ಅರಂತೋಡು: ಧಾರಾಕಾರವಾಗಿ ಸುರಿದ ರಣ ಭೀಕರ ಮಳೆಯಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಹಲವು ಭಾಗಗಳು ಅಕ್ಷರಶಃ ದ್ವೀಪವಾಗಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ತಡರಾತ್ರಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸಂಪಾಜೆ , ಕಲ್ಲುಗುಂಡಿಯಲ್ಲಿ ಜಲ ಪ್ರವಾಹ ಉಂಟಾಗಿದೆ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದು ಇಡೀ ಕಲ್ಲುಗುಂಡಿ ಪೇಟೆ ನೀರಲ್ಲಿ ಮುಳುಗಿದೆ. ತಗ್ಗು ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು, ಮನೆಗಳು , ಅಂಗಡಿ ಮುಂಗಟ್ಟುಗಳು ನೀರಿನಲ್ಲಿ ಮುಳುಗಿ ಹೋಗಿದೆ.
ಕಲ್ಲುಗುಂಡಿಯಲ್ಲಿ ಆಳೆತ್ತರದಲ್ಲಿ ನೀರು ತುಂಬಿ ಹರಿದಿದೆ. ರಾತ್ರಿ ಜಲಾವೃತವಾದ ಮನೆಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತರುವ ಪ್ರಯತ್ನ ನಡೆಸಲಾಯಿತು. ಮನೆಗಳಿಗೆ ಕೆಸರು ಮಿಶ್ರಿತ ನೀರು ನುಗ್ಗಿದ್ದು ಭಾರೀ ನಷ್ಟ ಸಂಭವಿಸಿದೆ. ಮನೆಗಳಲ್ಲಿರುವ ಗೃಹೋಪಯೋಗಿ ವಸ್ತುಗಳು ನೀರು ಪಾಲಾದವು.
ಇದನ್ನೂ ಓದಿ: ಇಬ್ಬರ ಪ್ಲ್ಯಾನ್- 6 ಜನರ ಟೀಂ; ಫಾಝಿಲ್ ಹಂತಕರು ಪೊಲೀಸ್ ಬಲೆಗೆ; ಆತನೇ ಟಾರ್ಗೆಟ್ ಆಗಿದ್ಯಾಕೆ?
ಮನೆಗಳಲ್ಲಿ ಕೆಸರು ತುಂಬಿದ್ದು ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಟಿವಿ , ಫ್ರಿಡ್ಜ್, ವಾಷಿಂಗ್ ಮೆಷಿನ್ , ಇನ್ವರ್ಟರ್ , ಗ್ಯಾಸ್ ಸಿಲಿಂಡರ್ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಸಂಪೂರ್ಣವಾಗಿ ಹಾಳಾಗಿದೆ.
ವಾಹನಗಳು ನೀರಿನಲ್ಲಿ ಮುಳುಗಿ ಹೋದವು. ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿತ್ತು. ಕೊಯನಾಡುವಿನಲ್ಲಿ ಕೆಲವು ಮನೆಗಳು ಜಲಾವೃತವಾಗಿದೆ. ನೀರು ನುಗ್ಗಿ ವ್ಯಾಪಕವಾಗಿ ಕೃಷಿ ಹಾನಿಯೂ ಸಂಭವಿಸಿದೆ.
ಸಂಪಾಜೆಯಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.