Advertisement
ಕುಂದಾಪುರ, ಕೋಟೇಶ್ವರ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಕುಂಭಾಸಿ, ತಲ್ಲೂರು, ಹೆಮ್ಮಾಡಿ, ಹಾಲಾಡಿ, ಬಿದ್ಕಲ್‌ಕಟ್ಟೆ, ಕಾಳಾವರ ಸೇರಿದಂತೆ ಹಲವೆಡೆ ಶುಕ್ರವಾರ ಬೆಳಗ್ಗಿನ ಜಾವ 2.30ರಿಂದ 3.30 – 4 ಗಂಟೆಯವರೆಗೂ ಭಾರೀ ಮಳೆಯಾಗಿದೆ. ಇದಲ್ಲದೆ ನೇರಳಕಟ್ಟೆ, ಕರ್ಕುಂಜೆ, ಕಾವ್ರಾಡಿ, ಬಸ್ರೂರು, ಅಂಪಾರು, ಕಂಡಲೂರು, ಬಳ್ಕೂರು ಮತ್ತಿತರ ಕಡೆಗಳಲ್ಲಿ ಶುಕ್ರವಾರ ಮಧ್ಯಾಹ್ನವೂ ಉತ್ತಮ ಸುರಿದಿದೆ.
ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಕೊಡಪಾಡಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಪೈಪ್‌ಲೈನ್ ಸಂಪರ್ಕ ಕಲ್ಪಿಸಲು ಹೊಂಡ ತೋಡಿದ್ದು, ಪೈಪ್‌ಲೈನ್ ಹಾಕಿದರೂ, ಹೊಂಡ ಮುಚ್ಚದೇ ಮಣ್ಣು ಹಾಗೇ ಬಿಟ್ಟ ಪರಿಣಾಮ, ಈಗ ಆ ಮಣ್ಣೆಲ್ಲ ಕೊಚ್ಚಿಕೊಂಡು ಹೋಗಿ ಚರಂಡಿಯ ಮೋರಿಯಲ್ಲಿ ರಾಶಿ ಬಿದ್ದಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು, ಅಲ್ಲೇ ಸಮೀಪದ ಎವಿನ್ ಲೂವಿಸ್ ಅವರ ಅಂಗಡಿಯೊಳಗೆ ನುಗ್ಗಿದೆ. ಪಶು ಆಹಾರ ಸೇರಿದಂತೆ ಇನ್ನಿತರ ದಿನಸಿ ಉತ್ಪನ್ನಗಳು ನೀರು ನುಗ್ಗಿದ್ದರಿಂದ ಒದ್ದೆಯಾಗಿದೆ. ಈ ಅಂಗಡಿಯ ಹಿಂದಿರುವ ಮನೆಯ ಅಂಗಳಕ್ಕೂ ನೀರು ನುಗ್ಗಿ, ಮೆಟ್ಟಿಲಿನವರೆಗೂ ಬಂದಿದೆ. ಅಂಗಳದಲ್ಲಿ ಹಾಕಲಾದ ತೆಂಗಿನ ಕೊಬ್ಬರಿಯೂ ಒದ್ದೆಯಾಗಿದೆ. ಕೃಷಿಗೆ ತೊಂದರೆ
ಈಗ ಬಹುತೇಕ ಕಡೆಗಳಲ್ಲಿ ಭತ್ತದ ಕೃಷಿಯ ಸುಗ್ಗಿ ಹಂಗಾಮಿನ ಕಟಾವು ಕಾರ್ಯ ನಡೆಯುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಗದ್ದೆಗಳಲ್ಲಿ ಕೊಯ್ದಿಟ್ಟ ಭತ್ತದ ಪೈರಿಗೆ ಹಾನಿಯಾಗಿದೆ. ಇದಲ್ಲದೆ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯೂ ಒದ್ದೆಯಾಗಿದೆ.