Advertisement

ಆಗಸ್ಟ್ 9 ಮಲೆ(ಳೆ)ನಾಡಿಗರ ಪಾಲಿಗೆ ಕರಾಳ ದಿನ.! ಇನ್ನೂ ತಪ್ಪಲಿಲ್ಲ ಸಂತ್ರಸ್ಥರ ಕಣ್ಣೀರು.. !

04:23 PM Aug 09, 2021 | Team Udayavani |

ಚಿಕ್ಕಮಗಳೂರು: “ಜೀವಮಾನವಿಡೀ ಗಳಿಸಿದ್ದನ್ನೆಲ್ಲಾ ಕ್ಷಣಮಾತ್ರದಲ್ಲಿ ಕಳೆದುಕೊಂಡ್ವು.. ಕಣ್ಣ ಮುಂದೆಯೇ ಕನಸಿನ ಮನೆ ಕೊಚ್ಚಿ ಹೋಗ್ತಿದ್ರೆ ಅಸಹಾಯಕ ಸ್ಥಿತಿಯಲ್ಲಿ ಮನಸ್ಸನ್ನ ಗಟ್ಟಿಮಾಡಿ ನೋಡುತಿದ್ವಿ.. ಎದೆ ಬಡಿದುಕೊಂಡ್ರೂ ನಮ್ಮ ಕೂಗು ಯಾರಿಗೂ ಕೇಳುತ್ತಿರಲಿಲ್ಲ. ಕೇಳಿಸಿದ್ರೂ ಪ್ರಕೃತಿಯನ್ನ ಎದುರು ಹಾಕೊಂಡು ಹೋರಾಟ ಮಾಡೋಕೆ ಯಾರಿಗೂ ಆಗುತ್ತಿರಲಿಲ್ಲ ಬಿಡಿ.. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಓಡಿ ಬಂದು ಜೀವ ಉಳಿಸಿಕೊಂಡಿದ್ವಿ.. ಮುಂದೆ ಎಲ್ಲವೂ ಸರಿಯಾಗುತ್ತೆ ಅನ್ನೋ ಸಮಾಧಾನವನ್ನ ಎಲ್ಲರೂ ಹೇಳಿದ್ರು.. ದಿನಗಳು ಕಳೆದ್ವು.. ತಿಂಗಳುಗಳು ಆದ್ವು.. ವರ್ಷಗಳೇ ಉರುಳಿದ್ವು.. ಸ್ವತಃ ಮುಖ್ಯಮಂತ್ರಿಗಳೇ ಬಂದ್ರು.. ಮಂತ್ರಿಗಳು, ಅಧಿಕಾರಿಗಳು.. ಏನ್ ಕೇಳ್ತೀರಾ..? ಎಲ್ಲರೂ ಬಂದ್ರು. ನಾವು ಇದ್ದೀವಿ ಡೋಂಟ್ ವರಿ ಅಂದ್ರು. ಹೌದು, ಅವರೆಲ್ಲರೂ ಇದ್ದಾರೆ.. ಇರ್ತಾರೆ ಕೂಡಾ.. ನಾವು ಹೇಗೋ ಇಲ್ಲಿವರೆಗೂ ಇದ್ವಿ, ಆದ್ರೆ ಇನ್ಮುಂದೆ ಇರ್ತೀವಿ ಅನ್ನೋ ಭ್ರಮೆಯಂತೂ ನಮಗಿಲ್ಲ. ಸಾಕಾಗಿ ಹೋಗಿದೆ.. ನಮ್ದು ಒಂದು ಜೀವನನಾ..? ಯಾಕಪ್ಪಾ ಬದುಕಿದ್ವಿ ಅನ್ನೋ ಸಂಕಟ ಆಗ್ತಿದೆ. ಆ ದಿನ ಮಧ್ಯಾಹ್ನದ ವೇಳೆಯಲ್ಲಿ ರಣಭೀಕರವಾಗಿ ಬಂದ ಕಂಡು ಕೇಳರಿಯದ ಮಳೆ, ಮನೆ-ಆಸ್ತಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯ್ತು. ಒಂದ್ವೇಳೆ ರಾತ್ರಿ ಆಗಿದ್ರೆ, ಮನೆ-ಆಸ್ತಿ ಪಾಸ್ತಿ ಜೊತೆಗೆ ನಾವು ಹೋಗಿ ಬಿಡ್ತಿದ್ವಿ.. ಈ ರೀತಿ ಕೊರಗಿಕೊಂಡು ಇವರ ಹತ್ತಿರ ಭಿಕ್ಷೆ ಬೇಡಿಕೊಂಡು ಬದುಕುವ ಬದಲು ಆಗಲೇ ಸತ್ತಿದ್ರೆ ನೆಮ್ಮದಿ ಇರ್ತಿತ್ತು”

Advertisement

“ಇಂದು ಬದುಕು ಸರಿಯಾಗುತ್ತೆ, ನಾಳೆ ಆಗುತ್ತೆ, ನಮ್ಮ ಬದುಕಿನಲ್ಲೂ ಒಳ್ಳೆಯ ದಿನಗಳು ಬಂದೇ ಬರುತ್ತೆ ಅಂತಾ ಕಾದು ಕಾದು ಸುಸ್ತಾದ ನಮಗೆ ಬದುಕುವ ಆಸೆಯೇ ಕಮರಿಹೋಗಿದೆ. ಬರೋಬ್ಬರಿ 2 ವರ್ಷಗಳಲ್ಲಿ ಮಾಡಿದ ಮನವಿಗಳಿಗೆ ಲೆಕ್ಕವಿಲ್ಲ, ಕಚೇರಿಗಳಿಗಂತೂ ಅಲೆದು ಅಲೆದು ಸುಸ್ತಾಗಿ ಹೋಗಿದೆ, ಕೇವಲ ಚಪ್ಪಲಿಗಳು ಸವೆದ್ವು ವಿನಃ ಪ್ರಯೋಜನ ಮಾತ್ರ ಶೂನ್ಯ. ಇಲ್ಲಿಯವರೆಗೂ ಯಾರಿಗೂ ಸಲಾಂ ಹೊಡೆಯದೇ ಜೀವನ ನಡೆಸಿದ್ವಿ, ಕೊಡುವ ಕೈಗಳಾಗಿ ಬದುಕಿದ್ವಿ ವಿನಃ ಯಾರಿಗೂ ಕೈ ಚಾಚಿರಲಿಲ್ಲ. ಆದ್ರೆ ಈ ಪ್ರಕೃತಿ ನಮ್ಮನ್ನ ನಡು ಬೀದಿಗೆ ತಂದು ನಿಲ್ಲಿಸಿತು. ರಣಭೀಕರ ಮಳೆಯ ಹೊಡೆತಕ್ಕೆ ಹತ್ತಾರು ವರ್ಷಗಳ ಕಾಲ ಬಾಳಿ ಬದುಕಿದ ಕನಸಿನ ಮನೆ ಕಳೆದುಕೊಂಡ್ವು. ಹಣ, ಚಿನ್ನಾಭರಣ, ಪಿಠೋಪಕರಣಗಳು, ಶೇಖರಣೆ ಮಾಡಿಟ್ಟಿದ್ದ ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಬೆಳೆಗಳು ನಾಶವಾದ್ವು.. ಕಾಫಿ ತೋಟ, ಅಡಿಕೆ ತೋಟ, ಗದ್ದೆಗಳೇ ಸರ್ವನಾಶವಾದ್ವು.. ನಮ್ಮ ಭಾರವನ್ನ ಹೊತ್ತುಕೊಂಡು ಸಾಗುತ್ತಿದ್ದ ಜೀಪ್-ಕಾರು-ಬೈಕ್ ಎಲ್ಲವೂ ಮಳೆಯಲ್ಲಿ ಸಮಾಧಿಯಾದ್ವು. ಇಷ್ಟಾದ್ರೂ ನಮಗೆ ಪ್ರಕೃತಿಯ ಮೇಲೆ ಆ ಕ್ಷಣಕ್ಕೆ ಬೇಜಾರ್ ಆಗಿತ್ತು ಬಿಟ್ರೆ, ಮತ್ತೆ ಪ್ರಕೃತಿಯ ಮುನಿಸಿನ ಬಗ್ಗೆ ಕೋಪ ಬರಲೇ ಇಲ್ಲ.. ನಿಜಕ್ಕೂ ನಮಗೆ ಕೋಪ, ಆಕ್ರೋಶ, ಹೇಸಿಗೆ ಹುಟ್ಟಿಸುವ ಭ್ರಮನಿರಸನ ಬಂದಿರೋದು ಈ ವ್ಯವಸ್ಥೆಯ ಮೇಲೆ, ನಮ್ಮನಾಳುತ್ತಿರುವ ಸರ್ಕಾರದ ಮೇಲೆ.. ಸುಳ್ಳು ಭರವಸೆಗಳಲ್ಲಿ ನಮ್ಮನ್ನ ಇನ್ನೂ ಅಂದಕಾರದಲ್ಲಿಟ್ಟು ಮೂರ್ಖರನ್ನಾಗಿಸುತ್ತಿರುವ ಜನಪ್ರತಿನಿಧಿಗಳ ಮೇಲೆ..”

ಇದನ್ನೂ ಓದಿ :ಖಾತೆ ಬದಲಾವಣೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ: ಶ್ರೀರಾಮುಲು

“ಪ್ರತಿದಿನ ಕಣ್ಣೀರು ಹಾಕುತ್ತಾ ಬದುಕುವ ದುಸ್ಥಿತಿ ನಮ್ಮದಾಗಿದೆ.. ಮನೆಗಳನ್ನ ಕಳೆದುಕೊಂಡ ನಮಗೆ ಬಾಡಿಗೆ ಮನೆಯಲ್ಲಿ ಇರಿ, ಹಣ ಹಾಕ್ತೀವಿ ಅಂದ್ರು.. ಆ ಬಳಿಕ ಅಧಿಕಾರಿಗಳನ್ನ ಕೇಳಿದ್ರೆ ಹಣ ಬಿಡುಗಡೆಯಾಗಿಲ್ಲ, ಏನ್ ಮಾಡೋಣ ಅಂತಾರೆ. ಬಾಡಿಗೆ ಮನೆ ಕೊಟ್ಟ ಮಾಲೀಕರು ಸುಮ್ನಿರ್ತಾರಾ.? ಒಂದ್ಕಡೆ ಎಲ್ಲವನ್ನೂ ಕಳೆದುಕೊಂಡು ನಮಗೆ ಮಾನಸಿಕ ಚಿಂತೆಯಾದ್ರೆ, ಇನ್ನೊಂದೆಡೆ ವಯಸ್ಸಾದ ಪೋಷಕರಿಗೆ ಆರೋಗ್ಯ ಹದೆಗೆಟ್ಟಾಗ ಕೈಕಾಲು ನಡುಗುತ್ತಿದ್ವು.. ಮಕ್ಕಳಿಗೆ ಹುಷಾರು ತಪ್ಪಿದ್ದಾಗ ದುಃಖ ಉಮ್ಮಳಿಸಿ ಬರ್ತಿತ್ತು.. ಒಂದೊಂದು ರೂಪಾಯಿ ಹೊಂದಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಈ ನಡುವೆ ದಿನನಿತ್ಯದ ಖರ್ಚು.. ಎಲ್ಲರಂತೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗ್ತಿಲಲ್ವಾ ಅನ್ನೋ ಅಸಹಾಯಕತೆ.. ನಮ್ಮ ಬದುಕನ್ನ ಕಟ್ಟಿಕೊಡಲು ಇಷ್ಟು ಟೈಂ ಬೇಕಾ..? ನೂರಾರು ಕೋಟಿ ಖರ್ಚು ಮಾಡಿ ಚುನಾವಣೆ ಮಾಡ್ತಾರೆ..! ಶಾಸಕರನ್ನ ಕೋಟಿಗಟ್ಟಲೇ ಕೊಟ್ಟು ಖರೀದಿ ಮಾಡ್ತಾರೆ.! ಸಾವಿರಾರು ಕೋಟಿ ಹಣವನ್ನ ಅದ್ಯಾವ್ದೋ ಯೋಜನೆಗಳಿಗೆ ಬಿಡುಗಡೆ ಮಾಡಿದ್ವಿ ಅಂತಾರೆ.. ಆದ್ರೆ ಇದರ ಒಂದು ಪರ್ಸೆಂಟ್ ನಮ್ಮ ಬದುಕಿನ ಬಗ್ಗೆ ಯೋಚಿಸಿದ್ರೆ ನಾವು ಕಣ್ಣೀರು ಹಾಕುವ ಪರಿಸ್ಥಿತಿ ಇಂದು ಬರ್ತಾ ಇರಲಿಲ್ಲ.. ಆದ್ರೂ ಈ ನಡುವೆ ಪೇಪರಲ್ಲಿ, ಟಿವಿಗಳಲ್ಲಿ ಸಂತ್ರಸ್ಥರಿಗೆ ಬದುಕು ಕಟ್ಟಿಕೊಟ್ಟಿದ್ದೀವಿ ಅಂತಾ ಹೇಳುವ ಅಧಿಕಾರಿಗಳ, ಜನಪ್ರತಿನಿಧಿಗಳ ಫೇಕ್ ಸ್ಟೇಟ್ಮೆಂಟ್ಗಳನ್ನ ನೋಡ್ದಾಗ ಆಕ್ರೋಶದ ಕಿಚ್ಚು ಹೆಚ್ಚಾಗುತ್ತದೆ.. ಆದ್ರೂ ಏನ್ಮಾಡೋಕೆ ಆಗ್ತಿಲ್ಲ, ಈ ಇಡೀ ವ್ಯವಸ್ಥೆ ನಮ್ಮ ಬದುಕನ್ನ ಅಣಕಿಸುತ್ತಿದ್ಯಾ..? ಸಂತ್ರಸ್ಥರ ಬದುಕನ್ನ ಇಟ್ಕೊಂಡು ಆಟವಾಡ್ತಿದ್ದಾರಾ ಅನ್ನೋ ಅನುಮಾನ ಮೂಡ್ತಿದೆ”

ಇದು 2019, ಆಗಸ್ಟ್ 9ರಂದು ಮಹಾಮಳೆಯಿಂದ ಸರ್ವಸ್ವವನ್ನೂ ಕಳೆದುಕೊಂಡವರ ಸಂಕಟ, ಅಸಹಾಯಕತೆಯ ನುಡಿ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್, ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಜನರು ಆ ದಿನ ಮಹಾಮಳೆಯಿಂದ ಅನುಭವಿಸಿದ್ದ ನೋವು, ಸವಾಲು ಹೇಳತೀರದು. ಮಲೆನಾಡಿಗರಿಗೆ ಮಳೆ ಹೊಸತೇನಲ್ಲ, ಆದ್ರೆ 2019ರ ಆಗಸ್ಟ್ 9ರಂದು ಆರ್ಭಟಿಸಿದ ಮಳೆ, ಜನರನ್ನ ಅಕ್ಷರಶಃ ಬೆಚ್ಚಿ ಬೀಳಿಸಿತು. ಒಂದೆಡೆ ಗುಡುಗಿನ ಪ್ರತಾಪ, ಮತ್ತೊಂದೆಡೆ ಸಿಡಿಲಿನ ಶಾಕ್.. ಈ ನಡುವೆ ಬೆಟ್ಟಕ್ಕೆ ತೂತು ಬಿದ್ದಿದೆ ಅನ್ನೋ ರೀತಿಯಲ್ಲಿ ಸುರಿಯುತ್ತಿದ್ದ ರಣ ಭೀಕರ ಮಳೆಗೆ ಗುಡ್ಡಗಳು ಸ್ಫೋಟಿಸಿದ್ದವು. ಜಿಲ್ಲೆಯಲ್ಲಿ ಹುಟ್ಟುವ ತುಂಗಾ-ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿದಿದ್ದವು.. ಜನರು ಮನೆಬಿಟ್ಟು ಓಡುತ್ತಿದ್ರೆ ಹಿಂದೆ ಪ್ರವಾಹ ಅವರನ್ನ ಬೆನ್ನಟ್ಟುತ್ತಿತ್ತು.. ಆ ವೇಳೆ ಸಾವಿರಾರು ಜನರು ಮಳೆಯಿಂದ ಬಚಾವಾದ್ರೆ, 13 ಜನರು ಪ್ರವಾಹದ ಸಂಕೋಲೆಯಿಂದ ತಪ್ಪಿಸಿಕೊಳ್ಳಲಾಗದೇ ಶರಣಾಗಿದ್ರು..

Advertisement

ಇದನ್ನೂ ಓದಿ :ಸ್ವಾತಂತ್ರ್ಯ ದಿನಾಚರಣೆ: ಉಗ್ರರ ದಾಳಿ ಸಂಚು ವಿಫಲಗೊಳಿಸಿದ ಬಿಎಸ್ ಎಫ್, ಅಪಾರ ಸ್ಫೋಟಕ ವಶ

ಕಾಳಜಿ ಕೇಂದ್ರಗಳಲ್ಲಿ ಸಾವನ್ನ ಗೆದ್ದವರ ಜೀವನ.!

ಹೀಗೆ ಬೆನ್ನಟ್ಟಿ ಬಂದ ಪ್ರವಾಹಕ್ಕೂ ಸವಾಲು ಹಾಕಿ ಉಟ್ಟ ಬಟ್ಟೆಯಲ್ಲಿ ಬಂದ ಜನರು, ಸೇರಿದ್ದು ಕಾಳಜಿ ಕೇಂದ್ರಕ್ಕೆ. ಅಲ್ಲಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಕೆಲ ದಿನಗಳವರೆಗೂ ಕಣ್ಣೀರಿಡುತ್ತಲೇ ಜೀವನ ಸಾಗಿಸುತ್ತಿದ್ದ ಜನರನ್ನ ಸರ್ಕಾರ ಅಲ್ಲಿಂದ ಹೊರಹೋಗಿ ಅನ್ನೋ ಸೂಚನೆ ನೀಡ್ತು. ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ಥರನ್ನ ಸಿಎಂ ಸೇರಿದಂತೆ ಮಂತ್ರಿಗಳು, ಅಧಿಕಾರಿಗಳು ಬಂದು ಮಾತನಾಡಿಸಿದ್ರು. ನಿಮ್ಮನ್ನ ಕೈ ಬಿಡೋದಿಲ್ಲ, ನಿಮಗೆ ಪರ್ಯಾಯ ಬದುಕು ಕಟ್ಟಿಕೊಡೋದು ನಮ್ಮ ಜವಾಬ್ದಾರಿ, ಡೋಂಟ್ ವರಿ ಅಂದ್ರು. ನಮ್ಮನಾಳುವವರ ಮಾತನ್ನ ಕೇಳಿದ ಸಂತ್ರಸ್ಥರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯ್ತು. ಹೀಗಿರುವಾಗಲೇ ಸಂತ್ರಸ್ಥರನ್ನ ಸರಿ ನೀವು ಬಾಡಿಗೆ ಮನೆಗಳಿಗೆ ಹೋಗಿ, ನಾವು ಕಾಳಜಿ ಕೇಂದ್ರಗಳನ್ನ ಕ್ಲೋಸ್ ಮಾಡ್ತೀವಿ ಅಂತಾ ಎಲ್ಲರನ್ನೂ ಕಳುಹಿಸಿಕೊಡಲಾಯ್ತು.

ಎಲ್ಲೆಲ್ಲಿ ಹೆಚ್ಚು ಅನಾಹುತ..?

2019ರ ಮಹಾಮಳೆ ಹೆಚ್ಚು ಹೊಡೆತ ಕೊಟ್ಟಿದ್ದು ಮೂಡಿಗೆರೆ, ಕಳಸ, ಎನ್.ಆರ್ ಪುರ ತಾಲೂಕಿನ ಭಾಗದ ಜನರಿಗೆ. ಈ ಭಾಗದ ಮಲೆಮನೆ, ಬಾಳೂರು, ಮಧುಗುಂಡಿ, ದುರ್ಗದಹಳ್ಳಿ, ಅಲೇಖಾನ್ ಹೊರಟ್ಟಿ, ಹಲಗಡಕ, ಸುಂಕಸಾಲೆ, ಚನ್ನಡ್ಲು, ಹಿರೇಬೈಲ್, ಯೆಡೂರು, ಮಾಗುಂಡಿ ಸೇರಿದಂತೆ ಕೆಲ ಗ್ರಾಮಗಳು ಮಳೆಯಿಂದ ಭಾರೀ ಹೊಡೆತ ತಿಂದ್ವು.. ಈ ರೀತಿಯಾಗಿ ಮಳೆ ಬಂದು ನಮ್ಮ ಬದುಕನ್ನ ಕೊಚ್ಚಿಕೊಂಡು ಹೋಗುತ್ತೆ ಅನ್ನೋ ಯೋಚನೆಯನ್ನ ಈ ಭಾಗದ ಜನರು ಕನಸು ಮನಸ್ಸಿನಲ್ಲಿಯೂ ಚಿಂತಿಸಿರಲಿಲ್ಲ. ಎಂತೆಂಥ ರಣಭೀಕರ ಮಳೆಯನ್ನ ನೋಡಿದ ಜನರು, ಮಳೆಯೊಂದಿಗೆ ಜೀವನವನ್ನ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದರು. ಮಳೆ, ಮಲೆನಾಡಿಗರ ಬದುಕಿನ ಒಂದು ಭಾಗವೇ ಆಗಿ ಹೋಗಿತ್ತು.

ಬಾಡಿಗೆ ಕೊಡದೇ ಕೈ ಎತ್ತಿದ ಸರ್ಕಾರ..!

ಬಾಡಿಗೆ ಮನೆಯ ದಾರಿ ಹಿಡಿದ ಜನರಿಗೆ ಹಣ ಹಾಕುವ ಭರವಸೆಯನ್ನ ಸರ್ಕಾರ ನೀಡ್ತು. ಆದ್ರೆ ಮೊದಲು 25 ಸಾವಿರ ನೀಡಿದ ಸರ್ಕಾರ, ಆಮೇಲೆ ಸಂತ್ರಸ್ಥರನ್ನ ಸಂಪೂರ್ಣವಾಗಿ ಮರೆತು ಬಿಟ್ತು. ಆಗಲೇ ಸಂತ್ರಸ್ಥರಿಗೆ ಅರಿವಾಗಿದ್ದು ನಾವು ಹೇಗೆ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದ್ದೀವಿ ಅನ್ನೋದು. ಬಾಡಿಗೆ ಕೊಡಲು ಸಂತ್ರಸ್ಥರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕಾಫಿ ತೋಟಗಳು ಕೊಚ್ಚಿ ಹೋಗಿದ್ವು, ಗದ್ದೆಗಳು ಸರ್ವನಾಶವಾಗಿದ್ವು. ಯಾವುದೇ ಆದಾಯವಿಲ್ಲ, ಹೇಗೆ ಬಾಡಿಗೆ ಕೊಡೋದು ? ಒಂದು ತಿಂಗಳು ಮನೆಯ ಮಾಲೀಕರಿಗೆ ಸಬೂಬು ಹೇಳಬಹುದು.. ಆದ್ರೆ ಪ್ರತಿ ಬಾರಿಯೂ ನೆಪ ಹೇಳಲು ಹೇಗೆ ಸಾಧ್ಯ..? ಅನ್ನೋ ನೋವು ಸಂತ್ರಸ್ಥರನ್ನ ಕಾಡತೊಡಗಿತ್ತು…

ಇದನ್ನೂ ಓದಿ :ಅಫ್ಘಾನಿಸ್ತಾನದಿಂದ ದೇಶದ ಹಿಂದೂ, ಸಿಖ್ಖರನ್ನು ಕರೆತರಲು ವ್ಯವಸ್ಥೆ ಮಾಡಿ : ಕಾಂಗ್ರೆಸ್

ಮನೆ ಕಟ್ಟಿಕೊಡಲು ಸರ್ಕಾರಕ್ಕೆ ಸಿಗುತ್ತಿಲ್ಲ ಜಾಗ.!

ಎರಡು ವರ್ಷ ಕಳೆದ್ರೂ 2019ರಲ್ಲಿ ಸಂತ್ರಸ್ಥರಾದ ಜನರಿಗೆ ಮನೆ ಕಟ್ಟಿಕೊಡಲು ಜಾಗವನ್ನ ಹುಡುಕುತ್ತಲೇ ಇದೆ. ಕೆಲವೆಡೆ ಸಂತ್ರಸ್ಥರಿಗೆ ಮನೆ ಕಟ್ಟಿಕೊಡಲು ಜಾಗ ಗುರುತಿಸಿದ್ರೂ ಕೆಲ ತಾಂತ್ರಿಕ ಕಾರಣಗಳಿಂದ ಆ ಜಾಗದಲ್ಲಿ ಮನೆಗಳಿಗೆ ಗುದ್ದಲಿ ಪೂಜೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ನಡುವೆ ಕೇವಲ 40 ಕುಟುಂಬಗಳಿಗೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯ ಸುಣ್ಣದಗೂಡಿನಲ್ಲಿ 5 ಲಕ್ಷ ವೆಚ್ಚದಲ್ಲಿ ಮನೆಯನ್ನ ನಿರ್ಮಿಸಲು ಜಾಗ ನೀಡಿದೆ. ಈ 40 ಕುಟುಂಬಗಳಲ್ಲಿ ಕೆಲವರು ಈ ಜಾಗದಲ್ಲಿ ಮನೆಯನ್ನ ನಿರ್ಮಿಸಿಕೊಂಡಿದ್ದರೂ ಕೂಡ ಯಾವುದೇ ಮೂಲ ಸೌಕರ್ಯವನ್ನ ಕಲ್ಪಿಸಿಕೊಟ್ಟಿಲ್ಲ. ಹೀಗಾಗಿ ಜನರು ತಮ್ಮ ಮೂಲ ಜಾಗಗಳಲ್ಲೂ ಮನೆಯನ್ನೂ ಕಟ್ಟಿಕೊಳ್ಳಲಾಗದೇ ಅನಿವಾರ್ಯವಾಗಿ ಬಾಡಿಗೆ ಮನೆಯಲ್ಲಿಯೇ ಇರುವಂತಾಗಿದೆ. ಮಳೆಯಿಂದ ಹೆಚ್ಚು ಬಾಧಿತವಾದ ಮೂಡಿಗೆರೆ, ಕಳಸ ತಾಲೂಕಿನ ಸಂತ್ರಸ್ಥರ ಬದುಕು ಇಂದಿಗೂ ಅತಂತ್ರರಾಗಿಯೇ ಇದ್ದಾರೆ.

ಇನ್ನಾದ್ರೂ ಕಣ್ಣುಬಿಡು ಸರ್ಕಾರ..!

ಸದ್ಯ ಯಾರನ್ನೂ ದೂಷಣೆ ಮಾಡಿ ಪ್ರಯೋಜನವಿಲ್ಲ. ಸಂತ್ರಸ್ಥರಂತೂ ನಿಜವಾಗಿಯೂ ಸಾಕಾಪ್ಪ ಸಾಕು, ಇವರ ಸಹವಾಸ ಅನ್ನೋ ಮಟ್ಟಿಗೆ ರೋಸಿಹೋಗಿದ್ದಾರೆ. ಹೇಗೋ ನಮ್ಮ ಬದುಕು ನಡಿಯುತ್ತೆ ಬಿಡಿ, ಬದುಕುವ ಎಲ್ಲಾ ಭರವಸೆಗಳನ್ನ ನಾವು ಬಿಟ್ಟಿದ್ದೀವಿ ಅನ್ನುವಷ್ಟರ ಮಟ್ಟಿಗೆ ಎಲ್ಲಾ ಪ್ರಯತ್ನಗಳನ್ನ ಮಾಡಿ ಅಸಹಾಯಕರಾಗಿದ್ದಾರೆ. ದಯವಿಟ್ಟು, ಬೆಚ್ಚಗಿನ ಮನೆಯಲ್ಲಿದ್ದುಕೊಂಡು ಮೈ ಕೊರೆಯುವ ಚಳಿ ಮಳೆಯಲ್ಲಿ ಒದ್ದಾಡುತ್ತ ಇರುವ ಸಂತ್ರಸ್ಥರಿಗೆ ಸುಳ್ಳು ಭರವಸೆಗಳನ್ನ ಕೊಡೋದನ್ನ ಇನ್ನಾದ್ರೂ ಬಿಡಿ. ಜೀವಮಾನವಿಡೀ ಸಂಪಾದನೆ ಮಾಡಿದ್ದ ಸರ್ವಸ್ವವನ್ನೂ ಕಳೆದುಕೊಂಡು ಸ್ವಾಭಿಮಾನಿಗಳು ಇದೀಗ ಸಂತ್ರಸ್ತರಾಗಿದ್ದಾರೆ. ಸಂತ್ರಸ್ಥರ ಭಿಕ್ಷುಕರಂತೆ ಅಲೆದಾಡಿಸದೇ ಇನ್ನಾದ್ರೂ ಪ್ರಾಮಾಣಿಕ ಪ್ರಯತ್ನ ಮಾಡಿ, ಆಗಸ್ಟ್ 9.. ಅಂದ್ರೆ ಬೆಚ್ಚಿ ಬೀಳುವ ಜನರ ಮೊಗದಲ್ಲಿ ಸಂತಸ ಮೂಡಲು ಕಾರಣರಾಗಿ, ನೊಂದು-ಬೆಂದವರ ಕಣ್ಣೀರನ್ನ ಓರೆಸಿ..!

Advertisement

Udayavani is now on Telegram. Click here to join our channel and stay updated with the latest news.

Next