Advertisement

ಜಿಮ್‌ ಮೋಹ ಅತಿಯಾದರೆ ಒಳ್ಳೆಯದಲ್ಲ

11:30 AM Mar 26, 2019 | pallavi |

ಆಕರ್ಷಕ ಮೈಕಟ್ಟು ಹೊಂದುವುದು ಎಲ್ಲರ ಕನಸು. ಆದರೆ ಇದನ್ನು ಆದಷ್ಟು ಬೇಗ ಮಾಡಿ ಕೊಳ್ಳಬೇಕು ಎಂದು ಸ್ಪರ್ಧೆಗಿಳಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ. ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ ದೇಹಾರೋಗ್ಯಕ್ಕೆ ಸಂಬಂಧಿಸಿ ಜಿಮ್‌ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕೂಡ ಬಹುಮುಖ್ಯ. ಜತೆಗೆ ಶಿಸ್ತುಬದ್ಧ ಜೀವನ ಕ್ರಮ, ಆಹಾರದಲ್ಲಿ ಕಾಳಜಿಯಂತು ಇರಲೇಬೇಕು.

Advertisement

ತೆಳ್ಳಗಿನ ದೇಹ, ಸದೃಢ ಮೈಕಟ್ಟು ಹೊಂದುವುದು ಪ್ರತಿಯೊಬ್ಬರ ಕನಸು. ಡಯಟ್‌ ಮಾಡಿಯೋ, ನಡೆದಾಡಿಯೋ, ಯೋಗ, ವ್ಯಾಯಾಮದ ಮೊರೆ ಹೋಗಿಯೋ ಆಕರ್ಷಕ ಮೈಕಟ್ಟು ಹೊಂದುವುದು ಸಾಮಾನ್ಯ. ಆದರೆ, ನಗರೀಕರಣಕ್ಕೆ ತೆರೆದುಕೊಂಡಂತೆ ವಾಕಿಂಗ್‌, ಯೋಗ, ವ್ಯಾಯಾಮವನ್ನು ಮಾಡುವುದಕ್ಕೆ ಸಮಯವೆಲ್ಲಿದೆ ಎಂಬ ಅಳಲು ಯುವ ಜನಾಂಗದ್ದು. ಅದಕ್ಕಾಗಿಯೇ ಪಕ್ಕನೆ ನೆನಪಾಗುವುದು ಜಿಮ್‌.

ಯಾಂತ್ರಿಕ ವೈದ್ಯ
ತೂಕ ಇಳಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳೆಂದರೆ ಜಿಮ್‌ ಸೌಲಭ್ಯಗಳು. ತೂಕ ಕಡಿಮೆ ಮಾಡಿಕೊಂಡು ಸಮಸ್ಯೆಗಳಿಂದ ದೂರವಿರಬೇಕು, ಜತೆಗೆ ಆಕರ್ಷಕ ಮೈಕಟ್ಟು ಹೊಂದಬೇಕು ಎಂಬ ಆಲೋಚನೆಯೊಂದಿಗೆ ಜಿಮ್‌ನತ್ತ ಮುಖ ಮಾಡುವವರು ಹಲವರಿದ್ದಾರೆ. ಆಧುನಿಕ ಯಾಂತ್ರಿಕ ವೈದ್ಯನಂತೆ ಇರುವ ಜಿಮ್‌ ಸದೃಢ ಮೈಕಟ್ಟಿಗೆ ಸಶಕ್ತವಾಗಿದೆಯೇನೋ ನಿಜ. ಆದರೆ ಅತಿಯಾದ ದೇಹದಂಡನೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದು ಅಷ್ಟೇ ಸತ್ಯ.

ಜಿಮ್‌ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಹಾಯಕವಾದ ಚಟುವಟಿಕೆಯೇ ಆಗಿದೆ. ಇಲ್ಲಿ ಎಲ್ಲರಿಗೂ ಸರಿ ಹೊಂದುವ ವ್ಯಾಯಾಮಗಳಿರುತ್ತವೆ. ಜಿಮ್‌ಗೆ ಹೋದರೆ ತೂಕ ಬೇಗ ಕಡಿಮೆಯಾಗುವುದು ಸುಳ್ಳಲ್ಲ. ಜಿಮ್‌ ಚಟುವಟಿಕೆಗಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಹಳ ನೆರವಾಗುತ್ತವೆೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆಯೇ ಈ ಆಧುನಿಕ ತಾಂತ್ರಿಕ ವ್ಯಾಯಾಮಗಳು ಅಡ್ಡ ಪರಿಣಾಮಗಳನ್ನುಂಟು ಮಾಡುವುದೇ ಹೆಚ್ಚು.

ಆಹಾರಕ್ರಮ ಅಗತ್ಯ
ಜಿಮ್‌ಗೆ ಹೋಗುವುದೆಂದರೆ ಕೇವಲ ವ್ಯಾಯಾಮ ಮಾಡಿ ಬರುವುದಷ್ಟೇ ಅಲ್ಲ. ಆಹಾರಕ್ರಮವೂ ಸರಿಯಾಗಿರಬೇಕು. ಮಿತ ಆಹಾರದೊಂದಿಗೆ ಶಿಸ್ತುಬದ್ಧ ಆಹಾರ ಸೇವನೆ ಅಷ್ಟೇ ಪ್ರಾಮುಖ್ಯವಾಗಿರುತ್ತದೆ. ಜಿಮ್‌ ಮಾಡಿ ದೇಹ ದಣಿಯುವುದರಿಂದ ಕೊಬ್ಬಿನ ಆಹಾರವನ್ನು ಸೇವಿಸಬಾರದು. ಆದಷ್ಟು ಗುಣಮಟ್ಟದ ಪ್ರೋಟಿನ್‌ ಮತ್ತು ಕಾರ್ಬೋಹೈಡ್ರೇಟ್‌ಯುಕ್ತ ಆಹಾರವನ್ನು ಸೇವಿಸಬೇಕು. ಜಿಮ್‌ನಲ್ಲಿ ವ್ಯಾಯಾಮ ಮಾಡಿದ ತತ್‌ಕ್ಷಣ ನೀರು ಕುಡಿಯುವುದೂ ಹಿತಕರವಲ್ಲ. ಬ್ರೆಡ್‌, ಕೆಂಪು ಮಾಂಸ ಸೇವನೆಯೂ ಬೇಡ.

Advertisement

ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಿದರೆ ದೇಹಾರೋಗ್ಯ ಉತ್ತಮವಾಗುತ್ತದೆ. ಹೆಸರು ಕಾಳು ಸ್ನಾಯ ಬಲವರ್ಧನೆಗೆ ಉತ್ತಮ ಆಹಾರವಾಗಿದೆ. ಆದಷ್ಟು ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದು ಹಿತಕರ. ಸಿಹಿ ಗೆಣಸು, ಡ್ರೈಫ್ರುಟ್ಸ್‌, ಆಮ್ಲೆಟ್‌, ಗ್ರೀನ್‌ ಟೀ, ಶುಂಠಿ ಟೀ ಜಿಮ್‌ ಮಂದಿಗೆ ಬೆಸ್ಟ್‌ ಆಹಾರ ಕ್ರಮಗಳಾಗಿವೆ.

ಕನಿಷ್ಠ ಒಂದು ಗಂಟೆ ಜಿಮ್‌ ಮಾಡಿ
ಕನಿಷ್ಠ ಒಂದು ಗಂಟೆ ಕಾಲ, ಗರಿಷ್ಠ ಮೂರು ಗಂಟೆಗಳ ಕಾಲ ಜಿಮ್‌ನಲ್ಲಿ ತೊಡಗಿಸಿಕೊಳ್ಳಬಹುದು. ಒಂದು ಗಂಟೆಗಿಂತ ಕಡಿಮೆ ಅವಧಿಯಿಂದ ಅಷ್ಟೇನೂ ಪ್ರತಿಫಲ ಸಿಗುವುದಿಲ್ಲ. ಆದರೆ ದೇಹದ ಅಗತ್ಯಕ್ಕೆ ತಕ್ಕಂತೆ ಜಿಮ್‌ನಲ್ಲಿ ತೊಡಗಿಸಿಕೊಂಡರೆ ಉತ್ತಮ. ಇಲ್ಲವಾದರೆ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಯಾರೆಲ್ಲ ಜಿಮ್‌ಮಾಡಬಾರದು?
ಹದಿನೆಂಟು ವರ್ಷ ಮೇಲ್ಪಟ್ಟ ಯಾರೇ ಆದರೂ ಜಿಮ್‌ ಮಾಡಬಹುದು. ಆದರೆ ಗರ್ಭಿಣಿಯರು, ಬೆನ್ನು ನೋವು, ಇತರ ಶಾರೀರಿಕ ನೋವಿನಿಂದ ಬಳಲುತ್ತಿರುವರು ಜಿಮ್‌ ಮಾಡಬಾರದು. ಅತಿಯಾದ ಬೊಜ್ಜು ಹೊಂದಿರುವವರು, ದೇಹ ತೂಕ ಹೊಂದಿರುವವರು ಜಿಮ್‌ನ ಮೊರೆ ಹೋಗಬಹುದು. ಆದರೆ ಜಿಮ್‌ಗೆ ತೆರಳುವ ಮುನ್ನ ಆ ಬಗ್ಗೆ ತಿಳಿದಿರುವವರಲ್ಲಿ ವಿಚಾರಿಸಿಕೊಂಡು ಬಳಿಕ ತಮ್ಮ ದೇಹಕ್ಕೆ ಸರಿಹೊಂದುವಂತಿದ್ದರೆ ಮಾತ್ರ ಜಿಮ್‌ ಅಭ್ಯಾಸ ಮಾಡುವುದು ಉತ್ತಮ.

ವ್ಯಾಯಾಮ, ಯೋಗವೇ ಉತ್ತಮ
ಜಿಮ್‌ಗೆ ಹೋಗುವುದರಿಂದ ಅಡ್ಡ ಪರಿಣಾಮ ಆಗುತ್ತದೆ ಎನ್ನುವುದಕ್ಕಿಂತ, ವ್ಯಾಯಾಮ, ಯೋಗದ ಮೊರೆ ಹೋಗುವುದು ಹೆಚ್ಚು ಸೂಕ್ತ ಎನ್ನಬಹುದು. ಏಕೆಂದರೆ ವಯಸ್ಸಾದಂತೆ ಆರೋಗ್ಯಕರ ಜೀವನಶೈಲಿ ನಿರೂಪಿಸಲು ಇವೇ ಆಧಾರ. ಜಿಮ್‌ನಲ್ಲಿ ತೊಡಗಿಸಿಕೊಳ್ಳುವವರು ಆಹಾರಕ್ರಮವನ್ನು ಪಾಲಿಸಬೇಕಾದುದು ಅಗತ್ಯ.
– ಡಾ| ರಾಘವೇಂದ್ರ ಕೆ., ವೈದ್ಯರು

ಅಡ್ಡ ಪರಿಣಾಮ
ಜಿಮ್‌ನಲ್ಲಿ ನಿರಂತರ ದೇಹ ದಂಡನೆ ಮಾಡುವುದರಿಂದ ವಯಸ್ಸಾದಂತೆ ದೇಹದಲ್ಲಿ ಶಕ್ತಿ ಕುಂದುತ್ತದೆ ಎಂಬುದು ಜಿಮ್‌ ವ್ಯಾಯಾಮ ಪಡೆದುಕೊಂಡವರ ಮಾತು. ಬಲಿಷ್ಠ ಮಾಂಸಖಂಡಗಳಿಗಾಗಿ ಸ್ಟಿರಾಯ್ಡಗಳನ್ನು ತೆಗೆದುಕೊಂಡಲ್ಲಿ ಮಾಂಸಖಂಡಗಳು ಶಕ್ತಿಯುತ ವಾಗುತ್ತವೆ. ಆದರೆ ಇದು ತಾತ್ಕಾಲಿಕವಷ್ಟೇ. ವಯಸ್ಸು ಏರುತ್ತಿದ್ದಂತೆ ಇದರಿಂದ ಕೀಲು ನೋವು, ಕೈ ನೋವು ಮುಂತಾದವುಗಳು ಪ್ರಾರಂಭವಾಗುತ್ತವೆ. ಆಲಸ್ಯವೂ ಉಂಟಾಗುತ್ತದೆ. ಸ್ಟಿರಾಯ್ಡಗಳನ್ನು ತೆಗೆದುಕೊಳ್ಳದೆ, ಸ್ವಾಭಾವಿಕ ವ್ಯಾಯಾಮ ಅನುಸರಿಸುವುದೇ ಸೂಕ್ತವಾಗಿದೆ.

  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next