ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಕಾದಲವೇಣಿ ಕೆರೆಯು ದಶಕದ ಬಳಿಕ ತುಂಬಿ ಕೋಡಿ ಹರಿದಿದ್ದು ಇದರಿಂದಾಗಿ ಕೆರೆಯಂಗಳದಲ್ಲಿ ನಿರ್ಮಾಣ ವಾಗಿರುವ ಗ್ರಾ.ಪಂ ಕಾರ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ.
ಇಂದು ಶಾಲೆ ಆರಂಭವಾಗಿದ್ದು, ದಸರಾ ರಜೆ ದಿನ ಮುಗಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ, ಆದರೆ ಶಾಲಾ ಆವರಣದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಗ್ರಾ.ಪಂ ಕಾರ್ಯಾಲಯದ ಗೋಡೆಗಳ ಸಮೀಪಕ್ಕೆ ಬಂದಿರುವ ಕೆರೆ ನೀರಿನಿಂದಾಗಿ ಅಧಿಕಾರಿಗಳು ಆತಂಕದಲ್ಲಿದ್ದಾರೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಸುತ್ತಲೂ ನೀರು ತುಂಬಿರುವ ಕಾರಣ ಮತ್ತಷ್ಟು ಅಪಾಯ ಎದುರಾಗಿದೆ.
ಅತಿವೃಷ್ಟಿ ಮಳೆಯಿಂದ ರೈತಾಪಿ ವರ್ಗದ ಜನತೆ ಜಾನುವಾರುಗಳಿಗೆ ಮೇವು ಒದಗಿಸುವುದು ದೊಡ್ಡ ಸಾಹಸವಾಗಿದ್ದು, ನಿತ್ಯ ಸುರಿಯುತ್ತಿರುವ ಮಳೆಯ ಪರಿಣಾಮ ಬೆಳೆದು ನಿಂತಿರುವ ಮುಸುಕಿನ ಜೋಳ ಕಟಾವು ಮಾಡಿ ಜೋಳ ಮತ್ತು ಮೇವು ಸಂಗ್ರಹಿಸಲು ಅಡಚಣೆಯಾಗಿದ್ದು, ರೈತರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಮಂಗಳೂರು: ಬಸ್ ಚಕ್ರ ಹರಿದು ಬಾಲಕ ಸಾವು