Advertisement

Heavy Rain: ಮಲೆನಾಡು, ಕರಾವಳಿಯಲ್ಲಿ ಮಳೆಗೆ ಜನ ತತ್ತರ

10:44 PM Jun 27, 2024 | Team Udayavani |

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಗುರುವಾರ ಹಳೇ ಮೈಸೂರು ಭಾಗ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯಾಗಿದೆ.

Advertisement

ಮಳೆ ಸಂಬಂಧಿ ಅವಘಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಭಾಗಮಂಡಲ ಭಾಗದಲ್ಲಿ ಸುರಿಯುತ್ತಿರುವ ನಿರಂತರ ವರ್ಷಧಾರೆಗೆ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ ನದಿ ತುಂಬಿ ಹರಿಯುತ್ತಿದೆ. ಶೃಂಗೇರಿ ಶಾರದಾ ಪೀಠದ ಬಳಿ ಇತಿಹಾಸ ಪ್ರಸಿದ್ಧ ಕಪ್ಪೆ ಶಂಕರ ಮುಳುಗಡೆಯಾಗಿದೆ. ಕಳಸ, ಕುದುರೆಮುಖ, ಬಾಳೆಹೊಳೆ, ಮಾಗುಂಡಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕಾರವಾರ ಸಮೀಪ ದೇವಭಾಗ ಕಡಲತೀರದಲ್ಲಿ ಕಡಲ್ಕೊರೆತಕ್ಕೆ ನಾಲ್ಕು ರೆಸಾರ್ಟ್‌ಗಳು ಬಲಿಯಾಗಿವೆ. ಕುಮಟಾದಲ್ಲಿ 2 ಮನೆ, ಹೊನ್ನಾವರದಲ್ಲಿ 2 ಮನೆ, ಒಂದು ಸರಕಾರಿ ಶಾಲೆಗೆ ಹಾನಿಯಾಗಿದೆ. ಹೊನ್ನಾವರ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬುಧವಾರ ರಾತ್ರಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದನ್ನು ಗುರುವಾರ ಮಧ್ಯಾಹ್ನದ ಹೊತ್ತಿಗೆ ಸರಿಪಡಿಸಲಾಗಿದೆ.

ಗಾಜನೂರು ಅಣೆಕಟ್ಟು ಭರ್ತಿ:

ರಾಜ್ಯದ ಅತಿ ಚಿಕ್ಕ ಜಲಾಶಯ ತುಂಗಾ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು ಗುರುವಾರ ಎರಡು ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು. 3.24 ಟಿಎಂಸಿ ಸಾಮರ್ಥ್ಯದ ಜಲಾಶಯವು ಪೂರ್ಣಮಟ್ಟ ತಲುಪಿದ್ದು 15 ದಿನಗಳಿಂದ ಪವರ್‌ ಹೌಸ್‌ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ. ಪವರ್‌ ಹೌಸ್‌ ಮೂಲಕ 5 ಸಾವಿರ ಕ್ಯೂಸೆಕ್‌ ವರೆಗೆ ನೀರು ಬಿಡಲಷ್ಟೇ ಸಾಧ್ಯತೆ ಇದ್ದು, ಗುರುವಾರ 5 ಸಾವಿರ ಕ್ಯೂಸೆಕ್‌ಗಿಂತ ಅಧಿ ಕ ಬಂದ ನೀರನ್ನು ಗೇಟ್‌ ಮೂಲಕ ಬಿಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next