Advertisement
ಪಕ್ಕದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿದಿರುವುದರಿಂದ ಜಿಲ್ಲೆಯಲ್ಲಿನ ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲಿಯೇ ಹರಿಯುತ್ತಿದ್ದು, 50ಕ್ಕೂ ಹೆಚ್ಚು ಗ್ರಾಮಗಳು ಎಷ್ಟೋತ್ತಿಗೂ ನೆರೆ ಎದುರಿಸುವ ಆತಂಕದಲ್ಲಿವೆ. ಕೆಲವು ಕಡೆಗಳಲ್ಲಿ ನೀರು ಗ್ರಾಮಗಳ ಒಳಗೂ ಪ್ರವೇಶಿ ಜನಜೀವನ ತತ್ತರಿಸುವಂತೆ ಮಾಡಿದೆ. ಅಧಿಕಾರಿಗಳು ನೆರೆ ಆತಂಕ ಇರುವ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳತ್ತ ಹೋಗಲು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವರೆಗೆ 18 ಇದ್ದ ಪರಿಹಾರ ಕೇಂದ್ರಗಳ ಸಂಖ್ಯೆ 77ಕ್ಕೇರಿದೆ. 999 ಮನೆಗಳಿಗೆ ಹಾನಿಯಾಗಿದ್ದು ಐದು ಕುರಿಗಳು, ಒಂದು ಹಸು ಸಾವನ್ನಪ್ಪಿದೆ.
Related Articles
Advertisement
ಹಾವೇರಿ ತಾಲೂಕಿನ ದೇವಿಹೊಸೂರು, ವರದಾಹಳ್ಳಿ, ಕಬ್ಬೂರ, ಕೋಣನತಂಬಿಗಿ, ಕೆಸರಳ್ಳಿ, ಮಣ್ಣೂರ, ಚನ್ನೂರ, ಕರ್ಜಗಿ, ಕಲಕೋಟಿ, ಹಾಲಗಿ, ಮರೋಳ, ಕೋಡಬಾಳ, ಗುಯಿಲಗುಂದಿ, ಕೋಣನತಂಬಿಗಿ, ಸೋಮಲಾಪುರ, ಮೆಡ್ಲೇರಿ, ಶಿಗ್ಗಾವಿ ತಾಲೂಕು ಮುಗಳಿ ಹಾಗೂ ಸುತ್ತಲಿನ ಹಳ್ಳಿಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿವೆ. ಗುತ್ತಲ ಸಮೀಪದ ನೀರಲಗಿ ಗ್ರಾಮದಲ್ಲಿ ಕೆಪಿಟಿಸಿಎಲ್ ಗ್ರಿಡ್ ನೀರಿನಲ್ಲಿ ಅರ್ಧ ಮುಳುಗಿದೆ. ಬೆಳವಗಿ-ನೀರಲಗಿ ನಡುವಿನ ಸೇತುವೆ ಮುಳುಗಿದೆ. ಹಾನಗಲ್ಲ ತಾಲೂಕಿನ ಮಂತಗಿ ರಸ್ತೆ ಜಲಾವೃತಗೊಂಡಿದೆ. ಬಾಳಂಬೀಡ-ಲಕಮಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಾರನಬೀಡ-ಹರವಿ ರಸ್ತೆ ಮಧ್ಯೆ ಇರುವ ಕೊರವಿ ಹಳ್ಳ ಉಕ್ಕಿ ಹರಿಯುತ್ತಿದ್ದು ಸಂಚಾರ ಬಂದ್ ಆಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಕಡಿತಗೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ 26 ಬಸ್ ಮಾರ್ಗಗಳನ್ನು ಸ್ಥಗಿತಗೊಳಿಸಿದೆ.
ಎಲ್ಲೆಲ್ಲಿ ಸಂಪರ್ಕ ಕಟ್?: ಹಾನಗಲ್ಲ ತಾಲೂಕಿನಲ್ಲಿ ಗೆಜ್ಜೆಹಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಿಳವಳ್ಳಿ ಭಾಗದ ಲಕಮಾಪುರ ರಸ್ತೆ, ಹಿರೆಹಳ್ಳ ಮೇಲೆ ನೀರು ಹರಿಯುತ್ತಿದೆ. ಕಳಲಕೊಂಡ, ಅಂದಾನಿಕೊಪ್ಪ ರಸ್ತೆ, ಕನವಳ್ಳಿ ಬಳಿಯ ಬೂದಗಟ್ಟಿ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಸವಣೂರು ತಾಲೂಕಿನ ಮನ್ನಂಗಿ, ಮೆಳ್ಳಾಗಟ್ಟಿ ಜಲಾವೃತವಾಗಿವೆ. ತಿಳವಳ್ಳಿ ಬಳಿಯ ಹೆರೂರು ಹಳ್ಳ ಕೋಡಿ ಬಿದ್ದು ರಸ್ತೆ ಮೇಲೆ ಹರಿದಿದೆ. ಸೋಮಸಾಗರದ ಆಣೆ ಬಳಿ ಕೆರೆ ಕೋಡಿ ಬಿದ್ದು ರಸ್ತೆ ಮೇಲೆ ನೀರು ಹರಿಯುತ್ತಿದೆ. ಯಲವಿಗಿ ಕೆಳಸೇತುವೆಯಲ್ಲಿ ನೀರು ನುಗ್ಗಿದೆ. ಹಿರೇಕೆರೂರು ತಾಲೂಕಿನ ಮತ್ತೂರು ಕೆರೆ ತುಂಬಿ ಹರಿಯುತ್ತಿದೆ. ತಿಪ್ಪಾಯಿಕೊಪ್ಪ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಹಾಲಗಿ-ಮರೋಳ ಬಳಿ ಸೇತುವೆ, ಅಂತರವಳ್ಳಿ ರಸ್ತೆ, ಚಿಕ್ಕಮಾಗನೂರು-ಹಿರೇಮಾಗನೂರು ರಸ್ತೆ, ಮುಷ್ಟೂರು-ಕೃಷ್ಣಾಪುರ, ಚೌಡಯ್ಯದಾನಪುರ ರಸ್ತೆ, ಡಂಬರಮತ್ತೂರ, ಅಂದಲಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.
ಶನಿವಾರ-ರವಿವಾರ ರಜೆ ಇಲ್ಲ: ಡಿಸಿ
ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಗಳ ಸೇವೆ ಅವಶ್ಯಕತೆ ಇದೆ. ಆದ್ದರಿಂದ ಆ. 10ರ ಶನಿವಾರ ಮತ್ತು 11ರ ರವಿವಾರ ಎರಡೂ ದಿನಗಳಂದು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಸಾರ್ವಜನಿಕ ರಜೆ ಉಪಯೋಗಸಿಕೊಳ್ಳದೇ ಕೇಂದ್ರ ಸ್ಥಾನದಲ್ಲಿದ್ದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲ ನದಿ, ಹಳ್ಳ, ಕೆರೆ ಕಟ್ಟೆಗಳು ಭರ್ತಿಯಾಗಿ ಜೀವಹಾನಿ, ಜಾನುವಾರು ಹಾನಿ, ಮನೆಹಾನಿ ಸೇರಿದಂತೆ ರೈತರ ಬೆಳೆಗಳು ಸಂಪೂರ್ಣ ನಾಶವಾಗಿರುತ್ತದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಎರಡು ಮೂರು ದಿನ ವರೆಗೆ ಇದೇ ರೀತಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದ್ದು, ಮಳೆ ಹಾನಿಯ ಬಗ್ಗೆ ರಜಾ ದಿವಸಗಳಲ್ಲೂ ಸಹಿತ ಮೇಲಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ 24 ಗಂಟೆ ವರದಿ ಸಲ್ಲಿಸಬೇಕಾಗಿದೆ. ಕಾರಣ ಆ.10 ಮತ್ತು 11 ರಂದು ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈಜಿಕೊಂಡು ಹೋಗಿ ಪೂಜೆ:
ವರದಾ ನದಿ ನೆರೆಯಿಂದ ಕಳೆದೆರಡು ದಿನಗಳಿಂದ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠವು ಸಂಪೂರ್ಣ ಜಲಾವೃತವಾಗಿದ್ದು, ದೇವಸ್ಥಾನದ ಒಳಗೂ ನೀರು ತುಂಬಿದೆ. ಶುಕ್ರವಾರ ಅರ್ಚಕರು ಈಜಿಕೊಂಡು ಮಠದೊಳಗೆ ಹೋಗಿ ಸ್ವಾಮಿಯ ಪೂಜೆ ಮಾಡಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
•ಎಚ್.ಕೆ. ನಟರಾಜ