ಹೊಸದಿಲ್ಲಿ: ದೇಶದ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಮುಂದಿನ ಎರಡೂ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ಪ್ರವಾಹ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಮಳೆ ಕಾರಣ ಜುಲೈ 19ರಿಂದ 21ರ ವರೆಗೆ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯದಲ್ಲಿ ರೆಡ್ ಅಲರ್ಟ್, ಅರುಣಾಚಲ ಪ್ರದೇಶದಲ್ಲಿ ಜು.19, 20 ರಂದು ರೆಡ್ ಅಲರ್ಟ್, ಜು.21ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಏತನ್ಮಧ್ಯೆ, ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ, ದಿಲ್ಲಿ, ಹರ್ಯಾಣ, ಪಂಜಾಬ್‌ನಲ್ಲಿ ಜು.19, 20 ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಅಸ್ಸಾಂನ ಬಹುತೇಕ ಜಿಲ್ಲೆಗಳು ಪ್ರವಾಹದಿಂದ ತೊಯ್ದು ಹೋಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 102ಕ್ಕೆ ಏರಿಕೆಯಾಗಿದ್ದು, ಈ ಪೈಕಿ 26 ಮಂದಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ.
ಈ ವರ್ಷ ಶೇ.21.2 ಹೆಚ್ಚು ಬಿತ್ತನೆ: ಬಹುತೇಕ ವಲಯಗಳನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕೋವಿಡ್, ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿಲ್ಲ. ಈ ವರ್ಷ ಮುಂಗಾರು ಉತ್ತಮವಾಗಿದ್ದು, ದೇಶಾ ದ್ಯಂತ ಜುಲೈ 17ರ ವರೆಗೆ 6.92 ಕೋಟಿ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿಗಿಂತ ಈ ವರ್ಷ ಶೇ.21.2ರಷ್ಟು ಹೆಚ್ಚು ಬಿತ್ತನೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಮುಂಗಾರು ಪ್ರವೇಶಿಸುತ್ತಿದ್ದಂತೆ ರೈತರು ಬಿತ್ತನೆ ಆರಂಭಿಸುವರು. ಸಾಮಾನ್ಯವಾಗಿ ಜು.1ರಿಂದ ನಡೆಯುವ ಮುಂಗಾರು ಬಿತ್ತನೆ ಕಾರ್ಯ ಜುಲೈ ಹಾಗೂ ಆಗಸ್ಟ್ ಮೊದಲ ವಾರದವರೆಗೆ ಮುಂದುವರಿಯಲಿದೆ. ಈ ವರ್ಷ 1.68 ಕೋಟಿ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.42 ಕೋಟಿ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ಹತ್ತಿ. 1.13 ಕೋಟಿ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ 96 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿತ್ತು. ಈ ವರ್ಷ 1.55 ಕೋಟಿ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬಿತ್ತನೆಯಾಗಿದೆ. ಸೋಯಾಬಿನ್ ಬಿತ್ತನೆಯು ಈ ವರ್ಷ ಶೇ.15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಬ್ಬು ಬಿತ್ತನೆ 50 ಲಕ್ಷದಿಂದ 51 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ರಸ್ತೆಯಲ್ಲೇ ನಿದ್ರೆಗೆ ಜಾರಿದ ಘೇಂಡಾಮೃಗ!
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ವಲಯದಲ್ಲಿ ಪ್ರವಾಹದಿಂದ 7 ಘೇಂಡಾಮೃಗ ಸೇರಿದಂತೆ ನೂರಾರು ವನ್ಯಜೀವಿಗಳು ಮೃತಪಟ್ಟಿವೆ. ಈ ನಡುವೆ, ಕಾಜಿರಂಗ ಬಳಿ ರಸ್ತೆಯಲ್ಲೇ ಘೇಂಡಾಮೃಗ ನಿದ್ರಿಸುತ್ತಿರುವುದು ಕಂಡು ಬಂದಿದೆ. ಈ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿವೆ. ಆದರೂ ಯಾವುದೇ ವಿಚಲಿತವಾಗದೇ ಅರಾಮವಾಗಿ ಘೇಂಡಾಮೃಗ ನಿದ್ರೆಗೆ ಜಾರಿರುವುದು ಕಂಡು ಬಂತು.