82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ನುಡಿ ತೇರನ್ನು ಎಳೆಯಲಿರುವ ಸಾಹಿತಿ ಚಂದ್ರಶೇಖರ ಕಂಬಾರರು “ಉದಯವಾಣಿ’ ಓದುಗರಿಗೆ ನೀಡಿದ ಪಂಚ ಸಂಕಲ್ಪಗಳು…
ಕನ್ನಡವು ಪ್ರತಿಯೊಬ್ಬರಿಗೂ ಜೀವಧ್ವನಿ ಆಗಬೇಕು. ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿ ಭೇಟಿಯಾದರೂ ಅವರಿಗೆ ಕನ್ನಡದಲ್ಲೇ ಮಾತನಾಡು ವಂಥ ಪ್ರೀತಿ ಹುಟ್ಟಬೇಕು. “ಹಲೋ’, “ಹೌ ಆರ್ ಯು’ ಅಲ್ಲ; “ಏನಪ್ಪಾ, ಹೇಗಿದ್ದೀಯಾ?’ ಎನ್ನುವ ಮಾತಿನಲ್ಲಿ ಅಸಾಧಾರಣ ಮಾಧುರ್ಯವಿದೆ.
ಇಂಗ್ಲಿಷ್, ಹಿಂದಿಯ ಬೆನ್ನೇರಿ ಸವಾರಿ ಹೊರಟವರಿಗೆ ಒಂದು ಕಿವಿಮಾತು. ಕನ್ನಡದೊಂದಿಗೆ ನೀವು ಏನನ್ನೇ ಕಲಿತಿರಬಹುದು. ಆದರೆ, ನಿಮ್ಮ ಹೃದಯದ ಭಾಷೆ ಕನ್ನಡವೇ ಆಗಿರಲಿ. ನಿಮ್ಮೊಳಗೆ ಕನ್ನಡವೇ ಗೂಡು ಕಟ್ಟಿರಲಿ. ಈ ನೆಲದಲ್ಲಿ ಕಲಿತವರೆಲ್ಲ ಕನ್ನಡದಲ್ಲೇ ಯೋಚನೆ ಮಾಡಿ.
ಗಡಿ ದಾಟಿ ಹೋಗಿ, ವಿದೇಶದಲ್ಲಿ ನೆಲೆನಿಂತ ಮಾತ್ರಕ್ಕೆ ಹೊರನಾಡಿಗರು, ಕನ್ನಡಿಗರೇ ಅಲ್ಲ ಎಂಬ ಯೋಚನೆ ಸಲ್ಲದು. ಪರನೆಲದಲ್ಲಿ ಅವರು ತಮ್ಮದೇ ಆದ ರೀತಿಯಲ್ಲಿ ಕನ್ನಡವನ್ನು ಪೊರೆಯುತ್ತಿರುತ್ತಾರೆ. ಯಾವುದೋ ಭಾಷಾಜೀವಿಯ ಕಿವಿಗಳಿಗೆ ಒಂದಲ್ಲ ಒಂದು ಕನ್ನಡದ ಪದವನ್ನು ಅವರು ತಲುಪಿಸುವ ದೂತರು. ಹೊರನಾಡ ಕನ್ನಡಿಗರನ್ನು ಪ್ರೀತಿಸೋಣ.
ಅದೇ ರೀತಿ, ಯಾರಾದರೂ ಕನ್ನಡದ ನಾಡಿನ ಗಡಿಯೊಳಗೆ ಬಂದು, ನಮ್ಮ ಪಕ್ಕದಲ್ಲಿ ನಿಂತ ಅಂತಾದರೆ, ಅವನಿಗೆ ಮೊದಲು ಕನ್ನಡ ಕಲಿಸದೆ ಬಿಡಬಾರದು. ಆತನನ್ನೂ ನಮ್ಮ ಭಾಷಾ ಪ್ರಪಂಚದೊಳಗೆ ಒಳಗೊಳ್ಳಿಸುವ ಕಾರ್ಯದಲ್ಲಿ ಪ್ರತಿ ಕನ್ನಡಿಗನೂ ಮಗ್ನನಾಗಬೇಕು. ಕಾಲಕ್ರಮೇಣ ಅವನನ್ನೂ ಕನ್ನಡಿಗನನ್ನಾಗಿ ರೂಪಿಸುವ ಜಾಣ್ಮೆ ನಮ್ಮದಾಗಬೇಕು.
ಕನ್ನಡದ ನೆಲದಲ್ಲಿದ್ದೇವೆ; ಇಲ್ಲೇ ಓಡಾಡಿ ಬದುಕು ಕಟ್ಟಿಕೊಂಡಿದ್ದೇವೆ; ಈ ನಾಡು ನೀರು ಕೊಟ್ಟಿದೆ; ಸ್ವಚ್ಛ ಗಾಳಿ ಕೊಟ್ಟಿದೆ; ಅನ್ನ ಕೊಟ್ಟಿದೆ ಅಂತಾದರೆ, ಬೇರೆ ಭಾಷೆಯಲ್ಲಿ ಮಾತನಾಡುವ ಅಗತ್ಯವೇತಕೆ? ನಮ್ಮ ಎಲ್ಲ ವ್ಯವಹಾರಗಳೂ ಕನ್ನಡದಲ್ಲಿಯೇ ಆಗಬೇಕು. “ಕನ್ನಡದಲ್ಲಿ ಮಾತನಾಡುವುದೇ ನಿತ್ಯದ ಧ್ಯಾನ, ಮಂತ್ರ’ ಆಗಲಿ.
ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಸಂಕಲ್ಪದೊಂದಿಗೆ ನಾವೆಲ್ಲ ಒಟ್ಟಿಗೆ ಹೆಜ್ಜೆ ಇಡೋಣ.