ನರಗುಂದ: ಮುಂಗಾರು ಪೂರ್ವದಲ್ಲಿ ರೈತನಿಗೆ “ಖರ್ಚಿಲ್ಲದ ಪೀಕು’ ಎಂದೇ ಕರೆಯಿಸಿಕೊಂಡ ಹೆಸರು ಬೆಳೆ ಈ ಬಾರಿ ರೈತನ ಪಾಲಿಗೆ ತಲೆನೋವಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆ ಬಳ್ಳಿಯಲ್ಲೇ ಮೊಳಕೆ ಒಡೆಯುತ್ತಿರುವುದು ರೈತನ ನಿದ್ದೆಗೆಡಿಸಿದೆ.
ತಾಲೂಕಿನಲ್ಲಿ ಒಟ್ಟು 6680 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೀಜ ಬಿತ್ತನೆ ಮಾಡಲಾಗಿದೆ. ಈ ಬಾರಿ ಹಿಂದೆಂದಿಗಿಂತಲೂ ಸಮೃದ್ಧವಾಗಿದೆ. ಆದರೆ ಮಳೆರಾಯನ ಅವಕೃಪೆಯಿಂದ ಹೆಸರು ಬೆಳೆಯ ಮೇಲೆ ಕರಿನೆರಳು ಆವರಿಸುವಂತಾಗಿದೆ.
ಬುಡ್ಡಿಯಲ್ಲೇ ಮೊಳಕೆ: ಇನ್ನೇನು ಫಸಲು ಕೈಗೆಟುಕಲಿದೆ ಎನ್ನುವಷ್ಟರಲ್ಲಿ ನಿರಂತರ ಸುರಿದ ಮಳೆ ಹೆಸರು ಬೆಳೆಗೆ ಧಕ್ಕೆ ತಂದಿದೆ. ಒಣಗಿ ನಿಂತ ಹೆಸರು ಬುಡ್ಡಿ ಟಿಸಿಲೊಡೆದು ಅದರಲ್ಲೇ ಮೊಳಕೆ ಒಡೆಯುತ್ತಿದೆ. ಇದರಿಂದ ಇಳುವರಿ ಕುಂಠಿತವಾಗುವ ಆತಂಕ ಮನೆಮಾಡಿದೆ.
ಗಗನಕ್ಕೇರಿದ ಕೂಲಿ: ಎರಡೂವರೆ ತಿಂಗಳು ಅವಧಿ ಹೆಸರು ಬೆಳೆ ಫಸಲು ತೆಗೆಯುವಾಗ ಪ್ರತಿವರ್ಷದ ಕೂಲಿಕಾರರ ಸಮಸ್ಯೆ ಈ ಬಾರಿಯೂ ಹೊರತಾಗಿಲ್ಲ. ಪ್ರತಿ ಕೂಲಿಕಾರರ ದಿನದ ವೇತನ 200 ರಿಂದ 300 ರೂ.ಗೆ ಏರಿಕೆಯಾಗಿದ್ದು ಅನ್ನದಾತರಿಗೆ
ನುಂಗಲಾಗದ ತುತ್ತಾಗಿದೆ. ಇದರೊಂದಿಗೆ ಕೂಲಿಕಾರರ ಸಮಸ್ಯೆಯಿಂದ ರೈತ ಎಡತಾಕುವಂತಾಗಿದೆ. ಪಕ್ಕದ
ತಾಲೂಕುಗಳಿಂದ ಕೂಲಿಕಾರರು ಆಗಮಿಸುತ್ತಿದ್ದರೂ ತಾಲೂಕಿನ ರೈತರಿಗೆ ಹೆಸರು ಕಟಾವು ಹೊರೆಯೊಂದಿಗೆ
ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯೂ ಎದುರಾಗಲಿದೆ.