Advertisement
ಮಂಗಳೂರು ನಗರದಲ್ಲಿ ಬೆಳಗ್ಗಿನ ವೇಳೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಉಳಿದಂತೆ ದಿನವಿಡೀ ಬಿಸಿಲು ಮತ್ತು ಉರಿ ಸೆಕೆಯಿಂದ ಕೂಡಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರವಿವಾರ ಮಂಗಳೂರಿನಲ್ಲಿ 34.5 ಡಿ.ಸೆ. ಗರಿಷ್ಠ ಮತ್ತು 27.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ತಾಲೂಕಿನ ವಿವಿಧೆಡೆ ರವಿವಾರ ಸಂಜೆ ಉತ್ತಮ ಮಳೆಯಾಗಿದೆ. ಚಾರ್ಮಾಡಿ, ಮುಂಡಾಜೆ, ಕಕ್ಕಿಂಜೆ, ನೆರಿಯ, ಉಜಿರೆ, ಧರ್ಮಸ್ಥಳ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ದಿಡುಪೆ ಮೊದಲಾದೆಡೆ ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಚಾರ್ಮಾಡಿ ಘಾಟಿ ಮೂಲಕ ಸಂಚರಿಸುವ ನೆರಿಯ ಗ್ರಾ.ಪಂ. ವ್ಯಾಪ್ತಿಯ ಬಾಂಜಾರು ಮಲೆ ರಸ್ತೆಗೆ ಒಂದೇ ಕಡೆ ಗಾಳಿಗೆ 4 ಮರಗಳು ಉರುಳಿ ಬಿದ್ದು ಸುಮಾರು 2 ತಾಸು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಯಿತು. ಸ್ಥಳೀಯರ ಸಹಾಯದಿಂದ ಮರ ತೆರವುಗೊಳಿಸಲಾಯಿತು. ಕಕ್ಕಿಂಜೆ ಮೆಸ್ಕಾಂ ವ್ಯಾಪ್ತಿಗೆ ಸೇರಿದ ಕಡಿರುದ್ಯಾವರ ಚಾರ್ಮಾಡಿ ಹಾಗೂ ಮುಂಡಾಜೆ, ತೋಟತ್ತಾಡಿಯಲ್ಲಿ 8 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.