ಗಜೇಂದ್ರಗಡ: ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ತೇವಾಂಶ ಹೆಚ್ಚಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಇಳುವರಿ ಕುಂಠಿತಗೊಂಡಿದ್ದು, ಅನ್ನದಾತರಲ್ಲಿ ಆತಂಕ ಮನೆಮಾಡಿದೆ.
ಮುಂಗಾರು ಹಂಗಾಮಿನ ಮಳೆ ಮೊದಲು ಉತ್ತಮವಾಗಿ ಸುರಿಯಿತು. ಇದರಿಂದ ಹರ್ಷಿತರಾದ ಅನ್ನದಾತ ಗಜೇಂದ್ರಗಡ, ರಾಜೂರು, ಕಾಲಕಾಲೇಶ್ವರ, ದಿಂಡೂರ, ಲಕ್ಕಲಕಟ್ಟಿ, ಸೂಡಿ, ಮುಶಿಗೇರಿ, ಇಟಗಿ ಸೇರಿದಂತೆ ಸುತ್ತಲಿನ ನೂರಾರು ಗ್ರಾಮಗಳಲ್ಲಿ ಈ ಬಾರಿ 20,989 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದ. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ, ಬೆಳೆಗೆ ಹಳದಿ ರೋಗ ಮತ್ತು ಕಾಯಿ ಕಟ್ಟಿದ ನಂತರ ಮಂಕು ರೋಗ ತಗುಲಿದ ಪರಿಣಾಮ ಇಳುವರಿಯಲ್ಲಿ ಕುಂಠಿತವಾಗಿದೆ.
ಕಳೆದ ಎರಡು ವರ್ಷ ಬರಗಾಲ ಬವಣೆಗೆ ಸಿಲುಕಿ ನಲುಗಿರುವ ರೈತರು ಸಾಲ, ಸೂಲ ಮಾಡಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಇನ್ನಿತರ ಕೃಷಿ ಕಾರ್ಯಗಳಿಗೆ ಕ್ಕೆ ಅಪಾರ ಪ್ರಮಾಣದ ಹಣ ವೆಚ್ಚ ಮಾಡಿದ್ದರು. ಆದರೆ ಪ್ರಸ್ತುತ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಾರದಿರುವುದು ಚಿಂತೆಗೀಡು ಮಾಡಿದೆ. ಹೆಸರು ಬುಡ್ಡಿ ಬಿಡಿಸಲು ದಿನಕ್ಕೆ 200 ರೂ. ದುಬಾರಿ ವೆಚ್ಚದ ಕೂಲಿ ನೀಡಬೇಕಿದೆ. ಎಲ್ಲವನ್ನೂ ಲೆಕ್ಕ ಹಾಕಿ ನೋಡಿದಾಗ ಆದಾಯಕ್ಕಿಂತ ಖರ್ಚೇ ಅಧಿಕವಾಗುತ್ತಿದೆ.
ಒಂದು ಎಕರೆಗೆ ಕನಿಷ್ಟ 2 ರಿಂದ 3 ಕ್ವಿಂಟಲ್ ಇಳುವರಿ ಬಂದರೆ ಲಾಭ. ಆದರೆ ಈಗ ಎಕರೆಗೆ 1 ರಿಂದ 2 ಕ್ವಿಂಟಲ್ ಸಹ ಇಳುವರಿ ಬರದಂತಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 1500 ರೂ. ನೀಡಲಾಗುತ್ತಿದೆ. ಜತೆಗೆ ಬೆಳೆಯ ಗುಣಮಟ್ಟದ ನೆಪದಿಂದ ಕಡಿಮೆ ಬೆಲೆ ನಿಗದಿಯಾಗುತ್ತಿರುವುದು ರೈತ ಸಮೂಹಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ ಎಂದು ರೈತರು ನೊಂದು ಹೇಳುತ್ತಾರೆ.ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ ಬೆಳೆದ ಹೆಸರು ಕೃಷಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಹೆಸರು ಬೆಳೆಯಲಾಗುತ್ತದೆ. ಆದರೆ ವಿವಿಧ ಕಾರಣಗಳಿಂದ ಇಳುವರಿ ಕುಂಠಿವಾಗುತ್ತಿದೆ. ಬೆಲೆಯೂ ಪಾತಾಳಕ್ಕಿಳಿಯುತ್ತಿರುವುದು ಅನ್ನದಾತನಲ್ಲಿ ಆತಂಕ ಮನೆ ಮಾಡಿದೆ.
•ಡಿ.ಜಿ ಮೋಮಿನ್