ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧೆಡೆ ಬುಧವಾರ ಧಾರಾಕಾರ ಮಳೆಯಾಗಿದ್ದು, 18 ಮರಗಳು ಧರೆಗುರುಳಿವೆ. ಇನ್ನು ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ಗೆ ಸಿಲುಕಿ ವಾಹನ ಸವಾರರು ಪರದಾಡಿದರು.
ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬುಧವಾರ ರಾತ್ರಿ ಸಾಧಾರಣ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ರಾತ್ರಿ ಸುಮಾರು 7 ಗಂಟೆಗೆ ಪ್ರಾರಂಭವಾದ ಮಳೆ ಕೆಲವು ಹೊತ್ತು ನಿರಂತರವಾಗಿ ಸುರಿದಿದೆ. ಬಸವೇಶ್ವರನಗರ, ಆರ್.ಟಿ. ನಗರ, ಬನಶಂಕರಿ, ನಾಗರಬಾವಿ ಸೇರಿದಂತೆ 18 ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವಿವಿಧೆಡೆ ಸಂಚಾರ ದಟ್ಟಣೆ: ಬನಶಂಕರಿ, ಯಲಚೇನಹಳ್ಳಿ, ಮಹಾಲಕ್ಷ್ಮೀ ಲೇಔಟ್, ಕೋರಮಂಗಲ, ಕೆ.ಆರ್. ಸರ್ಕಲ್, ಮಾಗಡಿ ರಸ್ತೆ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್‌ಹಾಲ್, ಕೆ.ಆರ್. ಮಾರ್ಕೆಟ್ , ಕಾರ್ಪೊರೆಷನ್, ಶಿವಾಜಿನಗರ, ಯಲಹಂಕ, ಮಾರತ್ತಹಳ್ಳಿ, ಬೆಳ್ಳಂದೂರು, ಎಂಜಿ ರಸ್ತೆ, ಬ್ರಿಗೆಡ್ ರಸ್ತೆ, ಮೈಸೂರು ರಸ್ತೆ, ಮಡಿವಾಳ, ವಿಲ್ಸನ್ ಗಾರ್ಡನ್, ಪೀಣ್ಯದಲ್ಲಿ ರಸ್ತೆ ಮೇಲೆ ನೀರು ನಿಂತ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಕೆರೆಯಂತಾದ ರಸ್ತೆಗಳು: ಚರಂಡಿಗಳೆಲ್ಲ ತುಂಬಿ ಹರಿದವು. ಪ್ರಮುಖ ರಸ್ತೆಗಳಲ್ಲಿರುವ ಮರದ ಕೊಂಬೆಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು. ಮ್ಯಾನ್‌ಹೋಲ್ ಉಕ್ಕಿ ಹರಿದು ಪ್ರಮುಖ ರಸ್ತೆಗಳ ಮೇಲೆಯೇ ಕೊಳಚೆನೀರು ಹರಿದು ಕೆರೆಯಂತಾಗಿರುವುದು ಕಂಡು ಬಂತು. ಇನ್ನು ರಾಜರಾಜೇಶ್ವರಿ ನಗರ, ಯಲಹಂಕ, ಉತ್ತರಹಳ್ಳಿ, ಚಾಮರಾಜಪೇಟೆ, ಹಲಹಂಕ ವಿದ್ಯಾರಣ್ಯಪುರ, ಜಕ್ಕಸಂದ್ರ, ಕೊಡಿಗೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ, ಪೀಣ್ಯ, ದೊಡ್ಡಗುಬ್ಬಿಯಲ್ಲಿ ಹೆಚ್ಚಿನ ಮಳೆ ಸುರಿದಿದೆ.
ದುರಸ್ತಿ ಕಾರ್ಯಕ್ಕೆ ತೊಡಕು: ಕಳೆದ ಶನಿವಾರ, ಭಾನುವಾರ ಸುರಿದ ದಾಖಲೆ ಪ್ರಮಾಣದ ಮಳೆಯಿಂದಾಗಿ ಧರೆಗುರುಳಿದ್ದ 400ಕ್ಕೂ ಅಧಿಕ ಮರಗಳು, ನೂರಾರು ವಿದ್ಯುತ್ ಕಂಬಗಳ ದುರಸ್ತಿಕಾರ್ಯ ನಡೆಯುತ್ತಿದೆ. ಇದೀಗ ಮತ್ತೆ ಮಳೆಯಿಂದ ಹತ್ತಾರು ವಿದ್ಯುತ್ ಕಂಬಗಳಿಗೆ ಹಾನಿಗೀಡಾಗಿದೆ. ಹೀಗಾಗಿ ದುರಸ್ತಿ ಕಾರ್ಯಗಳಿಗೂ ತೊಡಕಾಗಿದೆ. ವಿದ್ಯುತ್ ಪೂರೈಕೆ ವ್ಯತ್ಯಯವಾಗಿ ಕೆಲ ಬಡಾವಣೆ ನಿವಾಸಿಗಳು ರಾತ್ರಿ ಕತ್ತಲಲ್ಲೇ ಕಳೆಯಬೇಕಾಯಿತು.
ನಗರದಲ್ಲಿ ಇಂದು, ನಾಳೆಯೂ ಮಳೆ ಸಾಧ್ಯತೆ : ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯು ಜೂನ್ 7ರ ವರೆಗೂ ಮುಂದುವರಿಯಲಿದೆ. ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣ ದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಡಿ.ಸೆ. ಹಾಗೂ 23 ಡಿ.ಸೆ. ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿದಿದೆ.
ದೊಡ್ಡಗುಬ್ಬಿಯಲ್ಲಿ 5.5 ಸೆಂ.ಮೀ. ಮಳೆ ದೊಡ್ಡಗುಬ್ಬಿ-5.5 ಸೆಂ.ಮೀ., ಚುಂಚನ ಕುಪ್ಪೆ- 4, ಚೆನ್ನೇನಹಳ್ಳಿ-4.3, ಎಚ್. ಗೊಲ್ಲಹಳ್ಳಿ-2.9, ಕೆಂಗೇರಿ-2.9, ಹೆಮ್ಮಿàಗೆ ಪುರ-2.6, ಪೀಣ್ಯ ಕೈಗಾರಿಕಾ ಪ್ರದೇಶ-2.4, ಹಂಪಿನಗರ-2.3, ಹೆರೋಹಳ್ಳಿ-2.2, ನಾಯಂಡಹಳ್ಳಿ-2.1, ಮಾರುತಿ ಮಂದಿರ-2.0, ಪೀಣ್ಯ-2.4, ಆರ್.ಆರ್ ನಗರ-2.9 ಸೆಂ.ಮೀ. ಮಳೆಯಾಗಿದೆ.