Advertisement

ಗ್ರಾಹಕರಿಗೆ ತರಕಾರಿ ಬೆಲೆ ಏರಿಕೆ ಬಿಸಿ

06:43 AM May 04, 2019 | Lakshmi GovindaRaj |

ಬೆಂಗಳೂರು: ರಾಜಧಾನಿಯಲ್ಲಿ ಗ್ರಾಹಕರಿಗೆ ತರಕಾರಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.
ಒಂದೆಡೆ ಮಳೆ ಇಲ್ಲದೆ, ಅಗತ್ಯ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಜತೆಗೆ, ಮದುವೆ, ಗೃಹ ಪ್ರವೇಶದಂತಹ ಶುಭ ಸಮಾರಂಭಗಳು ಮೇ ತಿಂಗಳಿನಲ್ಲಿ ಹೆಚ್ಚಾಗಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಿದೆ.

Advertisement

ಎರಡು ವಾರಗಳ ಹಿಂದೆ ಕೆ.ಜಿ.ಗೆ 50 ರೂ. ಇದ್ದ ಬಿನ್ಸ್‌ ಬೆಲೆ 80ರಿಂದ 120 ರೂ. ತಲುಪಿದೆ. ಫೆಬ್ರವರಿ ಮತ್ತು ಏಪ್ರಿಲ್‌ ಆರಂಭದಲ್ಲಿ ಕೆ.ಜಿ.ಗೆ 20 ರೂ. ಇದ್ದ ಟೊಮೇಟೊ ಬೆಲೆ 30ರಿಂದ 45 ರೂ. ತಲುಪಿದೆ. ಹಸಿ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಮೂಲಂಗಿ, ಎಲೆಕೋಸು, ಬದನೇಕಾಯಿ, ಬಟಾಣಿ ದುಬಾರಿಯಾಗಿದೆ. 40ರಿಂದ 50 ರೂ.ಗಳಿಗೆ ದೊರೆಯುತ್ತಿದ್ದ ಒಂದು ಕೆ.ಜಿ ಬೆಳ್ಳುಳ್ಳಿ ಈಗ 80ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿದೆ. ಕ್ಯಾರಟ್‌, ಆಲೂಗೆಡ್ಡೆ, ಗೆಡ್ಡೆಕೋಸು, ಬೆಂಡೆಕಾಯಿ, ಚವಳಿಕಾಯಿ ಬೆಲೆ ಕಡಿಮೆ ಇದೆ.

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾಸಿಪಾಳ್ಯದ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ತರಕಾರಿಗಳಲ್ಲಿ ಶೇ.30ರಿಂದ 40ರಷ್ಟು ಕಡಿಮೆಯಾಗಿದೆ. ಅಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಾಂಡಿಚೇರಿಗಳಿಂದಲೂ ರಾಜ್ಯಕ್ಕೆ ಬರುತ್ತಿದ್ದ ತರಕಾರಿಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಒಡಿಶಾ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ದರ ಹೆಚ್ಚಳಕ್ಕೆ ಮತ್ತೂಂದು ಕಾರಣವಾಗಿದೆ ಎಂದು ಹೇಳಲಾಗಿದೆ.

ಮೇ ಕೊನೆಯ ಎರಡು ವಾರಗಳು ಹೆಚ್ಚಿನ ಶುಭ ಸಮಾರಂಭಗಳು ಇರುವುದರಿಂದ ಅಗತ್ಯ ಪ್ರಮಾಣದಷ್ಟು ತರಕಾರಿ ರಾಜ್ಯಕ್ಕೆ ಪೂರೈಕೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಈಗಾಗಲೇ 120 ರೂ. ತಲುಪಿರುವ ಬೆಳ್ಳುಳ್ಳಿ ಬೆಲೆ ರಂಜಾನ್‌ ಹಬ್ಬ ಸಮೀಪಿಸುತ್ತಿದ್ದಂತೆ ಮತ್ತಷ್ಟು ಏರಿಕೆಯಾಗಲಿದೆ. ಇದರೊಂದಿಗೆ ಶುಂಠಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಬೆಲೆಯೂ ಹೆಚ್ಚಾಗಲಿದೆ ಎನ್ನುತ್ತಾರೆ ಕೆ.ಆರ್‌.ಮಾರುಕಟ್ಟೆ ವ್ಯಾಪಾರಿ ತೌಸಿಫ್.

ದರಪಟ್ಟಿ
ತರಕಾರಿಗಳು ದರಪಟ್ಟಿ (1ಕೆಜಿಗೆ ರೂ.ಗಳಲ್ಲಿ)
ಕೆ.ಆರ್‌.ಮಾರುಕಟ್ಟೆ ದರ ಹಾಪ್‌ಕಾಮ್ಸ್‌ ದರ
ಟಮೆಟೋ 40 37
ಬಟಾಣಿ 120 110
ಬಿನ್ಸ್‌ 80-120 80
ಗುಂಡು ಬದನೆಕಾಯಿ 30 35
ಬದನೇಕಾಯಿ 60 54
ಎಲೆಕೋಸು 40 32
ಕ್ಯಾರಟ್‌ 40 51
ದೊಡ್ಡ ಮೆಣಸಿನಕಾಯಿ 60 65
ಗೆಡ್ಡೆಕೋಸು 20 34
ಬಜ್ಜಿ ಮೆಣಸಿಕಾಯಿ 80 73
ಹಸಿ ಮೆಣಸಿನಕಾಯಿ 80 70
ಮೂಲಂಗಿ 20-30 36
ಆಲೂಗೆಡ್ಡೆ 20-30 28
ಈರುಳ್ಳಿ 20 20
ಬೆಳ್ಳುಳ್ಳಿ 80-120 120
ಹಿರೇಕಾಯಿ 60
ಬೆಂಡೇಕಾಯಿ 20

Advertisement
Advertisement

Udayavani is now on Telegram. Click here to join our channel and stay updated with the latest news.

Next