Advertisement

ಗಂಗಾವತಿ: ಗಾಳಿ-ಮಳೆ; ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತ

09:48 AM Aug 02, 2022 | Team Udayavani |

ಗಂಗಾವತಿ: ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಗಿಡ ಮರಗಳು ವಾಲುತ್ತಿದ್ದು, ಇದರಿಂದ ರಸ್ತೆ ಅಕ್ಕ-ಪಕ್ಕದಲ್ಲಿರುವ ವಿದ್ಯುತ್ ಕಂಬ ಹಾಗೂ ತಂತಿಗಳ  ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ರಾತ್ರಿಯಿಡೀ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

Advertisement

ಸೋಮವಾರ ರಾತ್ರಿಯಿಂದ ಆರಂಭವಾಗಿರುವ ಮಳೆ ಮಂಗಳವಾರ ಬೆಳಿಗ್ಗೆ 9 ಗಂಟೆಯವರೆಗೂ ಮುಂದುವರಿದಿದೆ. ಇದರಿಂದ ಬಹುತೇಕ ತಗ್ಗು ಪ್ರದೇಶಗಳಿಗೆ ಮತ್ತು ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿರುವ ಗಿಡ ಮರಗಳ ಕೆಳಗಿನ ಮಣ್ಣು ಸರಿದು ಮರಗಳು ಧರೆ ಉರುಳುತ್ತಿವೆ.  ವಿದ್ಯುತ್ ಕಂಬ ತಂತಿಗಳು ನೆಲಕ್ಕೆ ಬಿದ್ದಿತ್ತು ಇದರಿಂದ ಜೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತ ಮಾಡಿ ಆಗುವ ಅಪಾಯವನ್ನು ತಪ್ಪಿಸಿದ್ದಾರೆ.

ಗಂಗಾವತಿ ನಗರದ 25ನೇ ವಾರ್ಡ್  ನೀಲಕಂಠೇಶ್ವರ ಕ್ಯಾಂಪ್ ನಲ್ಲಿ  ಮರಗಳು ನೆಲಕ್ಕೆ ಉರುಳಿದ್ದು, ಇದರಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬೆಳ್ಳಂಬೆಳಿಗ್ಗೆ ಜೆಸ್ಕಾಂ ಸಿಬ್ಬಂದಿಯವರು ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ ಗಿಡ ಮರಗಳನ್ನು ಕಡಿದು ವಿದ್ಯುತ್ ತಂತಿ ಮತ್ತು ಕಂಬಗಳ ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮಧ್ಯೆ ಮಳೆಯ ಕಾರಣಕ್ಕಾಗಿ ಜಿಲ್ಲಾಡಳಿತ ಅಂಗನವಾಡಿ, ಶಾಲಾ ಕಾಲೇಜುಗಳಿಗೆ 1 ದಿನದ ರಜೆ ಘೋಷಣೆ ಮಾಡಿದೆ .ಜನತೆ ಮಳೆಯಿಂದಾಗಿ ಮನೆಯಿಂದ ಹೊರಗೆ ಬರಲು ಆಗದ ವಾತಾವರಣವಿದೆ.

ಕಳೆದ  20 ದಿನಗಳಿಂದ ಪ್ರತಿನಿತ್ಯವೂ ಮಳೆ ಬರುತ್ತಿರುವುದರಿಂದ ಇಡೀ ಭೂ ಪ್ರದೇಶ ಜಲಮಯವಾಗಿದೆ. ಗಂಗಾವತಿ ನಗರದ 35ನೇ ವಾರ್ಡ್ ಗಳ ತಗ್ಗು ಪ್ರದೇಶದಲ್ಲಿ ಮತ್ತು ನೀಲಕಂಠೇಶ್ವರ ಕ್ಯಾಂಪ್ ನ ಸರ್ಕಾರಿ ಬಾಲಕಿಯರ ಶಾಲೆ, ಜೂನಿಯರ್ ಕಾಲೇಜ್ ಮತ್ತು  ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಭರ್ತಿಯಾಗಿದೆ .

ಅದರ ಜೊತೆಗೆ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಪುನಃ ಬೃಹತ್ ಗಾತ್ರದ ವಾಹನಗಳಿಗೆ ಕಂಪ್ಲಿ ಸೇತುವೆ ಮೇಲೆ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಗಂಗಾವತಿಯ ಮಧ್ಯದಲ್ಲಿರುವ ರಸ್ತೆಯನ್ನು ಬಳಸಿಕೊಂಡು ಬೃಹತ್ ವಾಹನಗಳು ಕಡೆಬಾಗಿಲು ಬುಕ್ಕಸಾಗರ ಸೇತುವೆ ಮುಖಾಂತರ ಹೊಸಪೇಟೆ ಮತ್ತು ಬಳ್ಳಾರಿಯನ್ನು ಸೇರುತ್ತಿವೆ.

Advertisement

ಕುಂಭ ದ್ರೋಣ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ತಗ್ಗು ಪ್ರದೇಶದಲ್ಲಿ ನೀರು ಬೃಹತ್ ಸಾಗರದಲ್ಲಿ ಹರಿಯುತ್ತಿದೆ .ನಗರಸಭೆ ಸಿಬ್ಬಂದಿಯವರು ಜೆಸ್ಕಾಂ ಸಿಬ್ಬಂದಿಯವರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಯವರು ಮಳೆಯ ನಡುವೆಯೂ ಜನವಸತಿ ಪ್ರದೇಶದಲ್ಲಿ ಆಗಿರುವ ಅನಾಹುತ ತಪ್ಪಿಸಲು ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next