ಕಾಪು: ಕಾಪು ತಾಲೂಕಿನಾದ್ಯಂತ ಮಳೆ ತೀವ್ರಗೊಂಡಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಕಾಪು, ಇನ್ನಂಜೆ, ಬೆಳಪು, ಪಣಿಯೂರು, ಕುಂಜೂರು, ಮಜೂರು, ಕರಂದಾಡಿ, ಉಳಿಯಾರು, ಜಲಂಚಾರು, ಪಾಂಗಾಳ ಸಹಿತ ವಿವಿಧೆಡೆ ನೆರೆಯ ಭೀತಿ ಎದುರಾಗಿದೆ.
ವಿವಿಧೆಡೆ ತಗ್ಗು ಪ್ರದೇಶಗಳಲ್ಲಿರುವ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ನೂರಾರು ಎಕರೆ ಭತ್ತದ ಗದ್ದೆಗೆ ಸಂಪೂರ್ಣ ಹಾನಿಯುಂಟಾಗಿದೆ. ಕರಂದಾಡಿ – ಕಲ್ಲುಗುಡ್ಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕಾಪು – ಇನ್ನಂಜೆ ರಸ್ತೆ ಸಂಚಾರಕ್ಕೂ ನೆರೆ ಅಡ್ಡಿಯಾಗಿದೆ. ಶಿರ್ವ, ಕಾಪು, ಕುಂಜೂರು ಸಹಿತ ವಿವಿಧ ಕಡೆಗಳಲ್ಲಿನ ನೆರೆ ಪೀಡಿತ ಪ್ರದೇಶಗಳಿಗೆ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸಹಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಜೂರು ಗ್ರಾಮದ ಕರಂದಾಡಿಯ ಪ್ರಭಾ ಪೂಜಾರಿ, ಸತೀಶ್ ಪೂಜಾರಿ, ಉಮೇಶ್ ಕುಲಾಲ್, ಜ್ಯೋತಿ ಎಂಬವರ ಮನೆಯ ಸುತ್ತಲೂ ನೆರೆ ನೀರು ಆವರಿಸಿದ್ದು ಪ್ರಭಾ ಪೂಜಾರಿ ಮತ್ತು ಅವರ ಮನೆಯವರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಬೆಳಪು ಗ್ರಾಮದ ಪಣಿಯೂರು ಮೂಡು ಬೈಲು ತೋಟ ಉಮೇಶ್ ಶೆಟ್ಟಿ ಅವರ ಮನೆ ಸಂಪೂರ್ಣ ಜಲಾವೃತಗೊಂಡಿದ್ದು ಅವರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ.
ಈ ಸಂದರ್ಭ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮಾತನಾಡಿ, ಕಾಪು ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಕಾಪು ತಾಲೂಕಿನಲ್ಲಿ ಇಲ್ಲಿವರೆಗೆ ಸುಮಾರು 15-20 ಮನೆಗಳಿಗೆ ಹಾನಿಯುಂಟಾಗಿದ್ದು ಎನ್‌ಡಿಆರ್‌ಎಫ್ ಅನುದಾನದಲ್ಲಿ ಪರಿಹಾರ ಧನ ವಿತರಿಸಲಾಗುವುದು. ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.