ಬೆಂಗಳೂರು: ಕೇಂದ್ರ ಮೋಟಾರು ವಾಹನ ಕಾಯಿದೆ -2019ಕ್ಕೆ ತಿದ್ದುಪಡಿ ಮಾಡಿರುವ, ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಿಸಿರುವ ಪರಿಷ್ಕೃತ ದಂಡದ ಕುರಿತು ರಾಜ್ಯ ಸರಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ತತ್‌ಕ್ಷಣದಿಂದ ರಾಜ್ಯಾದ್ಯಂತ ಇದು ಜಾರಿಯಾಗಿದೆ.
ಪರಿಷ್ಕೃತ ದಂಡವನ್ನು ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು, ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮೇಲ್ಪಟ್ಟ ಹುದ್ದೆಯ ಅಧಿಕಾರಿಗಳು ವಿಧಿಸಲು ಅವಕಾಶ ನೀಡಲಾಗಿದೆ.
ಅಪಾಯಕಾರಿ ಚಾಲನೆ (ಫೋನ್, ಬ್ಲೂಟೂತ್ ಸಹಿತ ಕೈ ಮೂಲಕ ಸಂಪರ್ಕ ಸಾಧನಗಳ ಬಳಕೆ)ಗೆ ಮೊದಲ ಬಾರಿಗೆ 5,000 ರೂ., ಎರಡನೇ ಬಾರಿ ತಪ್ಪು ಮಾಡಿದರೆ 10,000 ರೂ. ದಂಡವಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ಸಹಿತ ಯಾವುದೇ ತುರ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದರೆ 10,000 ರೂ., ಆಸ್ಪತ್ರೆ ಸಹಿತ ನೋ ಹಾರ್ನ್ ಎಂದು ಗುರುತಿಸಿರುವ ಪ್ರದೇಶದಲ್ಲಿ ಹಾರ್ನ್ ಹೊಡೆದರೆ 1,000 ರೂ., ಅನಂತರದಲ್ಲಿ 2,000 ರೂ. ದಂಡವಿದೆ.
ವಿಮೆ ಇಲ್ಲದ ವಾಹನ ಬಳಸಿದರೆ ಮೊದಲ ಬಾರಿ 2,000 ರೂ., ಅನಂತರದಲ್ಲಿ 4,000 ರೂ. ದಂಡ ವಿಧಿಸಲಾಗುತ್ತದೆ. ಹೆಚ್ಚು ಶಬ್ದದ ಸೈಲೆನ್ಸರ್ ಬದಲಾಯಿಸುವುದು ಸಹಿತ ವಾಹನದ ಮೂಲ ರೂಪಕ್ಕೆ ಧಕ್ಕೆ ತಂದು ಬದಲಾವಣೆ ಮಾಡಿದರೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ವೇಗದ ಮಿತಿ ಮೀರಿ ಚಾಲನೆಗೆ ಮೊದಲಿಗೆ 2,000 ರೂ. ಎರಡನೇ ಬಾರಿ ಅಪರಾಧಕ್ಕೆ 4,000 ರೂ. ದಂಡ ವಿಧಿಸಲಾಗುತ್ತದೆ.