ಕಾರವಾರ: ಸೋಮವಾರ ಬೆಳಗಿನ ಜಾವದಿಂದ ಸಂಜೆ 5ರತನಕ ಕಾರವಾರದಲ್ಲಿ ರಭಸದ ಮಳೆ ಸುರಿಯಿತು. ಭಟ್ಕಳ, ಹೊನ್ನಾವರದಲ್ಲಿ ಸಹ ಭಾರೀ ಮಳೆ ಸುರಿದಿದ್ದು, ಕುಮಟಾ ಶಿರಸಿ ರಾಜ್ಯ ಹೆದ್ದಾರಿ ದೇವಿಮನೆ ಘಟ್ಟದಲ್ಲಿ ಆಲದ ಮರ ಬಿದ್ದು ಒಂದು ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕಾರವಾರದ ಸೀಬರ್ಡ್ ನೌಕಾನೆಲೆ ಅರ್ಗಾ ಗೇಟ್ನಿಂದ ಚೆಂಡಿಯಾ ಅರ್ಗಾ ಭಾಗದ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಮಳೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸಂಜೆ ವೇಳೆಗೆ ಹೆದ್ದಾರಿ ಮೇಲಿನ ನೀರು ಕಡಿಮೆಯಾದ ಕಾರಣ ಸಂಚಾರ ಯಥಾಸ್ಥಿತಿಗೆ ಬಂದಿದೆ. ಕಾರವಾರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತ್ತು. ಮಳೆ ಸಂಜೆ ಕಡಿಮೆಯಾದ ಕಾರಣ ಪರಿಸ್ಥಿತಿ ಹತೋಟಿಗೆ ಬಂತು.
ನಗರದ ಶಿರವಾಡ ಸಮೀಪದ ನಾರಗೇರಿ ಪ್ರದೇಶದಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ 2 ದನಗಳು ಮೃತಪಟ್ಟಿವೆ.
ಕಾರವಾರದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಳೆಯ ವೈಭವ ಮರುಕಳಿಸಿದೆ. ಸೀಬರ್ಡ್ ನೌಕಾನೆಲೆ ಪ್ರದೇಶದಲ್ಲಿ ದೊಡ್ಡ ಕಾಲುವೆ ಇದ್ದು, ಅದರಲ್ಲಿ ಮಣ್ಣು ತುಂಬಿದ ಕಾರಣ ಮಳೆಯ ನೀರು ದೊಡ್ಡ ಹಳ್ಳದ ಮೂಲಕ ಹರಿದು ಸಮುದ್ರ ಸೇರದೆ ಸಮಸ್ಯೆ ಉಂಟಾಗಿದೆ. ನೌಕಾನೆಲೆ ಎರಡನೇ ಹಂತದ ಕಾಮಗಾರಿಗಳ ಕಾರಣ ಕಾಲುವೆ ಅಲ್ಲಲ್ಲಿ ಮುಚ್ಚಲಾಗಿದೆ. ಇದು ಸಮಸ್ಯೆಗೆ ಕಾರಣ ಎಂದು ಅರ್ಗಾ, ಚೆಂಡಿಯಾ ಭಾಗದ ಜನತೆ ಆರೋಪಿಸುತ್ತಾರೆ. 2009ರಲ್ಲಿ ಮೋಡಸ್ಫೋಟವಾಗಿ ಚೆಂಡಿಯಾ, ಅರ್ಗಾ ಮಳೆಯ ನೀರಲ್ಲಿ ಮುಳುಗಿ ಈರ್ವರು ಮೃತಪಟ್ಟಿದ್ದರು. ಅಲ್ಲದೇ ಕಡವಾಡ ಬಳಿ ಗುಡ್ಡ ಜರಿದು ಎಂಟತ್ತು ಮನೆಗಳು ಮಣ್ಣಲ್ಲಿ ಮುಚ್ಚಿ 16 ಜನ ಜೀವಂತ ಸಮಾಯಾಗಿದ್ದರು. ಈ ಕಹಿ ಘಟನೆ ನೆನಪಿಸುವಂತೆ ಇಂದು ಸತತ ಮಳೆ ಸುರಿಯಿತು.
ಸಂಜೆಯ ವೇಳೆಗೆ ಮಳೆ ಕಡಿಮೆಯಾದ ಕಾರಣ ಜನರು ನಿಟ್ಟುಸಿರು ಬಿಟ್ಟರು. ಮೋಡ ಸ್ಫೊಧೀಟ ಎಲ್ಲಿ ಮೇಘ ಸ್ಫೊಧೀಟವನ್ನು ತರಲಿದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿತ್ತು. ಇನ್ನು ಎರಡು ದಿನ ಮಳೆಯ ಕಾರಣ ಆತಂಕ ಸಾರ್ವಜನಿಕರ ಮನದ ಮೂಲೆಯಲ್ಲಿ ಕಾಡುತ್ತಲೇ ಇದೆ.
ರೆಡ್ ಅಲರ್ಟ್ ಘೋಷಣೆ: ಕರಾವಳಿಯಲ್ಲಿ ಇನ್ನು ಎರಡು ದಿನ ಭಾರೀ ಮಳೆಯಾಗಲಿದೆ. ಎಚ್ಚರಿಕೆಯಿಂದ ಇರಬೇಕು. ಜನತೆ ಮತ್ತು ಸಮುದ್ರ ದಂಡೆಯಲ್ಲಿ ಹೆಚ್ಚು ಸಂಚರಿಸಬಾರದು. ದಡದ ಮೀನುಗಾರಿಕೆ ಸಹ ಮಾಡುವುದು ಬೇಡ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲಾಡಳಿತ ಸಹ ಸಾರ್ವಜನಿಕರಿಗೆ ಮಳೆಯ ಕುರಿತು ಸೂಚನೆ ನೀಡಿದೆ. ಕಾಳಿ ನದಿ ಅಣೆಕಟ್ಟುಗಳ ಹಿನ್ನೀರು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿಲ್ಲ. ಹಾಗಾಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡುತ್ತಿಲ್ಲ ಎಂದು ಕೆಪಿಸಿ ತಿಳಿಸಿದೆ.