಿಂದ ಸೆ.29ರ ತನಕ ಬಿರು ಬೇಸಗೆ ಮತ್ತು ಅಧಿಕ ಮಳೆಯ ಕಾರಣ ನಿರ್ಬಂಧ ವಿಧಿಸಲಾಗಿತ್ತು. ಶನಿವಾರದಿಂದ ನಿರ್ಬಂಧ ತೆರವು ಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಮೊದಲ ದಿನವೇ 750ಕ್ಕೂ ಹೆಚ್ಚಿನ ಚಾರಣಿಗರು ಕುಮಾರ ಪರ್ವತವೇರಲು ಆಗಮಿಸಿದ್ದರು. ಆದಿತ್ಯವಾರವೂ ಭಾರೀ ಸಂಖ್ಯೆಯ ಚಾರಣಾಸಕ್ತರು ಕುಮಾರಪರ್ವತಕ್ಕೆ ತೆರಳಿದ್ದರು. ಆದರೆ ಈ ದಿನಗಳಲ್ಲಿ ಕುಕ್ಕೆ ಸೇರಿದಂತೆ ಬೆಟ್ಟ ಪ್ರದೇಶದಲ್ಲಿ ಅತ್ಯಧಿಕ ಮಳೆ ಸುರಿದ ಕಾರಣ ಚಾರಣಿಗರಿಗೆ ತೆರಳಲು ಕಷ್ಟವಾಗಿತ್ತು.

ಹಿಂಗಾರು ಮಳೆ
ಒಂದೆರಡು ದಿನ ಮಳೆ ವಿರಾಮ ನೀಡಿದರೂ ಅನಂತರ ಮತ್ತೆ ಹಿಂಗಾರು ಮಳೆ ಚುರುಕಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸುಬ್ರಹ್ಮಣ್ಯ ಸಹಿತ ಘಾಟಿ ಪ್ರದೇಶದಲ್ಲಿ ಗಾಳಿ ಮತ್ತು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೂಡ ಮುನ್ನೆಚ್ಚರಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next