Advertisement

ಮಂಡ್ಯ: ಕುಂಭದ್ರೋಣ ಮಳೆಗೆ ಮುಳುಗಿದ ವಿವೇಕಾನಂದನಗರ, ಬೀಡಿ ಕಾರ್ಮಿಕರ ಕಾಲೋನಿ

07:40 PM Aug 02, 2022 | Team Udayavani |

ಮಂಡ್ಯ: ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಮಂಡ್ಯ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯಿಂದ ತತ್ತರಿಸಿದ್ದಾರೆ.

Advertisement

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆಗಳು, ಪಾತ್ರೆ ಸಾಮಾನುಗಳು, ಎಲೆಕ್ಟಾçನಿಕ್ಸ್ ವಸ್ತುಗಳು, ನೀರಿನಿಂದ ಜಲಾವೃತಗೊಂಡು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಕುಟುಂಬಸ್ಥರು ಮಳೆಯ ನೀರನ್ನು ಮನೆಯಿಂದ ಹೊರ ಹಾಕುವುದರಲ್ಲೇ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.

ಮುಳುಗಿದ ವಿವೇಕಾನಂದನಗರ:

ರಾತ್ರಿ 6.45ರಲ್ಲಿ ಪ್ರಾರಂಭಗೊಂಡ ಮಳೆ ಮಧ್ಯರಾತ್ರಿವರೆಗೂ ಸುರಿಯಿತು. ಇದರಿಂದ ನಗರದ ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ ಹಾಗೂ ಪಕ್ಕದಲ್ಲೇ ಇರುವ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ. ಬಡಾವಣೆಯ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಯನ್ನು ಸಂಪೂರ್ಣವಾಗಿ ಜಲದಿಗ್ಬಂಧನ ವಿಧಿಸಿದೆ. ನಗರಸಭೆ ಹಾಗೂ ರಕ್ಷಣಾ ತಂಡ ಬೋಟ್‌ಗಳ ಮೂಲಕ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ನಗರಸಭೆ ಸಿಬ್ಬಂದಿಗಳು ನೀರು ಹೊರ ಹಾಕಲು ಹರಸಾಹಸಪಡುತ್ತಿದ್ದಾರೆ.

ಮನೆಯ ಮೇಲೆ ಹತ್ತಿ ಕುಳಿತ ನಿವಾಸಿಗಳು:

Advertisement

ಮಂಡಿಯುದ್ದ ನೀರು ಮನೆಗಳಿಗೆ ನುಗ್ಗಿದ್ದರಿಂದ ಆರ್‌ಸಿಸಿ ಮನೆ ಇರುವ ನಿವಾಸಿಗಳು ಮನೆಯ ಮೇಲೆ ಹತ್ತಿ ಕುಳಿತರೆ, ಆರ್‌ಸಿಸಿ ಇಲ್ಲದ ಮನೆಯವರು ಸಂಪೂರ್ಣ ತೊಂದರೆ ಅನುಭವಿಸಿದರು. ರಾತ್ರಿ ಇಡೀ ಊಟ, ನಿದ್ರೆ ಇಲ್ಲದೆ ಸಾಕಷ್ಟು ಸಂಕಷ್ಟ ಅನುಭವಿಸಿದರು. ಬೀಡಿ ಕಾರ್ಮಿಕರ ಕಾಲೋನಿಯ ಬಹುತೇಕ ಎಲ್ಲ ಮನೆಗಳಿಗೂ ನೀರು ನುಗ್ಗಿದೆ. ಮನೆ ಒಳಗಡೆ ಹಾಗೂ ಹೊರಗಡೆ ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದ ದೃಶ್ಯ ಕಂಡು ಬಂದಿತು.

ವಾಹನಗಳು ಮುಳುಗಡೆ:

ವಿವೇಕಾನಂದನಗರ ಹಾಗೂ ಬೀಡಿ ಕಾರ್ಮಿಕರ ಕಾಲೋನಿಯ ನಿವಾಸಿಗಳ ಮನೆಮುಂದೆ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಿಂದ ಮುಳುಗಡೆಯಾಗಿವೆ. ಅಲ್ಲದೆ, ಮನೆಯಲ್ಲಿದ್ದ ವಸ್ತುಗಳು ನೀರಿನಿಂದ ಜಲಾವೃತ್ತಗೊಂಡು ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಗಂಜಿ ಕೇಂದ್ರಕ್ಕೆ ರವಾನೆ :

ವಿವೇಕಾನಂದ ಬಡಾವಣೆ ಹಾಗೂ ಬೀಡಿ ಕಾರ್ಮಿಕರ ಕಾಲೋನಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುಂಞ ಅಹಮದ್ ನೇತೃತ್ವದಲ್ಲಿ ನಗರಸಭೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಿವಾಸಿಗಳನ್ನು ಬೋಟ್ ಮೂಲಕ ಗಂಜಿ ಕೇಂದ್ರ ಹಾಗೂ ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next