Advertisement

ಕುಕ್ಕೆಯಲ್ಲಿ ಗುಡುಗು ಸಹಿತ ಭಾರೀ ಗಾಳಿ-ಮಳೆ: ಹಾರಿ ಹೋದ ಮನೆಗಳ ಮೇಲ್ಛಾವಣಿ !

11:22 PM Apr 29, 2023 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ವೇಳೆಗೆ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ಸಂದರ್ಭ ರಸ್ತೆಗೆ ಬೃಹತ್‌ ಮರ ಉರುಳಿದ, ಮನೆಯೊಂದರ ಮೇಲ್ಛಾವಣಿ ಹಾರಿಹೋದ ಘಟನೆಯೂ ಸಂಭವಿಸಿದೆ.

Advertisement

ಸುಬ್ರಹ್ಮಣ್ಯದಲ್ಲಿ ಸಂಜೆ ಸುಮಾರು ಒಂದು ತಾಸು ಕಾಲ ಮಳೆಯಾಗಿದೆ. ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ವಾಹನಗಳು ಓಡಾಡಲು ಪರದಾಡಬೇಕಾಯಿತು. ಕುಮಾರಧಾರಾ ಬಳಿ ಮುಖ್ಯರಸ್ತೆಗೆ ಅಡ್ಡ ಬೃಹತ್‌ ಮರವೊಂದು ಬಿದ್ದು ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನೂಚಿಲ ಕುಶಾಲಪ್ಪ ಅವರ ಮನೆಯ ಮೇಲ್ಛಾವಣಿ ಗಾಳಿ ಹಾರಿ ಹೋಗಿ ಸುಮಾರು 50 ಸಾವಿರ ರೂ. ನಷ್ಟ, ನೂಚಿಲದ ಭವಾನಿ ಕೆ.ಎಸ್‌.ಅವರ ಮನೆಗೆ ತೆಂಗಿನ ಮರ ಬಿದ್ದು ಅಂದಾಜು 30 ಸಾವಿರ ರೂ. ನಷ್ಟವಾಗಿದೆ.ಸುಬ್ರಹ್ಮಣ್ಯದ ವಿದ್ಯಾನಗರ ಪ್ರದೇಶದಲ್ಲಿ ಸುಮಾರು 7-8 ಬಾಡಿಗೆ ಮನೆಗಳ ಮೇಲ್ಛಾವಣಿಯ ಸಿಮೆಂಟ್‌ ಶೀಟು, ಹಂಚುಗಳು ಗಾಳಿಗೆ ಹಾರಿಹೋಗಿವೆ. ಹಲವೆಡೆ ವಿದ್ಯುತ್‌ ತಂತಿ, ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿ ಸಂಭವಿಸಿದೆ.

ಕುಮಾರಪರ್ವತ ಭಾಗದಲ್ಲಿ ಹಾಗೂ ಸುತಮುತ್ತಲ ಪ್ರದೇಶಗಳಲ್ಲಿ ಕೂಡ ಭಾರೀ ಗಾಳಿಯೊಂದಿಗೆ ಮಳೆ ಸುರಿಯಿತು. ದರ್ಪಣ ತೀರ್ಥದಲ್ಲೂ ಭಾರೀ ಮಳೆ ನೀರು ಹರಿದಿದೆ. ಸುಬ್ರಹ್ಮಣ್ಯ ಸುತ್ತಮುತ್ತಲಿನ ಸಣ್ಣ ಪುಟ್ಟ ಹಳ್ಳ, ತೋಡುಗಳು ಸ್ವಲ್ಪ ಮಟ್ಟಿಗೆ ತುಂಬಿ ಹರಿದಿವೆ.

ಸುಳ್ಯ ತಾಲೂಕಿನಲ್ಲಿ ಉತ್ತಮ ಮಳೆ
ಸುಳ್ಯ: ಸುಳ್ಯ ನಗರ ಸೇರಿದಂತೆ ತಾಲೂಕಿನ ಹಲವೆಡೆ ಶನಿವಾರ ಸಂಜೆ ವೇಳೆ ಒಂದು ತಾಸು ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಯಿತು. ಮಳೆ ನೀರು ರಸ್ತೆಯಲ್ಲೇ ಹರಿದಿದ್ದು, ಕೆಲವೆಡೆ ಕೆಸರು ನೀರು ಸಂಗ್ರಹಗೊಂಡು ವಾಹನಗಳ ಮೇಲೆ ಸಿಂಚನವಾಯಿತು.

Advertisement

ಸುಳ್ಯ ನಗರ, ಜಾಲೂÕರು, ಪೈಚಾರು, ಕನಕಮಜಲು, ಐವರ್ನಾಡು, ಬೆಳ್ಳಾರೆ, ನಿಂತಿಕಲ್ಲು, ಗುತ್ತಿಗಾರು, ಕಲ್ಮಡ್ಕ, ಅರಂತೋಡು, ಸಂಪಾಜೆ, ಕಲ್ಲುಗುಂಡಿ ಸೇರಿದಂತೆ ಅಲ್ಲಲ್ಲಿ ಮಳೆಯಾಯಿತು.

ಪಯಸ್ವಿನಿಯಲ್ಲಿ ಹರಿವು
ಪಯಸ್ವಿನಿಯಲ್ಲಿ ನೀರಿನ ಮಟ್ಟ ಇಳಿದ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಪಯಸ್ವಿನಿಯ ಜಾಕ್‌ವೆಲ್‌ ಬಳಿ ನೀರನ್ನು ಮಣ್ಣು ಹಾಕಿ ಹಿಡಿದಿಡಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಪಯಸ್ವಿನಿಯಲ್ಲಿ ನೀರಿನ ಮಟ್ಟ ಮತ್ತೆ ತುಸು ಏರಿಕೆಯಾಗಿರುವ ಕಾರಣ ಸಂಗ್ರಹದಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ. ಉತ್ತಮ ಮಳೆಯಿಂದಾಗಿ 20 – 25 ದಿನಗಳ ವರೆಗೆ ನಗರಕ್ಕೆ ನೀರಿನ ಸಮಸ್ಯೆ ದೂರವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next