Advertisement

ಕರಾವಳಿಯಲ್ಲಿ ಏರುತ್ತಿದೆ ತಾಪಮಾನ; ಮುನ್ನೆಚ್ಚರಿಕೆ ವಹಿಸಲು ಸೂಚನೆ

07:15 PM Mar 09, 2023 | Team Udayavani |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ಏರಿಕೆ ಕಾಣುತ್ತಿದೆ. ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ಗರಿಷ್ಠ ತಾಪಮಾನ ವಾಡಿಕೆಗಿಂತ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಬೇಕಾದ ಆವಶ್ಯಕತೆ ಇದೆ. ಗರಿಷ್ಠ ಉಷ್ಣಾಂಶದಿಂದಾಗಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವೈರಲ್‌ ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುವ ಸಾಧ್ಯತೆ ಇದ್ದು, ಸಾರ್ವಜನಿರು ಏನೆಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

Advertisement

ಏನು ಮಾಡಬೇಕು?
– ಬೆಳಗ್ಗೆ 11ರಿಂದ ಸಾಯಂಕಾಲ 4ರ ವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ
– ಮಧ್ಯಾಹ್ನ ಮಕ್ಕಳನ್ನು ಬಿಸಿಲಿನಲ್ಲಿ ಆಡಲು ಬಿಡಬೇಡಿ. ನೇರ ಸೂರ್ಯನ ಬೆಳಕಿನಲ್ಲಿ ಯಾವುದೇ ಕೆಲಸ ಮಾಡಬೇಡಿ.
– ಹೊರಗೆ ಹೋಗುವ ಅನಿವಾರ್ಯ ಇದ್ದರೆ ಕೊಡೆ/ ಬಟ್ಟೆ/ ಟೊಪ್ಪಿ ಇತ್ಯಾದಿಗಳನ್ನು ಬಳಸಿ ಬಿಸಿಲು ನೇರವಾಗಿ ದೇಹವನ್ನು ತಾಗದಂತೆ ನೋಡಿಕೊಳ್ಳಿ
– ಹತ್ತಿಯ ಬಟ್ಟೆ ಧರಿಸುವುದು ಉತ್ತಮ
– ಪ್ರಯಾಣ ಕಾಲದಲ್ಲಿ ನೀರು ತುಂಬಿದ ಬಾಟಲಿ ಜತೆಗಿರಲಿ
– ಎಳನೀರು, ಹಣ್ಣಿನ ರಸ ಸೇರಿದಂತೆ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
– ಬಾಯಾರಿಕೆ ಆಗದಿದ್ದರೂ ಪದೇಪದೆ ನೀರು ಕುಡಿಯಿರಿ
– ಸಾವಯವ ತರಕಾರಿ-ಹಣ್ಣುಗಳ ಸೇವನೆ ಸೂಕ್ತ
– ನಿಯಮಿತವಾಗಿ ಕೈಗಳನ್ನು ತೊಳೆಯಿರಿ
– ಸೀನುವಾಗ, ಕೆಮ್ಮುವಾಗ ಮೂಗು, ಬಾಯಿ ಮುಚ್ಚಿರಿ
– ಚಿಕ್ಕ ಮಕ್ಕಳ ಆರೋಗ್ಯ ಕಡೆಗೆ ಗಮನ ನೀಡಿ

ಏನು ಮಾಡಬಾರದು?
– ವೈದ್ಯರ ಸಲಹೆ ಇಲ್ಲದೆ ಯಾವುದೇ ಆ್ಯಂಟಿಬಯಾಟಿಕ್‌ ಔಷಧ ತೆಗೆದುಕೊಳ್ಳದಿರಿ
– ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರಿ
– ಮದ್ಯ, ಹೆಚ್ಚಿನ ಸಕ್ಕರೆ ಅಂಶ ಇರುವ ಪಾನೀಯಗಳಿಂದ ದೂರವಿರಿ
– ಸಾಕು ಪ್ರಾಣಿಗಳನ್ನು ಮತ್ತು ಮಕ್ಕಳನ್ನು ನಿಲ್ಲಿಸಿದ ವಾಹನಗಳಲ್ಲಿ ಬಿಡಬೇಡಿ. ಹೆಚ್ಚಿನ ತಾಪಮಾನ ಅಪಾಯಕಾರಿ.
– ಚಹಾ, ಕಾಫಿ, ಆಲ್ಕೋಹಾಲ…, ಕಾಬೊìನೇಟೆಡ್‌ ತಂಪು ಪಾನೀಯಗಳ ಸೇವನೆ ಕಡಿಮೆ ಮಾಡಿ. ಇವು ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡುತ್ತವೆ. ತಂಗಳು ಆಹಾರ ಸೇವನೆಯೂ ಸೂಕ್ತವಲ್ಲ.
– ಹೊರಾಂಗಣ ಚಟುವಟಿಕೆಗಳಿಗೆ ತುಸು ನಿಯಂತ್ರಣ ಇರಲಿ

ಯಾರು ಹೆಚ್ಚು ಎಚ್ಚರಿಕೆ ವಹಿಸಬೇಕು?
– ಸುಡುಬಿಸಿಲು ಯಾರಿಗೆ ಬೇಕಾದರೂ ಆಘಾತ ಉಂಟು ಮಾಡಬಹುದಾಗಿದ್ದರೂ ಗರ್ಭಿಣಿಯರು, ಚಿಕ್ಕ ಮಕ್ಕಳು, ಬಾಣಂತಿಯರು, ಹೊರಾಂಗಣ ಕಾರ್ಮಿಕರು, ಮನೋರೋಗಿಗಳು, ಹೃದ್ರೋಗಿಗಳು, ಅಧಿಕ ರಕ್ತದೊತ್ತಡ ಉಳ್ಳವರು ಮತ್ತು ವಯೋವೃದ್ಧರು ಹೆಚ್ಚು ಎಚ್ಚರಿಕೆ ವಹಿಸಬೇಕು.

ಕರಾವಳಿಯಲ್ಲಿ ವೈರಲ್‌ ಜ್ವರ, ಕೆಮ್ಮು, ಶೀತದ ಪ್ರಕರಣಗಳು ಕೆಲವು ಕಡೆಗಳಲ್ಲಿ ದಾಖಲಾಗುತ್ತಿವೆ. ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆಯಿಂದ ಇರುವುದು ಅಗತ್ಯ. ಸೆಕೆಯ ಪರಿಣಾಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇವುಗಳಿಂದ ಪಾರಾಗಲು ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸುವುದು ಸೂಕ್ತ.
– ಡಾ| ಕಿಶೋರ್‌ ಕುಮಾರ್‌, ಡಾ| ನಾಗಭೂಷಣ್‌ ಉಡುಪ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳು

Advertisement

ಎಚ್‌3ಎನ್‌2 ಆತಂಕದ ಅಗತ್ಯವಿಲ್ಲ
ಎಚ್‌3ಎನ್‌2 ವೈರಸ್‌ ಬಗ್ಗೆ ಆತಂಕ, ಭಯಪಡುವ ಅಗತ್ಯ ಸದ್ಯಕ್ಕಿಲ್ಲ. ಈಗ ಕಂಡುಬರುವ ಶೀತ-ಜ್ವರ ವೈರಸ್‌ ಸೋಂಕಿನ ಮತ್ತೂಂದು ರೂಪವಾಗಿದೆ. ರೋಗಿಗಳಲ್ಲಿ ಸದ್ಯ ಕಂಡುಬರುವ ಶೀತ, ಜ್ವರ, ತಲೆನೋವು ಸೇರಿದಂತೆ ವಿವಿಧ ಲಕ್ಷಣಗಳನ್ನು ಅವಲೋಕಿಸಲು ಹೊಸದಿಲ್ಲಿಯಲ್ಲಿ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡುವಾಗ ಎಚ್‌3ಎನ್‌2 ತಳಿ ಇರುವುದು ಕಂಡುಬಂದಿದೆ. ದ.ಕ. ಜಿಲ್ಲೆಯಲ್ಲಿ ಇದೇ ಲಕ್ಷಣದ ಕೆಲವು ಪ್ರಕರಣಗಳು ಇವೆ. ಆದರೆ ಇದು ಎಚ್‌3ಎನ್‌2 ವೈರಸ್‌ ಸೋಂಕು ಎಂದು ಖಚಿತಗೊಂಡಿಲ್ಲ. ಈ ಜ್ವರ ಮಾರಣಾಂತಿಕವಲ್ಲ ಎಂದು ವೈದ್ಯರು, ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next