Advertisement

ಹೋದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿ!

12:02 PM Jun 01, 2019 | sudhir |

ಉಡುಪಿ: ಹೋದ ವರ್ಷ ಇದೇ ಸಮಯ ಉಡುಪಿ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಮಳೆ ಬಂದು ಅಪಾರ ಹಾನಿಯುಂಟಾಗಿತ್ತು. ಈ ಬಾರಿ ಇದೇ ವೇಳೆ ರಣ ಬಿಸಿಲು ಮುಂದುವರಿದಿದ್ದು ನೀರಿಗಾಗಿ ಹಾಹಾಕಾರ ಮನೆಮಾಡಿದೆ.

Advertisement

ಮೇ ತಿಂಗಳ ಕೊನೆಯ ಭಾಗದಲ್ಲಿ ಎಡೆಬಿಡದೆ ಸುರಿದ ಮಳೆ-ಗಾಳಿ-ಸಿಡಿಲಿಗೆ ಉಡುಪಿ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಆಸ್ತಿಪಾಸ್ತಿ ಹಾನಿಯಾಗಿತ್ತು. ಆಗ ಮೂರು ಜೀವ ಹಾನಿ, ಐದು ಜಾನುವಾರುಗಳ ಜೀವ ಹಾನಿ, ಆಗ 6 ಮನೆ ಪೂರ್ಣ, 243 ಪಕ್ಕಾ ಮನೆ, ಆರು ಕಚ್ಚಾ ಮನೆ, ನಾಲ್ಕು ಅಂಗನವಾಡಿ, ಅಂಗಡಿಗಳು, 53 ತೋಟಗಳಿಗೆ ಹಾನಿಯಾದ ಪ್ರಕರಣಗಳು ಸಂಭವಿಸಿತ್ತು.

ವಿದ್ಯುತ್‌ ಕಂಬಗಳು, ರಸ್ತೆ, ಕಟ್ಟಡ, ಮನೆ ಹಾನಿ ಹೀಗೆ ಒಟ್ಟು ಆದ ನಷ್ಟ 14 ಕೋ.ರೂ. ರಥಬೀದಿ ಸೇರಿದಂತೆ ನಗರದ ತಗ್ಗು ಪ್ರದೇಶಗಳಲ್ಲಿ ಎರಡು 3 ಅಡಿ ನೀರು ನಿಂತಿತ್ತು. ಆಗಲೂ ಕೃತಕ ನೆರೆ ಸಂಭವಿಸಿತ್ತು.

ಹೋದ ವರ್ಷ ವಿದ್ಯಾರ್ಥಿನಿ ನೀರಿನ ರಭಸಕ್ಕೆ ಸಿಲುಕಿ ಸಾವು ಸಂಭವಿಸಿದ ಕಾರಣ ಎರಡು ದಿನ ರಜೆ ಘೋಷಿಸಲಾಗಿತ್ತು. ಈ ವರ್ಷ ಶಾಲೆ ಆರಂಭವಾದರೂ ಬಿಸಿಯೂಟಕ್ಕೆ ನೀರಿನ ತತ್ವಾರ ಇರುವುದರಿಂದ ಮಧ್ಯಾಹ್ನದ ಅನಂತರ ರಜೆ ಸಾರಲಾಗುತ್ತಿದೆ.

ಸ್ತಬ್ಧವಾಗಿದ್ದ ನಗರ
ನಗರದ ಶಿರಿಬೀಡು, ಮಠದಬೆಟ್ಟು, ರಾಜಾಂಗಣ ಪಾರ್ಕಿಂಗ್‌ ಪ್ರದೇಶದ ಸಮೀಪ ಸೇರಿದಂತೆ ವಿವಿಧೆಡೆ ನೀರು ನಿಂತು ಸ್ಥಳೀಯರು ತೊಂದರೆಗೊಳಗಾಗಿದ್ದರು. ಕರಾವಳಿ ಬೈಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ವ್ಯತ್ಯಯವಾಗಿತ್ತು. ಬ್ರಹ್ಮಾವರ ಇಂದಿರಾನಗರ, ವಾರಂಬಳ್ಳಿ, ಸಾಲಿಕೇರಿ, ಬೆಳ್ಮಣ್‌, ಮುಂಡ್ಕೂರು, ಸಚ್ಚೇರಿ ಪೇಟೆ, ಬೋಳ, ಎರ್ಮಾಳು, ಉಚ್ಚಿಲ, ಪಲಿಮಾರು, ಹೆಜಮಾಡಿ, ಕೊಲ್ಲೂರು, ಜಡ್ಕಲ್‌, ಮುದೂರು, ವಂಡ್ಸೆ, ತಳಕೋಡು, ಕಾನಿR, ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಹುಣ್ಸೆಮಕ್ಕಿ, ಕಾಳಾವರ, ಬಿದ್ಕಲ್‌ಕಟ್ಟೆ, ಯಡಾಡಿ-ಮತ್ಯಾಡಿ ಮುಂತಾದೆಡೆ ಅವ್ಯಾಹತವಾಗಿ ಮಳೆ ಸುರಿದು ಅಪಾರ ಹಾನಿಯಾಗಿತ್ತು.

Advertisement

ಅತಿವೃಷ್ಟಿ, ಅನಾವೃಷ್ಟಿ ಚರ್ಚೆ!
ಹೋದ ವರ್ಷ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಯವರಿಂದ ಮಳೆಯಿಂದ ಆಗುತ್ತಿದ್ದ ಹಾನಿ ಬಗ್ಗೆ ಮಾಹಿತಿ ಪಡೆದಿದ್ದರೆ ಈಗ ಬರಗಾಲವನ್ನು ಹೇಗೆ ನಿಭಾಯಿಸಬೇಕೆಂದು ಚರ್ಚಿಸುವ ಸ್ಥಿತಿಯಲ್ಲಿದೆ.

ಶೇ.96 ಮಳೆ ಕೊರತೆ
2018ರ ಮೇ ಕೊನೆಯಲ್ಲಿ 357 ಮಿ.ಮೀ. ಮಳೆಯಾಗಿತ್ತು. ಈ ಅವಧಿಯಲ್ಲಿ ವಾಡಿಕೆ ಮಳೆ 170 ಮಿ.ಮೀ. ಆಗಬೇಕಿತ್ತು. 2017ರಲ್ಲಿ 69.2 ಮಿ.ಮೀ. ಮಳೆ ಇದೇ ವೇಳೆ ಆಗಿತ್ತು. ಈ ವರ್ಷ ಕೇವಲ 7.3 ಮಿ.ಮೀ. ಮಳೆಯಾಗಿದೆ. ಅಂದರೆ ಶೇ.96 ಕಡಿಮೆ ಮಳೆಯಾಗಿದೆ.

ಅಂದು ಉಕ್ಕಿದ, ಇಂದು ಬರಿದಾದ ಸ್ವರ್ಣೆ
ಹೋದ ವರ್ಷ ಮೇ ತಿಂಗಳಾಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಸ್ವರ್ಣಾ ನದಿ ಉಕ್ಕಿ ಹರಿಯುತ್ತಿತ್ತು. ಈಗ ಅದೇ ವೇಳೆ ನದಿ ಬರಡಾಗಿದೆ. ಹೋದ ವರ್ಷ ಮೇ 5-6ರಂದು ಬಜೆಯಲ್ಲಿ ಉಕ್ಕಿ ಹರಿಯಲು ಆರಂಭಗೊಂಡಿತ್ತು. ಇದಕ್ಕೂ ಕೆಲವು ದಿನಗಳ ಮುನ್ನ ಮುಂಗಾರು ಆರಂಭಗೊಂಡಿತ್ತು.

ಈ ವರ್ಷ ಮಾ. 26ರಿಂದ ಸ್ವರ್ಣಾ ಬಜೆ ಅಣೆಕಟ್ಟಿನಲ್ಲಿ ನೀರು ಬರಿದಾಗಿ ನೀರು ಪೂರೈಕೆ ಒಂದು ವಾರ ಸ್ಥಗಿತಗೊಂಡಿತು. ಅನಂತರ ಶಾಸಕ ಕೆ.ರಘುಪತಿ ಭಟ್‌ ಅವರು ಸಾರ್ವಜನಿಕರ ಸಹಕಾರದಿಂದ ಶ್ರಮದಾನ ಮಾಡಿ ಗುಂಡಿಗಳಲ್ಲಿ ಶೇಖರಣಗೊಂಡಿದ್ದ ನೀರನ್ನು ಪಂಪಿಂಗ್‌ ಮಾಡಿ ಬಿಡುತ್ತಿದ್ದಾರೆ. ಈಗ ಆರು ದಿನಗಳಿಗೊಮ್ಮೆ ನೀರು ಪೂರೈಕೆ ನಡೆಯುತ್ತಿದೆ. ಈ ನೀರು ಖಾಲಿಯಾದ ಬಳಿಕ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next