Advertisement
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರದಿಂದ ಕಲರ್ ಆಫ್ ಗ್ರ್ಯಾಟಿಟ್ಯೂಡ್ ಶೀರ್ಷಿಕೆಯಡಿ ಆರಂಭವಾಗಿರುವ ಚಿತ್ರಕಲಾ ಪ್ರದರ್ಶನದಲ್ಲಿ ಕೇರಳದ ಮ್ಯೂರಲ್ ಕಲಾ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯುತ್ತಿದೆ. ಡಿ.9ರವರೆಗೂ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7ರವರೆಗೂ ಪ್ರದರ್ಶನ ತೆರೆದಿರುತ್ತದೆ.
Related Articles
Advertisement
ತಾಯಿ ಯಶೋಧೆಗೆ ತಿಳಿಯದಂತೆ ಬೆಣ್ಣೆ ಕದಿಯುವ ಕಳ್ಳಕೃಷ್ಣ, ಬೆಣ್ಣ ಕದ್ದ ಕೃಷನನ್ನು ಕಡೆಗೋಲಿನ ಹಗ್ಗದಿಂದ ಕಟ್ಟಿ ಶಿಕ್ಷೆ ನೀಡುತ್ತಿರುವ ತಾಯಿ ಯಶೋಧೆ, ಮೋಡ ಮತ್ತು ನವಿಲುಗರಿಗಳ ನಡುವೆ ಕೊಳಲನೂದುತ್ತಿರುವ ಕೃಷ್ಣ, ಗೋಪಿಕೆಯರ ವಸ್ತ್ರಾಪಹರಣ ಮಾಡುತ್ತಿರುವ ಬಾಲ ಕೃಷ್ಣ ಹೀಗೆ ಕೃಷ್ಣನ ತುಂಟಾಟಗಳು ಕಲಾವಿದ ವಿಕಾಸ್ ಕೊವೂರ್ ಅವರ ಕುಂಚದಲ್ಲಿ ಅಂದವಾಗಿ ಅರಳಿನಿಂತಿವೆ.
ಬಿಳಿ, ನೀಲಿ, ಹಸಿರು ಬಣ್ಣಗಳು ಹದವಾಗಿ ಬೆರೆತು ಮೂಡಿದ ನರಸಿಂಹ ಇಲ್ಲಿ ಉಗ್ರನಾಗಿಲ್ಲ, ವಿವಿಧ ಬಣ್ಣಗಳಿಂದ ಅಲಂಕಾರಗೊಂಡಿರುವ ಈ ತಿಮ್ಮಪ್ಪನ ನೋಡಿದರೆ ತಿರುಪತಿ ತಿಮ್ಮಪ್ಪನ ದರ್ಶನವಾದಂತ ಭಾವ ಮೂಡಲಿದೆ. ಸದಾ ಒಡವೆವೈಡೂರ್ಯಗಳ ನಡುವೆ ಕಳೆದು ಹೋಗಿರುವ ಲಕ್ಷ್ಮೀ ಇಲ್ಲಿ ತೀರಾ ಸರಳವಾಗಿದ್ದಾಳೆ. ಒಡವೆಯ ಅಲಂಕಾರಗಳಿಂದ ದೂರುದಿರುವ, ಕೈಯಲ್ಲಿ ದುಡ್ಡಿನ ಚೀಲವನ್ನು ಹಿಡಿಯದ ಲಕ್ಷ್ಮೀ ಚಿತ್ರ ನೋಡುಗರ ಮನ ಸೆಳೆಯಲಿದೆ.
ಮೋದಕ ಪ್ರಿಯ ಗಣೇಶನಿಗೆ ಸಂಬಂಧಿಸಿದ ಹಲವು ಪ್ರಸಂಗಗಳನ್ನು ಈ ಚಿತ್ರ ಪ್ರದರ್ಶನ ಬಿಡಿಸಿಡಲಿದೆ. ನೃತ್ಯಗಾರ್ತಿಯರು, ಕಿನ್ನರರು, ಗಂಧರ್ವ ಕನ್ಯೆಯರು, ಕಾಳಿಕ ಮಾತೆ, ಸತ್ಯಭಾಮ, ರುಕ್ಮಿಣಿ, ವನಗಳಲ್ಲಿ ಕೊಳಲನ್ನೂದುತ್ತಿರುವ ಕಳ್ಳ ಕೃಷ್ಣನ ಚಿತ್ರಗಳನ್ನು ನೋಡಿದರೆ ಪ್ರೇಕ್ಷಕರಲ್ಲಿ ಭಕ್ತಿ ಭಾವ ಮೂಡಲಿದೆ.
ರಾಧೆಯೊಂದಿಗೆ ಸರಸವಾಡುವ ಕೃಷ್ಣನ ನಾನಾ ಭಂಗಿಗಳು ಕೆಂಪು ರಂಗಿನಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಆ್ಯಕ್ರಿಲಿಕ್ ಮಾಧ್ಯಮದಲ್ಲಿ ಮೂಡಿದ ಒಂದೊಂದು ಚಿತ್ರಗಳು ಪುರಾಣದ ಕಥೆಗಳನ್ನು ಸಾರಲಿವೆ. 30 ಕಲಾಕೃತಿಗಳು ಭಿನ್ನ ವಿಭಿನ್ನವಾಗಿ ಮೂಡಿಬಂದಿದ್ದು ಜನಮನ ಸೂರೆಗೊಳ್ಳುವಂತಿದೆ.
* ಶ್ರುತಿ ಮಲೆನಾಡತಿ