Advertisement

ಉತ್ತರ ಕರ್ನಾಟಕದಲ್ಲಿ ಮತ್ತೆ ಜಲಪ್ರಳಯ ಭೀತಿ

10:17 AM Oct 21, 2019 | Team Udayavani |

– ಮಲಪ್ರಭಾ, ಕೃಷ್ಣಾ, ವೇದಗಂಗಾ, ದೂಧಗಂಗಾ ನದಿ ಮಟ್ಟ ಹೆಚ್ಚಳ
– ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಆಸ್ಪತ್ರೆಗೆ ನುಗ್ಗಿದ ನೀರು
– ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲಿ ಕೊಚ್ಚಿ ಹೊದ ಕಾರು-ಬೈಕ್‌
– ಡೋಣಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರ ರಕ್ಷಣೆ

Advertisement

ಹುಬ್ಬಳ್ಳಿ: ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕದಲ್ಲಿ ಮತ್ತೆ ಜಲಪ್ರಳಯ ಭೀತಿ ಎದುರಾಗಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ, ವೇದಗಂಗಾ, ದೂಧಗಂಗಾ, ಮಲಪ್ರಭಾ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.

ಬೆಳಗಾವಿ ಜಿಲ್ಲೆಯ ಒಂದೆರಡು ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕು ಕೇಂದ್ರಗಳು ಮಳೆಯ ಅವಾಂತರಕ್ಕೆ ತುತ್ತಾಗಿವೆ. ಮಳೆಯ ರಭಸಕ್ಕೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸುತಗಟ್ಟಿ ಹಾಗೂ ಹೊನಗಾ ಗ್ರಾಮದ ಹತ್ತಿರ ರಾಷ್ಟಿÅàಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಜಲಾವೃತವಾಗಿದೆ. ಕೆಲ ಪ್ರದೇಶಗಳು ನಡುಗಡ್ಡೆಯಂತಾಗಿದ್ದು, ಕಾರು, ದ್ವಿಚಕ್ರ ವಾಹನ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲೂ 10ಕ್ಕೂ ಹೆಚ್ಚು ಬೈಕ್‌ಗಳು ಸೇರಿದಂತೆ ಅನೇಕ ವಾಹನಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ.

ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಆಸ್ಪತ್ರೆಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಚಿಕ್ಕೋಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸವದತ್ತಿ-ಧಾರವಾಡ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಕಿರು ಸೇತುವೆ ಮುಳುಗಡೆಯಾಗಿದೆ. ಅಥಣಿ ಹಾಗೂ ಗೋಕಾಕ ತಾಲೂಕುಗಳಲ್ಲಿ ಮಳೆಯಾಗಿದ್ದರೂ ಯಾವುದೇ ಅನಾಹುತವಾಗಿಲ್ಲ.

Advertisement

ಮಲಪ್ರಭಾ ಜಲಾಶಯಕ್ಕೆ ಹೆಚ್ಚು ನೀರು:
ಮಲಪ್ರಭಾ ನದಿಯ ಒಳ ಹಾಗೂ ಹೊರಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ನದಿ ಪಾತ್ರದ ಗ್ರಾಮಗಳ ಮತ್ತೆ ಪ್ರವಾಹ ಎದುರಾಗಿದೆ. ಮಲಪ್ರಭಾ ಜಲಾಶಯಕ್ಕೆ 18 ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು ಇದೇ ಪ್ರಮಾಣದಲ್ಲಿ ನೀರನ್ನು ಹೊರಗಡೆ ಬಿಡಲಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟೆ ತಾಲೂಕಿನ ಕಲ್ಲದೇವನಹಳ್ಳಿ ಬಳಿ ಸೇತುವೆ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರು ಈಜಿ ದಡ ಸೇರಿದ್ದಾರೆ. ಗದಗ, ಹಾವೇರಿ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next