Advertisement

ನಂದಿಗಿರಿಧಾಮದಲ್ಲಿ ಹರಿದುಬಂದ ಜನಸಾಗರ; ಕಣ್ಮರೆಯಾದ ಕೋವಿಡ್ ರೂಲ್ಸ್!

05:21 PM Jul 11, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಗೊಂಡ ಬಳಿಕ ಸರ್ಕಾರ ಅನ್ ಲಾಕ್ :3ಎಂದು ಘೋಷಣೆ ಮಾಡಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿತ್ತು. ಅದೇ ರೀತಿ ಪ್ರವಾಸಿ ತಾಣಗಳಗೆ ಮಾರ್ಗಸೂಚಿಗಳನ್ನು ಪಾಲಿಸಿ ಪ್ರವೇಶ ಮುಕ್ತಗೊಳಿಸಲಾಗಿತ್ತು. ಕರ್ನಾಟಕದ ಊಟಿ ಎಂದು ಖ್ಯಾತಿ ಹೊಂದಿರುವ  ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಜನಸಾಗರವೇ ಹರಿದುಬಂದಿದೆ. ಆದರೆ ಕೋವಿಡ್ ರೂಲ್ಸ್ ಮಾತ್ರ ಕಣ್ಮರೆಯಾಗಿದೆ.

Advertisement

ರಾಜ್ಯ ಸರ್ಕಾರ ವೀಕೆಂಡ್ ಲಾಕ್ ಡೌನ್ ಸಹ ಸಡಿಲಗೊಳಿಸಿದರಿಂದ  ಭಾನುವಾರವಾದ ಇಂದು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ನಂದಿ ಗಿರಿಧಾಮಕ್ಕೆ ಲಗ್ಗೆಯಿಟ್ಟಿದೆ. ಪ್ರವೇಶದ್ವಾರದಲ್ಲಿ ಮಾರ್ಗಸೂಚಿಯಂತೆ ಮಾಸ್ಕನ್ನು ಧರಿಸಿ ಪ್ರವೇಶ ಮಾಡುವ ಪ್ರವಾಸಿಗರು ನಂತರ ನಿಯಮಗಳನ್ನೇ ಮರೆತು ಹೋಗಿದ್ದಾರೆ.

ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಬಂದಿರುವ ಪ್ರವಾಸಿಗರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಎಲ್ಲಿ ನೋಡಿದರೂ ವಾಹನಗಳ ದಟ್ಟಣೆ ಕಂಡುಬರುತ್ತಿದೆ ಜನವೋ ಜನ ಕಂಡುಬರುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಆಗಮನದಿಂದ ಟ್ರಾಫಿಕ್ ಜಾಮ್ ಆಗಿದೆ.

ಇದನ್ನೂ ಓದಿ:ದೇಶದಲ್ಲಿ 41,506 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆ; 895 ಮಂದಿ ಸಾವು

ರಾಜ್ಯದಲ್ಲಿ ಕೋವಿಡ್ ಸೋಂಕಿನ ಕಾರಣದಿಂದ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವಡೆ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಪ್ರಾಣಗಳನ್ನು ಕಳೆದುಕೊಂಡಿರುವ ದೃಶ್ಯಗಳನ್ನು ಇನ್ನೂ ಮಾಸಿ ಹೋಗಿಲ್ಲ  ಸರ್ಕಾರ ಕೋವಿಡ್ 19 ಸೋಂಕು ತಡೆಗಟ್ಟಲು ಜನತಾ ಕರ್ಫ್ಯೂ ಲಾಕ್ಡೌನ್ ಮುಂತಾದ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡು ಜನರ ನೆಮ್ಮದಿ ಭಂಗವಾಗಿತ್ತು. ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೆಲವೊಂದು ಆದೇಶಗಳನ್ನು ಪರಿಷ್ಕರಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿತ್ತು ಇದರಿಂದ ಜಿಲ್ಲೆಯ ಪ್ರವಾಸಿತಾಣ ನಂದಿ ಗಿರಿಧಾಮಕ್ಕೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ಜನಸಾಗರವೇ ಹರಿದು ಬಂದು ಸರ್ಕಾರದ ನಿಯಮಗಳನ್ನು ಧಿಕ್ಕರಿಸಿದ್ದಾರೆ.

Advertisement

ನಂದಿಗಿರಿಧಾಮದಲ್ಲಿ ಹರಿದ ಬಂದಿರುವ ಜನಸಾಗರವನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಕೋವಿಡ್ ಸೋಂಕು ಇದೆಯೇ  ಎಂಬ ಅನುಮಾನ ಕಾಡುತ್ತಿದೆ. ರಾಜ್ಯ ಸರ್ಕಾರ ಕೊಟ್ಟಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ ಬದಲಿಗೆ ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ರೀತಿಯ ಜನಸಾಗರ ಹರಿದು ಬಂದರೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಕೋವಿಡ್ ಹಾಟ್ಸ್ಪಾಟ್ ಕೇಂದ್ರ ಆಗುವುದರಲ್ಲಿ ಸಂಶಯವಿಲ್ಲ.

ಈಗಲಾದರೂ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಬೇಕೆಂದು ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next