ಭಟ್ಕಳ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಅನೇಕ ಕಡೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಬಯಲು ಪ್ರದೇಶದ ಗದ್ದೆಗಳು ಜಲಾವೃತವಾಗಿದೆ. ರೈತರು ಗದ್ದೆ ನೆಟ್ಟಿ ಮಾಡುವ ಕಾರ್ಯವನ್ನು ಮುಂದೂಡುವಂತಾಗಿದ್ದು ಬಹುತೇಕ ಗದ್ದೆ ಪ್ರದೇಶಗಳು ಜಲಾವೃತವಾಗಿದೆ.
ಭಟ್ಕಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಎರಡು ದಿನಗಳಿಂದ ತೋಟಗಳು ಜಲಾವೃತವಾಗಿದ್ದು, ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ಇನ್ನೂ ಮಳೆ ಹೀಗೇ ಮುಂದುವರಿದರೆ ಈಗಾಗಲೇ ನಾಟಿ ಮಾಡಿದ ರೈತರ ಗದ್ದೆಗಳಿಗೆ ಹಾನಿಯಾಗುವುದಲ್ಲದೇ, ನಾಟಿ ಮಾಡುವುದಕ್ಕೆ ಇರುವ ಗದ್ದೆಗಳಲ್ಲಿ ನಾಟಿ ಮಾಡುವುದು ವಿಳಂಬವಾಗುವುದರ ಜೊತೆಗೆ ಅಡಿಕೆ ತೋಟಗಳಿಗೆ ಕೊಳೆ ರೋಗದ ಬಾಧೆ ತಟ್ಟಲಿದೆ ಎನ್ನವುದು ರೈತರ ಆತಂಕವಾಗಿದೆ.
ಭಟ್ಕಳ ಗ್ರಾಮೀಣ ಪ್ರದೇಶದಲ್ಲಿ ರೈತರ ಗದ್ದೆ, ತೋಟಗಳ ಸಮಸ್ಯೆಯಾದರೆ ನಗರದ ಸಮಸ್ಯೆ ಬೇರೆಯೇ ಇದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ನಗರದ ಮುಖ್ಯ ರಸ್ತೆ ಸೇರಿದಂತೆ ಪ್ರತಿಯೊಂದು ರಸ್ತೆಯೂ ಕೂಡಾ ನೀರಿನಿಂದ ಆವೃತವಾಗಿ ಹಲವಾರು ಮನೆಗಳಿಗೆ ನೀರು ನುಗ್ಗಿದ ಕುರಿತು ವರದಿಯಾಗಿದೆ.
ಮುಖ್ಯ ರಸ್ತೆಯಲ್ಲಿಯೂ ಕೂಡಾ ನೀರು ಸರಾಗವಾಗಿ ಹರಿದು ಹೋಗದೇ ಇರುವುದರಿಂದ ಅನೇಕ ಕಡೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಂದು ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಶಂಶುದ್ಧೀನ್ ಸರ್ಕಲ್‌ನಲ್ಲಿ ನೀರು ತುಂಬಿಕೊಂಡಿದ್ದು ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಪ್ರತಿ ವರ್ಷವೂ ಇದೇ ಪರಿಸ್ಥಿತಿಯನ್ನು ನೋಡಿಕೊಂಡು ಇದಕ್ಕೆ ಪರಿಹಾರ ವದಗಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ರಂಗೀಕಟ್ಟೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಮಳೆ ನೀರು ಹೊಳೆಯಾಗಿ ಹರಿಯುತ್ತಿದ್ದು ಜನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇಂದು ಭಟ್ಕಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳ ಕಾರು ಇದೇ ಹೆದ್ದಾರಿಯ ನದಿಯನ್ನು ದಾಟಿ ಹೋಗಿದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪ್ರತಿ ವರ್ಷವೂ ಕೂಡಾ ತಾತ್ಕಾಲಿಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಡಿ ಎಂದೂ ಕೂಡಾ ಹೆದ್ದಾರಿ ಜವಾಬ್ದಾರಿಯನ್ನು ಹೊತ್ತ ಐ.ಆರ್.ಬಿ. ಕಂಪೆನಿ ಕ್ಯಾರೇ ಎನ್ನದಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ರಂಗಿನಕಟ್ಟೆಯಲ್ಲಿ ಹೆದ್ದಾರಿಯ ಮೇಲೆ ನೀರು ನಿಲ್ಲುವುದರಿಂದ ಭಟ್ಕಳದ ಮೂಲಕ ಹಾದು ಹೋಗುವ ವಿವಿಧ ರಾಜ್ಯಗಳ ವಾಹನ ಸವಾರರು ನಮ್ಮ ಈ ಪರಿಸ್ಥಿತಿಯನ್ನು ನೋಡುವಂತಾಗಿದ್ದು ಮಾತ್ರ ಇಲಾಕೆಗೆ ಒಂದು ಕಪ್ಪು ಚುಕ್ಕೆಯಾಗಿದೆ.
ಭಟ್ಕಳದಲ್ಲಿ ಇಲ್ಲಿಯ ತನಕ ಒಟ್ಟೂ 1167.8 ಮಿ.ಮಿ. ಮಳೆಯಾಗಿದ್ದು ದಿನಾಂಕ 27ರಂದು 13 ಮಿ.ಮಿ., 28 ರಂದು 27 ಮಿ.ಮಿ., 29 ರಂದು 146 ಮಿ.ಮಿ., 30 ರಂದು 69 ಮಿ.ಮಿ. ಮಳೆಯಾಗಿದೆ.