ಬೆಳಗಾವಿ: ಉತ್ತರ ಕರ್ನಾಟಕದ ಕೇಂದ್ರ ಬಿಂದು ಬೆಳಗಾವಿ ಜಿಲ್ಲೆ ಮತ್ತೆ ಮಳೆ ಹಾಗೂ ಪ್ರವಾಹದ ಅಬ್ಬರಕ್ಕೆ ಸಿಲುಕಿ ನಲುಗಿದೆ. ರವಿವಾರ ರಾತ್ರಿ ಸತತವಾಗಿ ಸುರಿದ ಧಾರಾಕಾರ ಮಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟುಮಾಡಿದೆ.
ಹುಕ್ಕೇರಿ ತಾಲೂಕಿನ ಪನಗುತ್ತಿ ಗ್ರಾಮದ ಬಳಿ ರಸ್ತೆ ಕುಸಿದು ಸಾರಿಗೆ ಬಸ್ ಅದರಲ್ಲಿ ಸಿಲುಕಿಕೊಂಡಿದೆ. ಆದರೆ ಸುದೈವದಿಂದ ಯಾವುದೇ ಅನಾಹುತಗಳು ಆಗಿಲ್ಲ.
ಮಲಪ್ರಭಾ ನದಿಯು ಮತ್ತೆ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಇದರಿಂದ ಸವದತ್ತಿ ತಾಲೂಕಿನ ಮುನವಳ್ಳಿ ಹಾಗೂ ರಾಮದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು ಹಳ್ಳ ಹಾಗೂ ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ಮಲಪ್ರಭಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜಲಾಶಯಕ್ಕೆ ಈಗ 36 ಸಾವಿರ ಕ್ಯೂಸೆಕ್ಸ ನೀರು ಬರುತ್ತಿದ್ದು ಇಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.
ಇನ್ನು ಚಿಕ್ಕೋಡಿ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಕೃಷ್ಣಾ ನದಿ ಮರಳಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ನಾಲ್ಕು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಕೃಷ್ಣಾ ನದಿಗೆ ಈಗ ಸುಮಾರು ಒಂದು ಲಕ್ಷ ಕ್ಯೂಸೆಕ್ಸ ನೀರು ಬರುತ್ತಿದ್ದು ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.