Advertisement

ಕುಂಭದ್ರೋಣ-ಆಶ್ಲೇಷಾ ಆರ್ಭಟ ತಂದಿಟ್ಟ ಸಂಕಷ್ಟ

11:42 AM Aug 11, 2019 | Team Udayavani |

ಗೋಕಾಕ: ಕುಂಭದ್ರೋಣ-ಆಶ್ಲೇಷಾ ಮಳೆಯು ಗೋಕಾಕ ಹಾಗೂ ಮೂಡಲಗಿ ತಾಲೂಕಿಗೆ ಮಹಾ ಮಾರಿಯಾಗಿದೆ. ವರುಣನ ಆರ್ಭಟದಿಂದಾಗಿ ನೆರೆ ಸಂತ್ರಸ್ತರಿಗೆ ಜವರಾಯನಾಗಿ ಗೋಚರಿಸುತ್ತಿದ್ದಾನೆ.

Advertisement

ಕರದಂಟಿನ ನಾಡಿಗೆ ಮಂಗಳ ವಾರದಿಂದ ಆರಂಭವಾದ ಕಂಟಕದ ದಿನಗಳು ಶನಿವಾರದವರೆಗೂ ಮುಂದು ವರೆದಿವೆ. ಪ್ರಳಯೋಪಾ ದಿಯಾಗಿ ನೀರಿನ ಅಬ್ಬರ ನಗರ ವಾಸಿಗಳ ಮನೆ ನುಗ್ಗಿರುವುದರಿಂದ ಸಂತ್ರಸ್ತರಲ್ಲಿ ದು:ಖ ಉಮ್ಮಳಿಸುತ್ತಿದೆ. ಮನೆ, ಆಸ್ತಿ-ಪಾಸ್ತಿ, ದನ-ಕರು, ಬಟ್ಟೆ-ಬರೆಗಳನ್ನು ಪ್ರವಾಹದ ನೀರಿನಲ್ಲಿ ಬಿಟ್ಟು ಜೀವ ಉಳಿದರೇ ಸಾಕು ಎಂದು ವೃದ್ಧರು, ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಧಾವಿಸಿದ ನಿರಾಶ್ರಿತರು ಗಂಜಿ ಕೇಂದ್ರಗಳಲ್ಲಿ ಹಾಗೂ ನೆಂಟರಿಷ್ಟರು ಹಾಗೂ ಸ್ನೇಹಿತರ ಮನೆಗಳಲ್ಲಿ ವಾಸವಾಗಿದ್ದಾರೆ. ಸಂಘ-ಸಂಸ್ಥೆಗಳು ನೀಡುತ್ತಿರುವ ನೆರವಿನಿಂದ ಈಗಿನ ಬದುಕನ್ನು ಸಾಗಿಸುತ್ತಿದ್ದು ಮುಂದಿನ ಜೀವನ ಬಗ್ಗೆ ಚಿಂತಿಸುತ್ತಾ ದಿನಗಳನ್ನು ಕಳೆಯುತ್ತಿದ್ದಾರೆ. ತಾಲೂಕಾಡಳಿತ ವತಿಯಿಂದ ಹೆಸರಿಗೆ ಮಾತ್ರ ಕೇವಲ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ, ಸರ್ಕಾರ ಮಾಡದೆ ಇರುವ ಕಾರ್ಯವನ್ನು ಇಲ್ಲಿಯ ವಸತಿ-ಹೀನರಿಗೆ ಸಂಘ-ಸಂಸ್ಥೆಗಳು, ಹೊಟೇಲ ಮಾಲಿಕರು, ವಿವಿಧ ಸಮಾಜದ ಬಾಂಧವರು, ಉದ್ಯಮಿ ಗಳು, ಖಾಸಗಿ ವೈದ್ಯರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸಂತ್ರಸ್ತರನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಅವರ ದುಃಖದಲ್ಲಿ ಭಾಗಿಯಾಗಿ ಊಟ-ಉಪಚಾರ, ಹೊದಿಕೆ, ಬಟ್ಟೆ, ನೀರು, ಹಾಲು ಸೇರಿದಂತೆ ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಔಷಧೋಪಾಚಾರ ನೀಡುತ್ತಿರುವುದು ಶ್ಲಾಘನೀಯ.

ಮನೆ ನೀರು ಪಾಲು: ಅಡಿಬಟ್ಟಿ ಬಡಾವಣೆ, ವಡ್ಡರ ಗಲ್ಲಿ, ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಲಕ್ಕಡ ಗಲ್ಲಿ, ಬೋಜಗಾರ ಗಲ್ಲಿ, ಡೋರ ಗಲ್ಲಿ, ದಾಳಂಬರಿ ತೋಟ, ಹಾಳಬಾಗ ಗಲ್ಲಿ, ಕಿಲ್ಲಾ, ಮಾರ್ಕಂಡೇಯ ನಗರದ ಆಶ್ರಯ ಬಡಾವಣೆ, ಸೇರಿದಂತೆ ಇನ್ನೂ ಹಲವಾರು ನೆರೆ ಪೀಡಿತ ಪ್ರದೇಶಗಳಲ್ಲಿದ್ದ ಸುಮಾರು 2000ಕ್ಕೂ ಹೆಚ್ಚು ಮನೆಗಳು ಬಿದ್ದು ಮನೆಯಲ್ಲಿದ್ದ ವಸ್ತುಗಳು ನದಿ ನೀರಿನಲ್ಲಿ ಹರಿದು ಹೋಗಿವೆ. ಸಾವಿರಾರು ಕುಟುಂಬಗಳು ಪ್ರವಾಹದಿಂದಾಗಿ ದಿಕ್ಕು ತೋಚದೇ ಗಂಜಿ ಕೇಂದ್ರಗಳಲ್ಲಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

 

•ಮಲ್ಲಪ್ಪ ದಾಸಪ್ಪಗೋಳ

Advertisement
Advertisement

Udayavani is now on Telegram. Click here to join our channel and stay updated with the latest news.

Next