ಗುವಾಹಾಟಿ: ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದು ಕೊಂಡಿದೆ. ರಾಜ್ಯದ 35 ಜಿಲ್ಲೆಗಳಲ್ಲಿ 33 ಜಿಲ್ಲೆಗಳು ಜಲಾವೃತವಾಗಿದ್ದು, ಒಟ್ಟು 43 ಲಕ್ಷ ಜನರು ಪ್ರವಾಹದ ತೊಂದರೆಗಳಿಗೆ ಈಡಾಗಿದ್ದಾರೆ. ಹಲವಾರು ಕಡೆ ಸಂಭವಿಸಿರುವ ಭೂ ಕುಸಿತದಿಂದಾಗಿ ಸೋಮವಾರದಂದು 8 ಜನ ಸಾವನ್ನಪ್ಪಿದ್ದಾರೆ.
ಜಲಾವೃತವಾಗಿರುವ ಹಲವಾರು ಪ್ರದೇಶಗಳಲ್ಲಿ ಆಹಾರ ಕಿಟ್‌ಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಸರಬರಾಜು ಮಾಡುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆದೇಶಿಸಿದ್ದಾರೆ.
ಸೋಮವಾರ ಮಧ್ಯಾಹ್ನ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನ ಸಭೆ ನಡೆಸಿದ ಅವರು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಬೇಕು, ಪುನರ್ವಸತಿ ಕೇಂದ್ರಗಳಲ್ಲಿ ಸೂಕ್ತ ರಕ್ಷಣೆ, ಆಹಾರ ಸಿಗಬೇಕು, ಜಲಾವೃತ ಪ್ರದೇಶಗಳಲ್ಲಿ ಇನ್ನೂ ಸಿಲುಕಿರುವ ಜನರಿಗೆ ಆಹಾರ ಪೊಟ್ಟಣಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ಅಲ್ಲದೆ ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿರುವ ಜನರ ಆರೋಗ್ಯ ತಪಾಸಣೆ ಪ್ರತಿದಿನವೂ ನಡೆಯಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿ ರುವ ಅವರು, ಪ್ರವಾಹ ಸಂಬಂಧಿತ ಅನಾರೋಗ್ಯ ಪ್ರಕರಣಗಳಿಗೆ ಚಿಕಿತ್ಸೆ, ಶುಶ್ರೂಷೆಗಾಗಿ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇನ್ನು, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಂಬಂಧಿಸಿದ ತಮ್ಮ ಸಂಪುಟದ ಎಲ್ಲ ಸಚಿವರು ತಮ್ಮ ತವರಿಗೆ ತೆರಳಿ ಅಲ್ಲಿನ ಪ್ರವಾಹ ಪೀಡಿತ ಜನರ ಕಷ್ಟಕಾರ್ಪಣ್ಯಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಅವರು ಮೌಖೀಕ ಆದೇಶ ನೀಡಿದ್ದಾರೆ.
ಚಿರಾಪುಂಜಿ -24 ಗಂಟೆಯಲ್ಲಿ 252 ಮಿ.ಮೀ. ಮಳೆ!: ಜೂ. 19ರಂದು ಚಿರಾಪುಂಜಿಯಲ್ಲಿ 24 ಗಂಟೆಗಳಲ್ಲಿ 252.6 ಮಿ.ಮೀ.ನಷ್ಟು ಮಳೆಯಾಗಿದ್ದು ಇದು ಹೊಸ ದಾಖಲೆಯಾಗಿದೆ. ಕಳೆದ 8 ದಿನಗಳಿಂದಲೂ ಇಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಎಂಟು ದಿನಗಳಲ್ಲಿ 3,539.9 ಮಿ.ಮೀ. ಮಳೆ ಬಿದ್ದಿದೆ.
ಮವಿÕನ್‌ರಾಮ್ ಮತ್ತೂಂದು ದಾಖಲೆ: ಮೇಘಾಲಯದ ಮವಿÕನ್‌ರಾಮ್ ಪ್ರಾಂತದಲ್ಲಿ ಶನಿವಾರ-ರವಿವಾರ ನಡುವಿನ 24 ಗಂಟೆಗಳಲ್ಲಿ 1,003.6 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ತನ್ನ 83 ವರ್ಷಗಳ ದಾಖಲೆಯನ್ನು ಈ ಪ್ರಾಂತ ಮುರಿದಿದೆ.
ಕೊಚ್ಚಿಹೋದ ಇಬ್ಬರು ಪೊಲೀಸರು :
ಪ್ರವಾಹದಲ್ಲಿ ಸಿಲುಕಿದ ಇಬ್ಬರನ್ನು ರಕ್ಷಣೆ ಮಾಡುವ ಸಲುವಾಗಿ ಹೋಗಿದ್ದ ಇಬ್ಬರು ಪೊಲೀಸ್ ಸಿಬಂದಿ ತಾವೇ ಪ್ರವಾಹಕ್ಕೆ ಬಲಿಯಾಗಿರುವ ಘಟನೆ ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಜಲಾವೃತಗೊಂಡ ಪ್ರದೇಶದಲ್ಲಿನ ಜನರನ್ನು ಕಾಪಾಡಲು ಹೋಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕಾಮು³ರ್ ಪೊಲೀಸ್ ಠಾಣಾ ಅಧಿಕಾರಿ ಸಮ್ಮುಜಲ್ ಕಾಕೋಟಿ ಹಾಗೂ ಮತ್ತೂಬ್ಬ ಪೇದೆ ಮೃತರು.