ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕಳೆದೊಂದು ವಾರ ದಿಂದ ಯೂರಿಯಾ ರಸಗೊಬ್ಬರಕ್ಕೆ ಭಾರೀ ಬೇಡಿಕೆ ಸೃಷ್ಟಿಯಾ ಗಿದ್ದು, ಕೆಲವು ಕಡೆ ವರ್ತಕರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಅನ್ನದಾತರಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಬಿತ್ತನೆ ಸಮಯಕ್ಕೆ ಸರಿಯಾಗಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಕೊಟ್ಟ ಪರಿಣಾಮ ರಸಗೊಬ್ಬರಕ್ಕೆ ಬೇಡಿಕೆ ಕ್ಷೀಣಿಸಿತ್ತು. ಆದರೆ ಸೆಪ್ಪೆಂಬರ್ ಎರಡನೇ ವಾರದಿಂದ ಜಿಲ್ಲೆಯಲ್ಲಿ ಮಳೆಯ ಕೃಪೆ ತೋರಿದ್ದು, ಧಾರಕಾರ ಮಳೆ ಜತೆಗೆ ಹಲವು ಕಡೆ ಭಾರೀ ಜೋರು ಮಳೆ ಆಗಿರುವುದರಿಂದ ಕೃಷಿ ಚುವಟಿಕೆಗಳಿಗೆ ಮತ್ತೆ ವೇಗ ಸಿಕ್ಕಿ ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಬಂದಿದೆ.
ರೈತರಿಗೆ ಯೂರಿಯಾ ದುಬಾರಿ: ಸದ್ಯ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರಕ್ಕೆ ರೈತರು ಪರದಾಟ ನಡೆಸುತ್ತಿದ್ದಾರೆ. ಅಳಿದು ಉಳಿದ ರಾಗಿ ಬೆಳೆಯನ್ನು ಉಳಿಸಿಕೊಳ್ಳಲು ಸದ್ಯ ಮಳೆ ಆಗುತ್ತಿರುವುದರಿಂದ ರೈತರು ಯೂರಿಯಾಗೆ ಬಳಸಲು ಮುಂದಾಗಿರುವು ದರಿಂದ ಜಿಲ್ಲೆಯಲ್ಲಿ ಯೂರಿಯಾಗೆ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿದೆ. ಕೆಲವು ಕಡೆ ಅಕ್ರಮವಾಗಿ ದಾಸ್ತುನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿ ರುವುದರಿಂದ ದುಬಾರಿ ಬೆಲೆ ಕೊಟ್ಟು ಯೂರಿಯಾ ರಸಗೊಬ್ಬರ ಖರೀದಿಸುವಂತಾಗಿದೆ. ಮತ್ತೆ ಕೆಲವು ಕಡೆ ಕೇಳಿದಷ್ಟು ಕಾಸು ಕೊಟ್ಟರೂ ಖರೀದಿಗೆ ಯೂರಿಯಾ ಸಿಗುತ್ತಿಲ್ಲ. ಬರೋಬ್ಬರಿ 45 ಕೆಜಿ ಯೂರಿಯಾ ಚೀಲ 1,600ರೂ. ಇದ್ದು ಸರ್ಕಾರದ ಸಬ್ಸಿಡಿ ಕಳೆದರೆ 1 ಚೀಲ 280 ರಿಂದ 300ಕ್ಕೆ ಮಾರಾಟ ಆಗಬೇಕು. ಆದರೆ, ಕೆಲ ರಸಗೊಬ್ಬರ ಅಂಗಡಿ ಮಾಲೀಕರು ಬೇಡಿಕೆಯನ್ನೆ ಬಂಡ ವಾಳ ಮಾಡಿಕೊಂಡು ಯೂರಿಯಾವನ್ನು ಸಬ್ಸಿಡಿ ಹೊರ ತುಪಡಿಸಿ 400 ರಿಂದ 500 ರೂ.ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರಲ್ಲಿ ಬೇಡಿಕೆ: ಜಿಲ್ಲೆಯ ಆಂಧ್ರದ ಗಡಿ ಭಾಗದಲ್ಲಿರುವ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಯೂರಿಯಾಗೆ ಭಾರೀ ಬೇಡಿಕೆ ಕಂಡು ಬಂದಿದೆ. ನಿತ್ಯ ರಸಗೊಬ್ಬರ ಅಂಗಡಿಗಳ ಮುಂದೆ ಸರದಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಅಧಿಕಾರಿಗಳು ಕೇಳುವ ಪ್ರಕಾರ ಯೂರಿಯಾ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಎಷ್ಟೋ ಬೇಕಿತ್ತೋ ಅಷ್ಟು ದಾಸ್ತುನು ಇದೆ. ಆದರೆ ಯೂರಿಯಾವನ್ನು ಅಗತ್ಯಕ್ಕಿಂತ ಹೆಚ್ಚಾಗಿ ರೈತರು ಬಳಕೆ ಮಾಡುತ್ತಿವುದರಿಂದ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ. ಯೂರಿಯಾ ಕೇಳಿದರೆ ಬೇರೆ ರಸಗೊಬ್ಬರ ಖರೀದಿಗೆ ಒತ್ತಡ: ಜಿಲ್ಲೆಯಲ್ಲಿ ಯೂರಿಯಾಗೆ ಬೇಡಿಕೆ ಇದೆ. ತಕ್ಕಮಟ್ಟಿಗೆ ದಾಸ್ತಾನು ಇದೆ. ಆದರೆ ಕೆಲವು ರಸಗೊಬ್ಬರ ಅಂಗಡಿ ಮಾಲೀಕರು ಯೂರಿಯಾ ಕೇಳಿದರೆ ಅದರ ಜತೆಗೆ ಬೇರೆ ಬೇರೆ ರಸಗೊಬ್ಬರಗಳನ್ನು ಎರಡು ಮೂರು ಮೂಟೆ ಖರೀದಿಸುವಂತೆ ಒತ್ತಡ ಹಾಕುತ್ತಿದ್ದಾರೆಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಮಳೆ ಕೊರತೆಯಿಂದ ದಾಸ್ತುನು ಆಗಿರುವ ರಸಗೊಬ್ಬರ ಮಾರಾಟ ಆಗದೇ ಉಳಿದುಕೊಂಡಿರುವುದರಿಂದ ವರ್ತಕರು ಯೂರಿಯಾಗೆ ಇರುವ ಬೇಡಿಕೆ ನೆಪದಲ್ಲಿ ತಮ್ಮಲ್ಲಿ ಉಳಿದಿರುವ ಇತರೇ ರಸಗೊಬ್ಬರ ಮಾರಾಟಕ್ಕೆ ಮುಂದಾಗಿರುವುದರಿಂದ ಕೆಲವು ಕಡೆ ರೈತರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ.
ವಾರದಿಂದ ಉತ್ತಮ ಮಳೆ ಆಗುತ್ತಿದೆ. ಇದರಿಂದ ರಾಗಿಗೆ ಈಗ ಯೂರಿಯಾ ಹಾಕಿದರೆ ಉತ್ತಮ. ಆದರೆ ನಮ್ಮ ಭಾಗದಲ್ಲಿ ಯೂರಿಯಾ ಸಿಗುತ್ತಿಲ್ಲ. ಕೇಳಿದರೆ ಸರಬರಾಜು ಇಲ್ಲ ಅಂತಾರೆ. ಕೆಲವು ಕಡೆ ಯೂರಿಯಾ ಕೊಡುತ್ತೇವೆ. ಬೇರೆ ರಸಗೊಬ್ಬರ ಎರಡು ಮೂಟೆ ಖರೀದಿ ಮಾಡಿ ಅಂತ ಒತ್ತಡ ಹಾಕುತ್ತಿದ್ದಾರೆ.
– ದ್ವಾರಕನಾಥಗುಪ್ತ, ಡಿ.ಪಾಳ್ಯ ರೈತ, ಗೌರಿಬಿದನೂರು.
ಯೂರಿಯಾ ಬಳೆಕೆದಾರರ ಸಂಖ್ಯೆ ಹೆಚ್ಚಾಗಿದೆ. ಮೇವು, ಜೋಳ ಸೇರಿ ದಂತೆ ಹಲವು ತೋಟಗಾರಿಕಾ ಬೆಳೆಗಳಿಗೂ ಇತ್ತೀಚೆಗೆ ಯೂರಿಯಾ ಬಳಕೆ ಮಾಡುವುದು ಹೆಚ್ಚಾಗಿದೆ. ಮಾಮೂಲಿ ಬೇಡಿಕೆಯಷ್ಟೇ ಸರಬರಾಜು ಇದೆ. ಆದರೆ ಬಳಕೆದಾರರು ಹೆಚ್ಚಾಗಿರುವ ಕಾರಣ ಯೂರಿಯಾಗೆ ಹೆಚ್ಚು ಬೇಡಿಕೆ ಕಂಡು ಬಂದಿದೆ.
-ಡಾ.ಸಿ.ಶಿವಣ್ಣ, ಜಿಲ್ಲಾಧ್ಯಕ್ಷರು. ಕೃಷಿ ಪರಿಕರಗಳ ಮಾರಾಟಗಾರರ ಸಂಘ.
– ಕಾಗತಿ ನಾಗರಾಜಪ್ಪ