ಬಂಗಾರಪೇಟೆ: ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂ ದಾಗಿ ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದ ಆಲೂ ಗಡ್ಡೆ ಬೆಳೆಗಾರರಿಗೆ ಅಂಗಮಾರಿ ರೋಗ ತೀವ್ರ ಸಂಕಷ್ಟ ತಂದೊಡ್ಡಿದೆ. ಬೇಡಿಕೆ ಹಾಗೂ ಬೆಲೆ ಇದ್ದರೂ ಬೆಳೆ ನಾಶದಿಂದ ನಷ್ಟ ಅನುಭವಿಸು ವಂತಾಗಿದೆ. ತಾಲೂಕಿನಲ್ಲಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ. ಬಂಡವಾಳ ಹಾಕಿ ಆಲೂಗಡ್ಡೆ ಬೆಳೆದಿದ್ದಾರೆ. ಬೆಳೆಯೂ ಉತ್ತಮವಾಗಿ ಬಂದಿದೆ.
ಕೈತುಂಬಾ ಹಣ ಗಳಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ರೈತರಿಗೆ ಧಾರಾಕಾರ ಮಳೆ ತಣ್ಣೀರು ಎರಚಿದೆ. ಹಲವು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯು ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರ ಆಸೆಯನ್ನು ಹುಸಿಗೊಳಿಸಿದೆ. ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಆಲೂಗಡ್ಡೆ ಬೆಳೆ ರೋಗಕ್ಕೆ ತುತ್ತಾಗಿದೆ. ಉತ್ತಮ ಇಳುವರಿಯಿಂದ ಕೂಡಿದ್ದ ಬೆಳೆ ಸಂಪೂರ್ಣವಾಗಿ ಒಣಗಿಹೋಗಿದ್ದು, ಆಲೂ ಗಡ್ಡೆ ನೆಲದಲ್ಲಿಯೇ ಕೊಳೆತುಹೋಗಿದೆ.
ಬೆಲೆ ಇದ್ದರೂ ಬೆಳೆ ಇಲ್ಲ: ಮಳೆ ಬರುವ ಮುನ್ನ ಆಲೂಗಡ್ಡೆ 1000 ರೂ.ನಿಂದ 1200 ರೂ.ಗೆ ಮಾರಾಟವಾಗುತ್ತಿತ್ತು. ಈಗ ಉತ್ತಮ ಬೆಲೆ ಇರುವ ಸಂದರ್ಭದಲ್ಲಿ ಮಳೆ ಬಂದು ರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದೆ. ರೈತರು ಬಿತ್ತನೆ ಆಲೂಗಡ್ಡೆ ಒಂದು ಮೂಟೆಗೆ 2500 ರೂ. ಗೂ ಹೆಚ್ಚು ಹಣ ನೀಡಿ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಪ್ರತಿ ಎಕರೆಗೆ ಒಂದು ಲಕ್ಷ ರೂ.ವರೆಗೂ ಖರ್ಚು ಮಾಡಲಾಗಿತ್ತು.
ಇತ್ತೀಚೆಗೆ ನಿರಂತರ ವಾಗಿ ಸುರಿಯುತ್ತಿರುವ ಅಧಿಕ ಮಳೆಯಿಂ ದಾಗಿ ಅಂಗಮಾರಿ ರೋಗ ವಕ್ಕರಿಸಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆಗೆ ಹಾಕಿದ ಬಂಡ ವಾಳ ವಾಪಸ್ ಪಡೆಯಲು ಕಷ್ಟವಾಗಿದೆ. ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ರೈತರು ತೀವ್ರ ನಷ್ಟಕ್ಕೆ ಒಳಗಾಗುವಂತೆ ಆಗಿದೆ. ಸರ್ಕಾರ ಆದಷ್ಟು ಬೇಗ ಹೆಚ್ಚಿನ ಪರಿಹಾರವನ್ನು ನೀಡುವ ಮೂಲಕ ಅನ್ನದಾತರ ನೆರವಿಗೆ ಬರಬೇಕಿದೆ.
“ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ಆಲೂಗಡ್ಡೆ ಬೆಳೆಗೆ ತೇವಾಂಶ ಹಚ್ಚಾಗಿ ಅಂಗಮಾರಿ ತಗುಲಿದೆ. 10 ಎಕರೆ ಪ್ರದೇಶದಲ್ಲಿ ಸಾಲಸೋಲ ಮಾಡಿ 10 ಲಕ್ಷ ರೂ. ಬಂಡವಾಳ ಹಾಕಿ ಬೆಳೆ ಬೆಳೆಯ ಲಾಗಿತ್ತು. ಮಳೆ ಹೆಚ್ಚಾಗಿ, ಎಷ್ಟೇ ಕೀಟನಾಶಕ ಸಿಂಪಡಣೆ ಮಾಡಿ ದರೂ ರೋಗ ಹತೋಟಿಗೆ ಬಂದಿಲ್ಲ.
ಆಲೂಗಡ್ಡೆ ಬೆಳೆಗೆ ಉತ್ತಮ ಬೆಲೆ ಇದ್ದರೂ ರೋಗದಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಮಾಡಿದ ಸಾಲ ತೀರಿಸಲು ದಿಕ್ಕುತೋಚದಂತಾ ಗಿದೆ. ಸರ್ಕಾರ ಶೀಘ್ರವಾಗಿ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಿ ನೆರವಾಗಬೇಕು.”
– ವೆಂಕಟೇಶಪ್ಪ, ರೈತ, ಕಾಮಸಮುದ್ರ
– ಎಂ.ಸಿ.ಮಂಜುನಾಥ್