ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾ ಣ ದಲ್ಲಿ ಮುಂಗಾರು ಕೈ ಹಿಡಿಯದ ಪರಿಣಾಮ ರೈತರ ಪಾಲಿಗೆ ಮಳೆ ಆಶ್ರಿತ ಪ್ರಮುಖ ವಾಣಿಜ್ಯ ಬೆಳೆ ಆಗಿರುವ ಬಡವರ ಬಾದಾಮಿ ನೆಲೆಗಡಲೆ ಬಿತ್ತನೆ ಭಾರೀ ಕುಸಿತ ಕಂಡಿದೆ. ಹೌದು, ಜಿಲ್ಲೆಯಲ್ಲಿ ಎರಡು ವರ್ಷಗಳ ಬಿತ್ತನೆ ಪ್ರಮಾಣ ಗಮನಿಸಿದರೆ ಈ ಬಾರಿ ಶೇ.20.31 ರಷ್ಟು ಮಾತ್ರ ನೆಲೆಗಡಲೆ ಬಿತ್ತನೆ ಆಗಿದ್ದು, ಮಳೆಯ ಕೊರತೆಯ ಪರಿಣಾಮ ಜಿಲ್ಲಾದ್ಯಂತ ಬಾಕಿ ಶೇ.80 ರಷ್ಟು ಬಿತ್ತನೆ ಕಾರ್ಯ ಆಗದೇ ಇರುವುದು ಕಂಡು ಬಂದಿದೆ.
ಶೇಂಗಾ ಬೆಳೆಗಾರರಲ್ಲಿ ನಿರಾಸೆ: ಮುಂಗಾರು ಪೂರ್ವ ದಲ್ಲಿ ಜಿಲ್ಲಾದ್ಯಂತ ಅಬ್ಬರಿಸಿದ್ದ ಮಳೆ ಮುಂಗಾರು ಹಂಗಾಮಿನಲ್ಲಿ ಕಣ್ಣಾಮುಚ್ಚಾಲೆ ಹಿನ್ನೆಲೆ ಖುಷ್ಕಿ ಬೇಸಾಯದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾದ ಶೇಂಗಾ ಹಾಗೂ ತೊಗರಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಭಾರೀ ಕುಸಿತ ಕಂಡು ನೆಲಗಲಡೆ ಬೆಳೆಯುವ ರೈತರಲ್ಲಿ ಈ ಬಾರಿ ಮುಂಗಾರು ನಿರಾಸೆ ಮೂಡಿಸಿದೆ.
ಚಿಂತಾಮಣಿಯಲ್ಲಿ 650 ಹೆಕ್ಟೇರ್ ಬಿತ್ತನೆ: ಜಿಲ್ಲೆಗೆ ಹೋಲಿಸಿಕೊಂಡರೆ ಶೇಂಗಾ ಬೆಳೆಯುವ ತಾಲೂಕುಗಳಲ್ಲಿ ಬಾಗೇಪಲ್ಲಿ ಮುಂಚೂಣಿಯಲ್ಲಿದೆ. ಆದರೆ ಅಲ್ಲಿ ಕೂಡ ಈ ಬಾರಿ ಶೇಂಗಾ ಬಿತ್ತನೆ ಕುಸಿದಿದೆ. ಒಟ್ಟು 11,423 ಹೆಕ್ಟೇರ್ ಪ್ರದೇಶದ ಶೇಂಗಾ ಬಿತ್ತನೆ ಗುರಿ ಹೊಂದಿದ್ದರೂ ಮಳೆಯ ಕೊರತೆಯ ಪರಿಣಾಮ ಕೇವಲ 4.150 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆ ಆಗಿದೆ. ಉಳಿದಂತೆ ಶೇಂಗಾ ಬೆಳೆಯುವ ತಾಲೂಕುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 8,250 ಹೆಕ್ಟೇರ್ ಗುರಿ ಹೊಂದಿದ್ದು, ಇಲ್ಲಿವರೆಗೂ ಕೇವಲ 650 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.
ತೊಗರಿ ಬಿತ್ತನೆಯಲ್ಲೂ ಕುಸಿತ: ಜಿಲ್ಲೆಯಲ್ಲಿ ನೆಲಗಡಲೆ ಶೇ.20 ರಷ್ಟು ಗುರಿ ಸಾಧಿಸಿದ್ದರೆ ಪ್ರಮುಖ ಬೇಳೆಕಾಳುಗಳಲ್ಲಿ ಒಂದಾದ ತೊಗರಿ ಕೂಡ ಸಮರ್ಪಕ ಮಳೆ ಬೀಳದ ಪರಿಣಾಮ ಜಿಲ್ಲೆಯಲ್ಲಿ ಒಟ್ಟು ಶೇ.7.82 ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 11,400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಿದ್ದರೂ ಇಲ್ಲಿವರೆಗೂ ಕೇವಲ 892 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ತೊಗರಿ ಬಿತ್ತನೆ ಮುಗಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಆಶ್ರಿತ ಬೆಳೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರಿಗೆ ಒಂದಿಷ್ಟು ಆದಾಯ ತಂದುಕೊಡುತ್ತಿದ್ದ ಶೇಂಗಾ ಹಾಗೂ ತೊಗರಿ ಬಿತ್ತನೆ ಪ್ರಮಾಣ ಮಳೆ ಕೊರತೆಯಿಂದ ಭಾರೀ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಮಳೆಯ ಆಟೋಟ ಹೀಗೆ ಮುಂದುವರಿದರೆ ರಾಗಿ, ಮುಸುಕಿನ ಜೋಳ, ಹುರುಳಿ ಮತ್ತಿತರ ಬೆಳೆಗಳು ಕೂಡ ರೈತರ ಕೈ ತಪ್ಪಿ ಅನ್ನದಾತರು ಬರದ ಕಾರ್ಮೋಡಕ್ಕೆ ಸಿಲುಕಬೇಕಾಗುತ್ತದೆ.
ಜಿಲ್ಲಾದ್ಯಂತ 16.65 ರಷ್ಟು ಬಿತ್ತನೆ : ಜಿಲ್ಲೆಯಲ್ಲಿ ಇನ್ನೂ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿರುವ ಪರಿಣಾಮ ಬಿತ್ತನೆ ಪ್ರಮಾಣ ಕನಿಷ್ಠ ಶೇ.20 ರಷ್ಟು ದಾಟಿಲ್ಲ. ಜಿಲ್ಲಾದ್ಯಂತ ಈ ವರ್ಷ ಬರೋಬ್ಬರಿ 1.48.592 ಹೆಕ್ಟೇರ್ ಪ್ರದೇಶದಲ್ಲಿ ಎಲ್ಲಾ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದರೂ ಕೂಡ ಜುಲೈ 10ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಕೇವಲ ಶೇ.16.65 ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಅಂದರೆ 1.48 ಲಕ್ಷ ಹೆಕ್ಟೇರ್ ಪೈಕಿ ಇಲ್ಲಿವರೆಗೂ ಕೇವಲ 24,740 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಇನ್ನೂ ಶೇ.84 ರಷ್ಟು ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಬಾಕಿ ಉಳಿದಿದೆ.
ಜಿಲ್ಲೆಯಲ್ಲಿ ನೆಲಗಲಡೆ ಹಾಗೂ ತೊಗರಿಗೆ ಬಿತ್ತನೆ ಅವಧಿ ಮುಗಿದಿದೆ. ಇನ್ನೂ ಮುಸುಕಿನ ಜೋಳ, ರಾಗಿ, ಹುರುಳಿಗೆ ಮಾತ್ರ ಅವಕಾಶ ಇದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 27,142 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಸಮರ್ಪಕವಾಗಿ ಮಳೆ ಆಗದ ಪರಿಣಾಮ ಇಲ್ಲಿವರೆಗೂ 5,513 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನೆಲಗಡಲೆ ಬಿತ್ತನೆ ಕಾರ್ಯ ನಡೆಸಿದ್ದು, ಶೇ.20.31 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಒಂದು ವಾರದಲ್ಲಿ ಸಮರ್ಪಕ ಮಳೆ ಆಗದೇ ಹೋದರೆ ತೊಗರಿಗೂ ಕೂಡ ಬಿತ್ತನೆ ಅವಧಿ ಮುಗಿಯುತ್ತದೆ.
● ಜಾವೀದಾ ನಸೀಮಾ ಖಾನಂ, ಜಂಟಿ ಕೃಷಿ ನಿರ್ದೇಶಕರು, ಚಿಕ್ಕಬಳ್ಳಾಪುರ
● ಕಾಗತಿ ನಾಗರಾಜಪ್ಪ