ಚಾರ್ಮಾಡಿ ಹೆಸರು ಕೇಳದವರಿಲ್ಲ ಒಂದು ವೇಳೆ ಕೇಳರಿಯದವರು ಇತ್ತೀಚಿನ ಪತ್ರಿಕೆಗಳನ್ನು ಮೆಲುಕು ಹಾಕಿದರೆ ಪತ್ರಿಕೆ ತುಂಬೆಲ್ಲಾ ಚಾರ್ಮಾಡಿ ಘಾಟಿಯದ್ದೇ ಸುದ್ಧಿ, ಹೌದು ಇದು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಪ್ರಯಾಣಿಕರು ರಾತ್ರಿಯಿಡೀ ಮಕ್ಕಳು ಮರಿಯೆನ್ನದೆ ರಸ್ತೆಯಲ್ಲೇ ಕಾಲಕಳೆದ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪ್ರಕೃತಿಯ ಏರಿಳಿತಗಳಿಗೆ ತಲೆಬಾಗಲೇ ಬೇಕು ಆದೇನೆ ಇರಲಿ ನಾವೀಗ ಚಾರ್ಮಾಡಿಯನ್ನು ಪ್ರವಾಸಿ ಕೇಂದ್ರವಾಗಿ ನೋಡೋಣ…
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯನ್ನು ಹೊಂದಿಕೊಂಡು ಪಶ್ಚಿಮ ಘಟ್ಟಗಳ ಸಾಲಿನ ಕೆಳಭಾಗದಲ್ಲಿ ನೆಲೆಯೂರಿರುವ ಪುಟ್ಟ ಹಳ್ಳಿ ಚಾರ್ಮಾಡಿ. ಇಲ್ಲಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಈ ಹಳ್ಳಿಯಲ್ಲಿ ಹಾದುಹೊಗಿರುವುದರಿಂದ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಾರಣವಾಗಿದೆ. ಜೊತೆಗೆ ಇಲ್ಲಿ ಎತ್ತರವಾದ ಬೆಟ್ಟ ಗುಡ್ಡಗಳು , ಆಸಂಖ್ಯಾತ ಜಲಪಾತಗಳು, ದಟ್ಟವಾದ ಕಾನನಗಳು, ಕಾನನಗಳ ನಡುವೆ ಓಡಾಡುವ ವನ್ಯಮೃಗಗಳು ಹತ್ತಾರು ತೊರೆಗಳನ್ನು ಕಾಣಬಹುದಾಗಿದೆ.
ಚಾರ್ಮಾಡಿಯನ್ನು ಪ್ರವಾಸಿ ಕೇಂದ್ರವಾಗಿ ನೋಡಿದರೆ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುವುದರಲ್ಲಿ ಸಂದೇಹವಿಲ್ಲ. ಚಾರ್ಮಾಡಿ ಪ್ರದೇಶವೇ ಅಂತದ್ದು ಜೂನ್ ತಿಂಗಳು ಬಂತೆಂದರೆ ಸಾಕು ಪ್ರವಾಸಿಗರ ದಂಡೇ ಹೊರಟು ನಿಲ್ಲುತ್ತದೆ. ಪಶ್ಚಿಮ ಘಟ್ಟಗಳು ಹಸಿರು ಹೊದಿಕೆಯನ್ನು ಮುಡಿಗೇರಿಸಕೊಂಡು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಈ ಘಟ್ಟ ಪ್ರದೇಶಗಳಲ್ಲಿ ಬರುವ ಪ್ರಮುಖ ಬೆಟ್ಟಗಳೆಂದರೆ ಅಮೇಧಿಕಲ್ಲು ಬೆಟ್ಟ, ಬಾಳೆಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನಭುಜ, ಶಿಶಿಲ ಹೀಗೆ ಹತ್ತಾರು ಬೆಟ್ಟಗಳು ಇಲ್ಲಿಗೆ ಸಮೀಪದಲ್ಲೇ ಕಾಣಸಿಗುವ ಬೆಟ್ಟದಸಾಲುಗಳು.
ಆಂತೆಯೇ ಹಲವಾರು ಜಲಪಾತಗಳು ಆಲೇಖಾನ್ ಜಲಪಾತ, ಜೇನುಕಲ್ಲು ಜಲಪಾತ, ಕಲ್ಲರ್ಬಿ ಜಲಪಾತ, ಹಕ್ಕಿಕಲ್ಲು ಜಲಪಾತ, ಬಂಡಾಜೆ ಜಲಪಾತ ಮಳೆಗಾಲದಲ್ಲಿ ಚಾರಣಿಗರನ್ನು ಆಕರ್ಷಿಸುತ್ತಿದೆ.
ಕಡಿದಾದ ತಿರುವುಗಳು : ಚಾರ್ಮಾಡಿ ಘಾಟ್ ಸುಮಾರು ಹನ್ನೊಂದು ಕಡಿದಾದ ತಿರುವುಗಳನ್ನು ಹೊಂದಿದೆ ಆದಕ್ಕಾಗಿಯೇ ಇದನ್ನು ಕರ್ನಾಟಕದ ಅತ್ಯಂತ ದುರ್ಗಮ ಘಾಟಿ ಎಂದು ಹೆಸರುವಾಸಿಯಾಗಿದೆ. ಆತ್ಯಂತ ಅಪಾಯಕಾರಿಯಾಗಿರುವ ತಿರುವುಗಳು ಇರುವುದರಿಂದ ಚಾಲಕರು ಜಾಗರೂಕತೆವಹಿಸುವುದು ಒಳಿತು.
ಏರಿಕಲ್ಲು ಎಂಬ ಮಾಯಾಕಲ್ಲು: ಚಾರ್ಮಾಡಿ ಘಾಟಿ ಆರಂಭವಾಗುವಾಗ ನಮ್ಮ ಕಣ್ಣಿಗೆ ದೂರದಲ್ಲಿ ಬೆಟ್ಟದ ತುದಿಯಲ್ಲಿ ಗಿರಿಯ ಮುಡಿಗೆ ಕಿರೀಟ ಇಟ್ಟಂತೆ ಭಾಸವಾಗುವ ಚೂಪಾದ ಬಂಡೆಯ ಕಲ್ಲೊಂದು ಬೆಟ್ಟದಿಂದ ಜಾರುವ ಹಂತದಲ್ಲಿ ಇದ್ದಂತೆ ಕಾಣುತ್ತಿರುವ ಕಲ್ಲೇ ಏರಿಕಲ್ಲು ಇದು ಘಾಟಿ ಆರಂಭದಿಂದ ಕೊನೆಗೊಳ್ಳುವ ತನಕವು ಕಣ್ಣಿಗೆ ಕಾಣುವಂತಹ ಕಲ್ಲು ಬಹಳ ವಿಶೇಷವಾಗಿದೆ.
ಚಾರ್ಮಾಡಿ ಬೆಟ್ಟದ ತಿರುವು ಹೆಚ್ಚಿದಂತೆ ಚಾರ್ಮಾಡಿ ಬೆಟ್ಟದ ಸೌಂದರ್ಯ ವೃದ್ಧಿಸುತ್ತಾ ಹೋಗುತ್ತದೆ ಮಳೆಗಾಲದಲ್ಲಿ ತುಂತುರು ಮಳೆಹನಿ ಬೀಳುತ್ತಿದ್ದರೆ ಒಂದೆಡೆ ಗಿರಿಶಿಖರಗಳು ಹಸಿರು ಸೀರೆ ಉಟ್ಟು ಮದುವಣಗಿತ್ತಿಯಂತೆ ಸಿಂಗಾರಗೊಂಡಂತಹ ಆನುಭವ ನೋಡನೋಡುತ್ತಿದ್ದಂತೆ ಬೆಟ್ಟಗಳನ್ನು ಆವರಿಸುವ ಮೋಡಗಳು ವರ್ಣಿಸಲು ಪದಗಳೇ ಸಾಲದು.
ಸೌಂದರ್ಯ ಇಮ್ಮಡಿಗೊಳಿಸುವ ಝರಿಗಳು: ಬೆಟ್ಟದ ಆರಂಭದಿಂದ ಕೊನೆಯವರೆಗೂ ಹತ್ತುಹಲವು ಶುದ್ಧನೀರಿನ ಝರಿಗಳು ಬಂಡೆಗಳನ್ನು ಸೀಳಿಕೊಂಡು ಬರುವುದೇ ಅದ್ಬುತ, ಪ್ರಕೃತಿಯೇ ಪ್ರವಾಸಿಗರಿಗೋಸ್ಕರ ನಿರ್ಮಿಸಿದೆಯೆನೋ ಎಂಬಂತೆ ಕಾಣುತ್ತದೆ.
ಅಣ್ಣಪ್ಪ ಗುಡಿ: ಘಾಟಿ ಹತ್ತುವವರು ಹಾಗೆಯೇ ಘಾಟಿ ಇಳಿಯುವ ವಾಹನ ಚಾಲಕರು ಇಲ್ಲಿ ವಾಹನಗಳನ್ನು ನಿಲ್ಲಿಸಿ ಅಣ್ಣಪ್ಪ ಗುಡಿಗೆ ನಮಸ್ಕರಿಸಿ ಮುಂದುವರೆಯುವುದು ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಪ್ರಕೃತಿಯ ರಕ್ಷಣೆ ನಮ್ಮ ಜವಾಬ್ದಾರಿ: ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪ್ರವಾಸಿಗರು ತಾವು ತಂದ ತಿಂಡಿತಿನಿಸುಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ತೊಟ್ಟಿಗೆ ಹಾಕಿದರೆ ಉತ್ತಮ ಆದಷ್ಟು ಪ್ರಕೃತಿಯ ಸೌಂದರ್ಯಕ್ಕೆ ಧಕ್ಕೆ ಮಾಡದೆ ನೈಜ್ಯ ಸೌಂದರ್ಯ ಉಳಿಸಲು ಪ್ರಯತ್ನಿಸೋಣ… ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ…