ಚಿಕ್ಕಮಗಳೂರು: ಭಾರೀ ಮಳೆಯಿಂದ ಮುಳುಗಡೆಯಾದ ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊಸಸಿದ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ (62) ನಾಪತ್ತೆಯಾದ ವೃದ್ಧೆ.
ರೇವಮ್ಮ ಜಲಾವೃತಗೊಂಡಿರುವ ಅಡಿಕೆ ತೋಟವನ್ನು ನೋಡಲು ತೆರಳಿದ್ದಾರೆ. ತೋಟವನ್ನು ನೋಡಲು ಹೋಗಿದ್ದವರು ಇನ್ನು ಕೂಡ ವಾಪಾಸ್ ಆಗಿಲ್ಲ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತಾಯಿ ಹಳ್ಳದ ಬಳಿ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿದ್ದು,ತಾಯಿ ಹಳ್ಳದಲ್ಲಿ ವೃದ್ಧೆ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ:
ಚಿಕ್ಕಮಗಳೂರು: ವಿಪರೀತ ಮಳೆಯಾಗುತ್ತಿದ್ದರೂ, ಇತ್ತ ಪ್ರವಾಸಿಗರ ಹುಚ್ಚಾಟ ಮುಂದುವರೆದಿದೆ. ಚಾರ್ಮಾಡಿ ಘಾಟಿಯ ಡೇಂಜರ್ ಬಂಡೆ ಹತ್ತಿ ಪ್ರವಾಸಿಗರು ಫೋಟೋ, ವಿಡಿಯೋಗಾಗಿ ಪೋಸ್ ಕೊಡುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಕೆಲ ಪ್ರವಾಸಿಗರು ಸಲ್ಫಿಗೆ ಪೋಸ್ ಕೊಡಲು ಹೋಗಿ ಕೈ-ಕಾಲು ಮುರಿದುಕೊಂಡಿರುವ ಘಟನೆಗಳು ನಡೆದಿದೆ.
ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದು, ಪ್ರಾಣಕ್ಕೆ ಅಪಾಯ ತರುವ ಸಾಹಸವನ್ನು ಪ್ರವಾಸಿಗರು ಮಾಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.