Advertisement

Bhatkala: ಭಾರಿ ಮಳೆಗೆ ಮುಳುಗಿದ ರಾಷ್ಟ್ರೀಯ ಹೆದ್ದಾರಿ… ವಾಹನ ಸಂಚಾರ ಅಸ್ತವ್ಯಸ್ತ

06:34 PM Jul 04, 2023 | Team Udayavani |

ಭಟ್ಕಳ: ತಾಲೂಕಿನಲ್ಲಿ ಮಳೆ ಇಲ್ಲ ಎಂದು ಕೊರಗುತ್ತಿರುವವರಿಗೆ ಭರ್ಜರಿ ಮಳೆಯ ಉಡುಗೊರೆ ದೊರೆತಿದೆ. ಮಂಗಳವಾರ ಮಧ್ಯಾಹ್ನ ಆರಂಭವಾದ ಮಳೆ ರಾತ್ರಿಯಾದರೂ ಮುಂದುವರಿದಿದ್ದು ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಮೂರು-ನಾಲ್ಕು ಕಡೆಗಳಲ್ಲಿ ನೀರು ನಿಂತು 2-3 ತಾಸುಗಳ ಕಾಲ ಸಂಚಾರ ವ್ಯತ್ಯಯವಾಯಿತು.

Advertisement

ಕಳೆದ ಅಗಸ್ಟ್ 1 ರಂದು ರಾತ್ರಿ ಸುರಿದ ಭಾರೀ ಮಳೆಯಿಂದ ಸಾವಿರಾರು ಮನೆಗಳಿಗೆ ನುಗ್ಗಿ ಹಾನಿಯಾಗಿದ್ದಲ್ಲದೇ ಮನೆಯೊಂದು ಕುಸಿದು ನಾಲ್ವರು ಜೀವ ಕಳೆದುಕೊಂಡಿದ್ದರು. ಹಳ್ಳ, ಕೊಳ್ಳಗಳು ತುಂಬಿ ಹರಿದ ಪರಿಣಾಮ ಅನೇಕ ತೋಟ, ಗದ್ದೆಗಳು ಕೊಚ್ಚಿ ಹೋಗಿದ್ದರೆ ಸಾವಿರಾರು ಮನೆಗಳ ಕಾಂಪೌಂಡ್ ಕುಸಿದು ಹಾನಿಯಾಗಿತ್ತು. ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಿ ಹೋಗಿದ್ದು ಅಪಾರ ಹಾನಿ ಸಂಭವಿಸಿತ್ತು.

ಮಂಗಳವಾರದ ಮಳೆಯೂ ಕೂಡಾ ಅದನ್ನೇ ನೆನಪಿಸುತ್ತಿದ್ದು ಅನೇಕ ಭಾಗಗಳಲ್ಲಿ ನೀರು ನುಗ್ಗಿ ಹಾನಿಯಾಗಿದ್ದರೆ, ನಗರದ ರಂಗೀಕಟ್ಟೆ, ಶಂಶುದ್ಧೀನ ಸರ್ಕಲ್, ಮಣ್ಕುಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡ ಬೇಕಾದ ಪ್ರಸಂಗ ಎದುರಾಯಿತು. ಮಧ್ಯಾಹ್ನದಿಂದಲೇ ರಂಗೀಕಟ್ಟೆಯಲ್ಲಿ ನೀರು ನಿಂತು ವಾಹನ ಸವಾರರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರೆ ಸಂಜೆಯಾಗುತ್ತಲೇ ಅಕ್ಷರಸಹ ವಾಹನ ಓಡಾಟವೇ ಕಷ್ಟಕರವಾಗಿತ್ತು. ಅನೇಕ ದ್ವಿಚಕ್ರ ವಾಹನಗಳು, ಲಘುವಾಹನಗಳು ಸೈಲೆನ್ಸ್ರ್ ಒಳಗೆ ನೀರು ಹೋದ ಕಾರಣ ನಡುನೀರಿನಲ್ಲಿಯೇ ಬಂದ್ ಬಿದ್ದು ಅಧ್ವಾನವಾದ ಪ್ರಸಂಗ ಕೂಡಾ ನಡೆಯಿತು.

Advertisement

ಐಆರ್.ಬಿ. ನಿರ್ಲಕ್ಷ: ಕಳೆದ ವರ್ಷವೇ ತೀವ್ರ ತೊಂದರೆಯಾಗಿದ್ದು ರಂಗೀಕಟ್ಟೆಯ ಬಳೀಯಲ್ಲಿ ನಿಂತ ನೀರು ಕೋಗ್ತಿ ಬೈಲಿನಲ್ಲಿರುವ ಅನೇಕ ಮನೆಗಳಿಗೆ ನುಗ್ಗಿ ಹಾನಿಯಾಗಿತ್ತು. ಸ್ವತಹ ಸಹಾಯಕ ಆಯುಕ್ತರು ಪರಿಶೀಲಿಸಿ ಐ.ಆರ್.ಬಿ. ಇಂಜಿನಿಯರ್‌ಗಳನ್ನು ಕರೆಯಿಸಿ ರಂಗೀಕಟ್ಟೆಯಲ್ಲಿರುವ ಮೋರಿಯನ್ನು ಸ್ವಚ್ಚ ಗೊಳಿಸುವುದು ಇಲ್ಲವೇ ಬದಲಾಯಿಸುವುದಕ್ಕೆ ಸೂಚಿಸಿದ್ದರು. ಎಲ್ಲದಕ್ಕೂ ತಲೆಯಾಡಿಸಿಕೊಂಡು ಹೋಗಿದ್ದ ಐ.ಆರ್.ಬಿ. ಅಧಿಕಾರಿಗಳು ನಂತರ ಈ ಕಡೆ ಸುಳಿದೇ ಇಲ್ಲ. ಈ ಬಾರಿ ಮತ್ತೆ ನೀರು ನುಗ್ಗಿದೆ. ಪಕ್ಕದಲ್ಲಿಯೇ ರೈಸ್ ಮಿಲ್ ಇದ್ದು ಸಾವಿರಾರು ಕ್ವಿಂಟಾಲ್ ಧವಸ-ಧಾನ್ಯಗಳು ಇದೆ. ಕಳೆದ ವರ್ಷವೊಂದರಲ್ಲಿಯೇ ಲಕ್ಷಾಂತರ ರೂಪಾಯಿ ಲುಕ್ಸಾನಾಗಿದ್ದು ಈ ವರ್ಷ ಇನ್ನೇನು ಕಾದಿದೆಯೋ ಎಂದು ಎದುರು ನೋಡುವ ಪ್ರಸಂಗ ಅವರದ್ದಾಗಿದೆ. ಇನ್ನು ಕೋಗ್ತಿ ಬೈಲಿನಲ್ಲಿರುವ ಮನೆಗಳವರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಕಳೆದ ವರ್ಷವಷ್ಟೇ ನೀರು ನುಗ್ಗಿ ಅಧ್ವಾನವನ್ನೇ ಸೃಷ್ಟಿಸಿದ್ದರೆ ಈ ಬಾರಿ ಮತ್ತೆ ನೀರು ನುಗ್ಗುವ ಭೀತಿ ಎದುರಾಗಿದೆ. ಇದೇ ಅವ್ಯವಸ್ಥೆ ಮಣ್ಕುಳಿಯಲ್ಲಿಯೂ ಇದ್ದು ಇಲ್ಲಿಯೂ ಕೂಡಾ ವೈಜ್ಞಾನಿಕ ಚರಂಡಿ, ರಸ್ತೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗುತ್ತಿದೆ. ಒಟ್ಟಾರೆ ಮಳೆ ಬಂತೆಂದರೆ ನಗರದ ಜನತೆ ಭಯದಲ್ಲಿಯೇ ಕಾಲ ಕಳೆಯಬೇಕಾದ ಪ್ರಸಂಗ ಇದೆ. ಇದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು ಯಾರಲ್ಲಿಯೂ ಉತ್ತರ ಇಲ್ಲವಾಗಿದೆ. ಪುರಸಭೆಯವರು ನಗರದಲ್ಲಿ ಚರಂಡಿ ಸ್ವಚ್ಛ ಮಾಡದೇ ಇರುವುದು ಒಂದು ಕಾರಣವಾದರೆ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ತೀವ್ರ ತೊಂದರೆಯಾಗುತ್ತಿದೆ ಎನ್ನುವುದು ಇನ್ನೊಂದು ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಭಾರೀ ಮಳೆ ಎಚ್ಚರಿಕೆ, ಜಿಲ್ಲಾಡಳಿತದಿಂದ ಹೈ-ಅಲರ್ಟ್ ಘೋಷಣೆ

 

Advertisement

Udayavani is now on Telegram. Click here to join our channel and stay updated with the latest news.

Next