Advertisement

Heat Wave: ರಾಜ್ಯ ರಾಜಧಾನಿ ಸೇರಿ ಹಲವು ಜಿಲ್ಲೆಗಳಲ್ಲಿ ಅಧಿಕ ತಾಪಮಾನ!

09:50 AM Oct 02, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಕರ್ನಾಟಕದ ಮುಕ್ಕಾಲು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಏರಿಕೆಯಾಗಿದ್ದು ಬೇಗೆಗೆ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.

Advertisement

ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಬೇಗೆಯ ವಾತಾವರಣ ಉಂಟಾಗಿದ್ದು ಗಾಳಿಯಲ್ಲೂ ನೀರಿನ ತೇವಾಂಶವಿಲ್ಲದೆ ಕೆಲವೆಡೆ ಬಿಸಿ ಗಾಳಿ ಬೀಸಲಾರಂಭಿಸಿವೆ. ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 32 ಡಿ.ಸೆ. ದಾಖಲಾಗಿದ್ದು ಇದು ವಾಡಿಕೆಗಿಂತ 3.2 ಡಿ.ಸೆ. ಹೆಚ್ಚಿನ ತಾಪಮಾನವಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಾಡಿಕೆಗಿಂತ 3.1 ಡಿ.ಸೆ. ಹೆಚ್ಚಿನ ತಾಪಮಾನ ಉಂಟಾಗಿದೆ.

ಹಾಸನದಲ್ಲಿ ರಾಜ್ಯದಲ್ಲೇ ಗರಿಷ್ಠ 4.8 ಡಿ.ಸೆ ಹೆಚ್ಚುವರಿ ಗರಿಷ್ಠ ಉಷ್ಣಾಂಶ ಕಂಡು ಬಂದಿದೆ. ಇದಲ್ಲದೆ ಹಾವೇರಿ 4.4, ಬಾಗಲಕೋಟೆ 5.1, ಮಂಗಳೂರು 2.3, ಮೈಸೂರು 2.5, ಮಂಡ್ಯ 2.4, ಕೊಪ್ಪಳ 2, ಧಾರವಾಡ 2.2 ಡಿ.ಸೆ. ವಾಡಿಕೆಗಿಂತ ಹೆಚ್ಚಿನ ಗರಿಷ್ಠ ತಾಪಮಾನವು ಉಂಟಾಗಿದೆ ಎಂದು ಐಎಂಡಿ ಪ್ರಕಟಿಸಿದೆ.
ನೀರಿನ ಕೊರತೆಯಿಂದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ಉಂಟಾಗಿದೆ. ಮಳೆಯಾದರೆ ತಾಪಮಾನ ಕೊಂಚ ಇಳಿಕೆಯಾಗಲಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಪಮಾನವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು.

ಟ್ರಫ್ ಹಿನ್ನೆಲೆಯಲ್ಲಿ ಹಗುರ ಮಳೆ
ಕರ್ನಾಟಕ ಒಳನಾಡಿನಲ್ಲಿ ಟ್ರಫ್ 0.9 ಕಿ.ಮೀ ಎತ್ತರದಲ್ಲಿ ಟ್ರಫ್ಯಿದ್ದು ಇದರ ಪ್ರಭಾವದಿಂದ ಕರ್ನಾಟಕದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಅ. 7ರ ವರಗೆ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆ. ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿ.ಸೆ. ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 31 ಡಿ.ಸೆ. ದಾಖಲಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next