Advertisement
ಕೆಲವು ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಅಮ್ಮೆಂಬಳದಲ್ಲಿ ಗಾಂಧಿವಾದಿ, ಸಮಾಜವಾದಿ ಅಮ್ಮೆಂಬಳ ಬಾಳಪ್ಪ ಅವರಿಗೆ ಸಂಮಾನ ಸಮಾರಂಭ ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಜಾರ್ಜ್ ಫೆರ್ನಾಂಡೀಸ್ ಬಂದಿದ್ದರು. ನಾನು ಹೋಗಿದ್ದೆ. ಆಗ ಅಮ್ಮೆಂಬಳ ಬಾಳಪ್ಪರಿಗೆ ಕೊಂಚ ಮರೆವಿನ ಸಮಸ್ಯೆ ಆರಂಭವಾಗಿತ್ತು. ಈ ಹಿಂದೆ ನಾವು ಮೂವರೂ ಒಟ್ಟಿಗೆ ಓಡಾಡಿದವರಾದರೂ ಅದನ್ನು ಬಾಳಪ್ಪ ಮರೆತಿದ್ದರು. “ಜಾರ್ಜ್, ಇಂಬೆನ ಗುರ್ತ ಉಂಡ, ಆನಂದೆ ಪಂಡ್ª’ (ಜಾರ್ಜ್, ಇವನ ಪರಿಚಯವಿದೆಯೆ? ಇವನು ಆನಂದ) ಎಂದರು ಜಾರ್ಜ್ ಫೆರ್ನಾಂಡೀಸ್‌ರೊಂದಿಗೆ. ಜಾರ್ಜ್ ನಗುತ್ತ, “ದಾನೆ ಗೊತ್ತುಪ್ಪಂದೆ! ಯಾನ್‌ಲಾ ಆಯೆಲ ಕ್ಲಾಸ್‌ಮೇಟ್‌ಯೆ!’ (ಗೊತ್ತಿಲ್ಲದೆ ಏನು! ನಾನೂ ಇವನೂ ಒಂದೇ ತರಗತಿ ಯಲ್ಲಿದ್ದೆವು) ಎಂದರು. ಬಾಳಪ್ಪರು ನಮಗಿಂತ ಹಿರಿಯರು. ನಾನೂ ಜಾರ್ಜ್ ತುಳುವಿನಲ್ಲಿ, ಏಕವಚನದಲ್ಲಿ ಮಾತನಾಡುವ ಸಲುಗೆಯನ್ನು ಹೊಂದಿದ್ದೆವು.
Related Articles
Advertisement
ಜಾರ್ಜ್ ಫೆರ್ನಾಂಡೀಸ್ ಕೂಡ ಓದಿದ್ದು ಹತ್ತನೆಯ ತರಗತಿಯವರೆಗೇ ಇರಬೇಕು. ಬಳಿಕ ತಂದೆಯವರ ಅಪೇಕ್ಷೆಯಂತೆ ಪಾದ್ರಿಯಾಗಿ ಧಾರ್ಮಿಕ ಸೇವೆ ಮಾಡುವುದಕ್ಕಾಗಿ ಬೆಂಗಳೂರಿನ ಸೆಮಿನರಿಯೊಂದಕ್ಕೆ ಸೇರಿಕೊಂಡರು. ಆದರೆ, ಧಾರ್ಮಿಕ ಮುಖಂಡನಾಗುವುದು ಅವರ ಜಾಯಮಾನಕ್ಕೆ ಒಗ್ಗುವಂಥಾದ್ದಲ್ಲ. ಅವರು ಬೆಂಗಳೂರು ತೊರೆದು ಮಂಗಳೂರಿಗೆ ಮರಳಿದರು. ಮಗ ಧರ್ಮದ್ರೋಹ ಬಗೆದನೆಂದು ತಂದೆ ಅವರನ್ನು ಮನೆಯೊಳಕ್ಕೆ ಪ್ರವೇಶಗೊಡಲಿಲ್ಲ. ಆಮೇಲೆ, ನೆಹರೂ ಮೈದಾನದ ಬಳಿ ನಿರ್ಗತಿಕನಂತೆ ಮಲಗಿದ್ದ ಅವರನ್ನು ಕರೆದೊಯ್ದದ್ದು ಅಮ್ಮೆಂಬಳ ಬಾಳಪ್ಪನವರು. ಸ್ವಾತಂತ್ರ್ಯ ಹೋರಾಟದಲ್ಲಿ ಭೂಗತರಾಗಿದ್ದಾಗ ಅಮ್ಮೆಂಬಳ ಬಾಳಪ್ಪ ಮಂಗಳೂರು ಬಿಜೈಯಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಆಗ ಅವರಿಗೆ ಜಾರ್ಜ್ ಫೆರ್ನಾಂಡೀಸ್‌ರ ತಂದೆಯ ಸ್ನೇಹವಾಗಿ, ಬಾಲಕ ಜಾರ್ಜ್‌ನ್ನು ಆಗಲೇ ಕಂಡಿದ್ದರು.
ಸಮಾಜವಾದದ ಪರಿಚಯವಾದ ಬಳಿಕ ಜಾರ್ಜ್‌ರ ಬದುಕು ಮತ್ತೂಂದು ಮಗ್ಗುಲಿಗೆ ಹೊರಳಿಕೊಂಡಿತು. ಮುಂದೆ ಕಾರ್ಮಿಕ ಹೋರಾಟದ ಮುಂದಾಳ್ತನ ವಹಿಸಿದರು. ಅಮ್ಮೆಂಬಳ ಬಾಳಪ್ಪರ ಸೂಚನೆಯಂತೆ ಮುಂಬೈಗೆ ಹೋಗಿ ಅಲ್ಲಿಯೂ ಸಮಾಜಪರ ಕೆಲಸಗಳಲ್ಲಿ ಸಕ್ರಿಯರಾದರು. ಪತ್ರಿಕೆಯನ್ನೂ ನಡೆಸಿದರು. ಅವರ ಬದುಕಿನ ಹಾದಿ ಸುಖದ್ದೇನೂ ಆಗಿರಲಿಲ್ಲ. ಹಾಗಾಗಿಯೇ ಕೇಂದ್ರ ಸರಕಾರದ ಸಚಿವರಾಗಿರುವಾಗಲೂ ಸರಳ ಬದುಕನ್ನೇ ಬದುಕಲು ಅವರಿಗೆ ಸಾಧ್ಯವಾದದ್ದು!
ಮಂತ್ರಿಯಾಗಿ ಅಧಿಕಾರದಲ್ಲಿರುವಾಗ ಜಾರ್ಜ್ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಅದರಲ್ಲಿ ಕೊಂಕಣ ರೈಲ್ವೇ ಯೋಜನೆಯೂ ಒಂದು. ಆದರೆ, ಸಮಾಜವಾದಿಯಾಗಿ ಬೆಳೆದಿದ್ದ ಜಾರ್ಜ್ ಫೆರ್ನಾಂಡಿಸ್ ತಾವು ಕಟ್ಟಿದ್ದ ಸಮತಾ ಪಕ್ಷವನ್ನು ಎನ್‌ಡಿಎಯ ಜೊತೆಗೆ ಸೇರಿಸಿದ್ದು ಒಂದು ವಿಡಂಬನೆಯಾಗಿದೆ. 1991ರಲ್ಲಿ ಅವರು ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಕಾರವಾರದ ತೋಡೂರಿಗೆ ಸೀಬರ್ಡ್ ನೌಕಾನೆಲೆಯ ಎರಡನೆಯ ಹಂತದ ಕಾಮಗಾರಿಗೆ ಅಡಿಗಲ್ಲು ಹಾಕಲು ಬಂದಿದ್ದರು. ಅಲ್ಲಿ ಪತ್ರಕರ್ತನಾಗಿದ್ದ ನಾನು ನೇರವಾಗಿ ಅವರ ಬಳಿಗೆ ಹೋದೆ. ನನ್ನನ್ನು ನೋಡಿದವರೇ, “ಓ ಆನಂದ, ಎಂಚ ಉಲ್ಲಯ?’ (ಹೋ ಆನಂದ, ಹೇಗಿದ್ದೀಯಾ?) ಎಂದು ಕೇಳಿದವರೇ ಮುಂದೆ ಕೇಳಿದ ಪ್ರಶ್ನೆ , “ಬಾಳಪ್ಪೆರ್ ಎಂಚ ಉಲ್ಲೆರ್?’ (ಅಮ್ಮೆಂಬಳ ಬಾಳಪ್ಪರು ಹೇಗಿದ್ದಾರೆ?)
ಸಿಮೆಂಟ್ ಬೆಂಚಿನಲ್ಲಿ ಅನಾಥನಂತೆ ಮಲಗಿದ್ದಾಗ ತನ್ನನ್ನು ಕರೆದೊಯ್ದ ಪುಣ್ಯಾತ್ಮನನ್ನು ಮರೆತಿರಲಿಲ್ಲ. ಅದು ಜಾರ್ಜ್ ಫೆರ್ನಾಂಡೀಸ್!
ಅಮ್ಮೆಂಬಳ ಆನಂದ