ಬೆಂಗಳೂರು: ನಗರದ ವೈನ್ ಪ್ರಿಯರಿಗೆ ಸಂತಸದ ಸುದ್ದಿ. ಬೃಹತ್ ಮಾಲ್‌ಗಳ ಪೈಪೋಟಿಗೆ ಸೆಡ್ಡು ಹೊಡೆಯಲು ಹಾಪ್‌ಕಾಮ್ಸ್ ಸಂಸ್ಥೆ ಮುಂದಾಗಿದ್ದು, ತಮ್ಮ ಹಾರ್ಟಿ ಬಜಾರ್ ಮಳಿಗೆಗಳಲ್ಲೂ ವೈನ್ ಮಾರಾಟಕ್ಕೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ಕಸ್ತೂರಿನಗರದಲ್ಲಿ ಸ್ಥಾಪಿಸಿರುವ ಹಾರ್ಟಿ ಬಜಾರ್‌ನಲ್ಲಿ ತಾಜಾ ಹಣ್ಣು, ತರಕಾರಿಗಳಂತೆ ವೈನ್ ಕೂಡ ಶೀಘ್ರವೇ ಗ್ರಾಹಕರಿಗೆ ಸಿಗಲಿದೆ.
ವೈನ್ ಮಾರಾಟ ಮಾಡಲು ಅನುಮತಿ ಕೋರಿ ಅಬಕಾರಿ ಇಲಾಖೆಗೆ ಈಗಾಗಲೇ ಹಾಪ್‌ಕಾಮ್ಸ್ ಅರ್ಜಿ ಸಲ್ಲಿಸಿದೆ. ಹೀಗಾಗಿ, ಸದ್ಯದಲ್ಲೇ ವೈನ್ ಅಲ್ಲಿ ಲಭ್ಯವಾಗಲಿದೆ. ವೈನ್ ಹಾರ್ಟಿ ಬಜಾರ್‌ಗಳಲ್ಲಿ ಸಿಗುವಂತೆ ಮಾಡುವ ಮೂಲಕ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹಾಪ್‌ಕಾಮ್ಸ್ ಸಂಸ್ಥೆ ಹೊಂದಿದೆ. ಹಾಪ್‌ಕಾಮ್ಸ್‌ನಲ್ಲಿ ನೋಂದಣಿಯಾದ ರೈತರಿಂದ ಹೇಗೆ ಹಣ್ಣು, ತರಕಾರಿ ಇತ್ಯಾದಿಗಳನ್ನು ಖರೀದಿಸಲಾಗುತ್ತದೆಯೋ ಅದೇ ಮಾದರಿಯಲ್ಲಿ ವೈನ್ ತಯಾರಿಕ ಕಂಪನಿಗಳಿಂದ ಖರೀದಿ ನಡೆಯಲಿದೆ.
ಸಂಸ್ಥೆಗೆ ವೈನ್ ಪೂರೈಸಲು ಇಚ್ಛಿಸುವ ವೈನ್ ತಯಾರಕ ಕಂಪನಿಗಳು ಮೊದಲು ಕರ್ನಾಟಕ ವೈನ್ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಂತೆಯೇ ಹಾಪ್‌ಕಾಮ್ಸ್‌ನಲ್ಲೂ ನೋಂದಣಿ ಮಾಡಿಕೊಳ್ಳಬೇಕು. ಆ ನಂತರವೇ ಆ ವೈನರಿಗಳಿಂದ ಹಾರ್ಟಿ ಬಜಾರ್‌ಗೆ ಬೇಕಾಗುವಷ್ಟು ವೈನ್‌ನನ್ನು ಹಾಪ್‌ಕಾಮ್ಸ್ ಖರೀದಿ ಮಾಡಲಿದೆ. ಹಾರ್ಟಿ ಬಜಾರ್ ಯಶಸ್ವಿ: ಕಳೆದ ತಿಂಗಳು ಪ್ರಾಯೋಗಿಕವಾಗಿ ಕಸ್ತೂರಿನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲಾದ ಹಾರ್ಟಿ ಬಜಾರ್ ಯಶಸ್ವಿಯಾಗಿದ್ದು, ನಗರದಲ್ಲಿ ಮತ್ತಷ್ಟು ಹಾರ್ಟಿ ಬಜಾರ್ ತೆರೆಯಲು ಹಾಪ್‌ಕಾಮ್ಸ್‌ಗೆ ಹೊಸ ಚೈತನ್ಯ ನೀಡಿದಂತಾಗಿದೆ.
ಕಸ್ತೂರಿನಗರದಲ್ಲಿ ಇರುವ ಹಾರ್ಟಿ ಬಜಾರ್‌ನಲ್ಲಿ ಜನವರಿ ತಿಂಗಳಲ್ಲಿ 10.16 ಲಕ್ಷ ರೂ.ವಹಿವಾಟು ನಡೆಸಲಾಗಿದೆ. ಇದರಿಂದ ಹಾಪ್‌ಕಾಮ್ಸ್‌ಗೆ 1.50 ಲಕ್ಷ ರೂ.ಲಾಭ ಬಂದಿದೆ. ಈ ವರ್ಷ ಸದಾಶಿವನಗರ, ಅರಕೆರೆ, ಇಟ್ಟುಮಡು, ಬನ್ನೇರುಘಟ್ಟ ರಸ್ತೆ, ಇನ್ಫೋಸಿಸ್ ಕ್ಯಾಂಪಸ್ ಸೇರಿದಂತೆ ಒಟ್ಟು ಎಂಟಕ್ಕೂ ಅಧಿಕ ಹಾರ್ಟಿ ಬಜಾರ್ ತೆರೆಯಲು ಚಿಂತನೆ ನಡೆಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಸದಾಶಿವನಗರದಲ್ಲಿ ಹಾರ್ಟಿ ಬಜಾರ್ ಆರಂಭಿಸಲಿದ್ದು, ಭಾಗಶಃ ಕಾರ್ಯ ಪೂರ್ಣಗೊಂಡಿದೆ.
ಖಾಸಗಿ ಸಹಭಾಗಿತ್ವ: ಖಾಸಗಿಯವರಲ್ಲಿ ಸುಮಾರು 1000 ಚದರ ಅಡಿ ವಿಸ್ತೀರ್ಣದ ಕಟ್ಟಡವಿದ್ದು, ಹಾರ್ಟಿ ಬಜಾರ್ ತೆಗೆಯಲು ಆಸಕ್ತಿ ಇದ್ದರೆ ಸಂಸ್ಥೆಯನ್ನು ಸಂಪರ್ಕಿಸಬಹುದು. ಹಾಪ್‌ಕಾಮ್ಸ್ ಸಂಸ್ಥೆಯೇ ಹಾರ್ಟಿಬಜಾರ್‌ನ ಒಳಾಂಗಣ ವಿನ್ಯಾಸಕ್ಕೆ 4-5 ಲಕ್ಷ ರೂ. ಖರ್ಚು ಮಾಡಲಿದೆ. ತಿಂಗಳ ವಹಿವಾಟಿನಲ್ಲಿ ಕಟ್ಟಡದ ಮಾಲೀಕನಿಗೆ ಶೇ 3ರಿಂದ 5ರಷ್ಟು ಮೊತ್ತವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಹಾರ್ಟಿ ಬಜಾರ್ ಸ್ಥಾಪನೆಯಾಗುತ್ತದೆಯೋ ಅಲ್ಲಿ ತಾಜಾ ಹಣ್ಣು, ತರಕಾರಿಗಳೊಂದಿಗೆ ವೈನ್ ಮಾರಾಟಕ್ಕೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಲಾಗುವುದು ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ತಿಳಿಸಿದ್ದಾರೆ.
ಹಾರ್ಟಿ ಬಜಾರ್ ಹಾಪ್‌ಕಾಮ್ಸ್‌ಗೆ ಒಂದು ಹೊಸ ಚೈತನ್ಯ ನೀಡಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಜನರನ್ನು ತಲುಪಲು ಖಾಸಗಿ ಸಹಬಾಗಿತ್ವದಲ್ಲಿ ನಗರದ ಇತರೆ ಬಡಾವಣೆಗಳಲ್ಲೂ ಜಾಗ ದೊರೆತರೆ ಹಾಪ್‌ಕಾಮ್ಸ್ ಮಳಿಗೆ ತೆರೆಯಲು ಸಿದ್ಧವಿದೆ. ಕಟ್ಟಡ ಮಾಲೀಕರಿಗೆ ಮತ್ತು ಗ್ರಾಹಕರಿಗೂ ಇದರಿಂದ ಉಪಯೋಗವಾಗಲಿದೆ.
-ಡಾ.ಬೆಳ್ಳೂರು ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್.
* ಸಂಪತ್ ತರೀಕೆರೆ