Advertisement

ಹೃದಯ ವೈಫ‌ಲ್ಯ ಮತ್ತು ಜೀವನ ಶೈಲಿ

02:44 PM Oct 30, 2022 | Team Udayavani |

ಹೃದಯ ವೈಫ‌ಲ್ಯವೆಂಬುದು ಮನುಷ್ಯನನ್ನು ಸುದೀರ್ಘ‌ವಾಗಿ ಕಾಡುವ ಕಾಯಿಲೆಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಈ ಕಾಯಿಲೆಯು ಅತೀ ದೊಡ್ಡ ಮಟ್ಟದ ವೈದ್ಯಕೀಯ ಹಾಗೂ ಆರ್ಥಿಕ ಹೊರೆಯನ್ನು ಹೊಂದಿದೆ. ಹೃದಯ ವೈಫ‌ಲ್ಯ ಎಂಬ ಪದ ಕೇಳಿದ ಕೂಡಲೇ ಹೃದಯ ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದೆ ಎಂದು ಹೆಚ್ಚಿನವರು ಊಹಿಸುತ್ತಾರೆ. ಇದು ಶುದ್ಧ ತಪ್ಪು ತಿಳಿವಳಿಕೆ. ಹೃದಯ ವೈಫ‌ಲ್ಯ ಎಂಬುದು ದೀರ್ಘ‌ ಕಾಲದ ಬೆಳವಣಿಗೆಯಾಗಿದ್ದು, ಹೃದಯವು ವ್ಯಕ್ತಿಯ ಅನುಕೂಲಕ್ಕೆ ತಕ್ಕಂತೆ ರಕ್ತ ಹಾಗೂ ಆಮ್ಲಜನಕ ಪೂರೈಕೆ ಮಾಡಲು ವಿಫ‌ಲವಾಗುತ್ತದೆ. ಇದರಿಂದಾಗಿ ಸ್ವಲ್ಪ ಕೆಲಸ ಮಾಡಿದಾಗಲೂ ಆಯಾಸ ಅಥವಾ ಏದುಸಿರು (ಉಸಿರುಗಟ್ಟುವಿಕೆ) ಬಂದಂತಾಗುವುದು.

Advertisement

ಹೃದಯ ವೈಫ‌ಲ್ಯವು ದೈಹಿಕ ಮತ್ತು ಶಾರೀರಿಕ ರೋಗ ಲಕ್ಷಣಗಳನ್ನು ಹೊಂದಿದ್ದು, ಪ್ರಪಂಚದಾದ್ಯಂತ ಮರಣ ಮತ್ತು ಅಸ್ವಾಸ್ಥ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದು ಹೃದಯದ ರಚನಾತ್ಮಕ ಅಥವಾ ಕ್ರಿಯಾತ್ಮಕ ಅಸಹಜತೆಗಳಿಂದ ಉಂಟಾಗುತ್ತದೆ. ಆರೋಗ್ಯವಾದ ಹೃದಯವು ದೇಹದ ಎಲ್ಲ ಅಂಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನಿಯಮಿತವಾಗಿ ಸರಬರಾಜು ಮಾಡುತ್ತದೆ. ಹೃದಯ ದುರ್ಬಲಗೊಂಡಲ್ಲಿ ಈ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಆಗದೆ ದೈನಂದಿನ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಹೃದಯ ವೈಫ‌ಲ್ಯಗಳಲ್ಲಿ ಹಲವು ವಿಧದ ವೈಫ‌ಲ್ಯಗಳನ್ನು ಕಾಣಬಹುದಾಗಿದೆ.

ಎಡ ಭಾಗದ ಹೃದಯ ವೈಫ‌ಲ್ಯ (Left sided Heart failure) ಬಲ ಭಾಗದ ಹೃದಯ ವೈಫ‌ಲ್ಯ (Right sided Heart failure) ಎರಡೂ ಭಾಗದ ಹೃದಯ ವೈಫ‌ಲ್ಯ (Both sided Heart failure) ಹೃದಯ ಸ್ಥಂಭನ (ಕಂಜೆಂಸ್ಟಿವ್‌ ಹೃದಯ ವೈಫ‌ಲ್ಯ) (Congestive Heart failure)

ಹೃದಯ ವೈಫ‌ಲ್ಯದ ಲಕ್ಷಣಗಳು

Advertisement

ಹೃದಯ ವೈಫ‌ಲ್ಯವು ದೀರ್ಘ‌ಕಾಲ ಪ್ರಗತಿಯಾಗದೆ ಇದ್ದಲ್ಲಿ ಹೃದಯ ರಕ್ತನಾಳದ ಹಾಗೂ ಮೂತ್ರಪಿಂಡದ ವ್ಯವಸ್ಥೆಗಳ ನ್ಯೂರೋ ಹಾರ್ಮೋನಲ್‌ ಸಕ್ರಿಯವಾಗಿ ರಕ್ತ ಪರಿಚಲನೆಯ ಕೊರತೆಗೆ ಕಾರಣವಾಗುತ್ತದೆ. ಈ ಸಂಕೀರ್ಣ ವೈದ್ಯಕೀಯ ರೋಗ ಲಕ್ಷಣವು ಪರಿಧಮನಿ ಕಾಯಿಲೆ (Coronary), ಅಧಿಕ ರಕ್ತದೊತ್ತಡ (High Blood pressure) ಹಾಗೂ ಹೃದಯದ ಕವಾಟದ ಕಾಯಿಲೆ (VHD) ಸೇರಿದಂತೆ ವಿವಿಧ ಹೃದಯಕ್ಕೆ ಸಂಬಂಧಪಟ್ಟ ದೋಷಗಳಿಂದ ಬರುವುದಾಗಿದೆ. ಸಾಮಾನ್ಯವಾಗಿ ಕಂಡು ಬರುವ ರೋಗ ಲಕ್ಷಣಗಳೆಂದರೆ ಉಸಿರಾಟದ ತೊಂದರೆ (Dyspnea, Orthopnea, PND), ಆಯಾಸ (ಬಳಲಿಕೆ), ಕೈ, ಪಾದ ಮತ್ತು ಹಿಮ್ಮಡಿ ಗಂಟುಗಳ ಊತ, ಹಸಿವಿನ ಕೊರತೆ, ಮಾನಸಿಕ ಗೊಂದಲ, ಹೃದಯ ಬಡಿತದ ಹೆಚ್ಚಳ ಇತ್ಯಾದಿ ಮೇಲೆ ತಿಳಿಸಲಾದ ಲಕ್ಷಣಗಳಲ್ಲಿ ಯಾವುದಾದರೊಂದು ಲಕ್ಷಣ ಹೃದಯ ವೈಫ‌ಲ್ಯವನ್ನು ಸೂಚಿಸುತ್ತಿರಬಹುದು. ಉಸಿರಾಟದ ತೊಂದರೆ ಹಾಗೂ ಮೂತ್ರಪಿಂಡದ ವೈಫ‌ಲ್ಯಕ್ಕೂ ಕೂಡ ಕಾರಣವಾಗಬಹುದು. ಸೂಕ್ತ ಚಿಕಿತ್ಸೆ ಮಾಡುವುದರಿಂದ ಲಕ್ಷಣಗಳು ವಾಸಿಯಾಗಿ ಆರೋಗ್ಯಕರ ಗುಣಮಟ್ಟದ ಜೀವನವನ್ನು ನಡೆಸಲು ನೆರವಾಗುತ್ತದೆ.

ಜೀವನ ಶೈಲಿ

ಹೃದಯ ವೈಫ‌ಲ್ಯ ಇದ್ದವರು ಆರೋಗ್ಯಕರ ಮತ್ತು ಸಮತೋಲಿತ ಜೀವನ ಶೈಲಿ (Healthy Life Style) ಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ವೈದ್ಯರ ಸಲಹೆಯಂತೆ ನಿಯಮಿತವಾದ ವ್ಯಾಯಾಮ ಹಾಗೂ ಯೋಗ ಚಿಕಿತ್ಸೆಯನ್ನು ಪಡೆಯಬೇಕು. ಇತ್ತೀಚೆಗಿನ ದಿನಗಳಲ್ಲಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಲ್ಲಿ ಹೃದಯ ವೈಫ‌ಲ್ಯದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯ ವೈಫ‌ಲ್ಯವು ದೀರ್ಘ‌ಕಾಲದಿಂದ ಸಮಯೋಪಾದಿಯಲ್ಲಿ ಹೆಚ್ಚಾಗುವ ಕಾಯಿಲೆಯಾಗಿದ್ದು, ಆರೋಗ್ಯ ರಕ್ಷಣೆಯ ಮೇಲೆ ಗಣನೀಯ ಸಾಮಾಜಿಕ, ಆರ್ಥಿಕ ಪರಿಣಾಮವನ್ನು ಬೀರುತ್ತದೆ. ಹೃದಯ ವೈಫ‌ಲ್ಯದ ಪರಿಣಾಮ ಹೆಚ್ಚಾದಂತೆ ಆರೋಗ್ಯದ ಸಮಸ್ಯೆಗಳ ಪ್ರಮಾಣವೂ ಅಧಿಕವಾಗುತ್ತ ಹೋಗುತ್ತದೆ.

ಹೃದಯ ವೈಫ‌ಲ್ಯವನ್ನು ಕಡಿಮೆ ಮಾಡುವ ಜಾಗತಿಕ ಹೊರೆಯ ನಡುವೆ ಈ ವ್ಯಕ್ತಿಗಳ ಜೀವನಮಟ್ಟ ((Quality of Life) ಸುಧಾರಿಸುವುದು ಒಂದು ಪ್ರಮುಖ ಕಾಳಜಿಯಾಗಿ ಉಳಿದಿದೆ. ಇದನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುವುದರ ಜತೆಗೆ ಜ್ಞಾನದ ಕೊರತೆ, ಅಸಡ್ಡೆ ಹಾಗೂ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಸ್ಪತ್ರೆಗೆ ಮರುದಾಖಲಾತಿ, ಕಡಿಮೆ ಗುಣಮಟ್ಟದ ಜೀವನ ಶೈಲಿ ಹಾಗೂ ಮರಣದ ಪ್ರಮಾಣದ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಲಿದೆ. ವೈದ್ಯಕೀಯ ಚಿಕಿತ್ಸೆಯ ಜತೆಗೆ ಅಂತಹ ರೋಗಿಗಳಲ್ಲಿ ಜೀವನ ಶೈಲಿಯ ಬದಲಾವಣೆ, ಆಪ್ತಸಮಾಲೋಚನೆ, ಕೌಟುಂಬಿಕ ಬೆಂಬಲ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹೃದಯ ವೈಫ‌ಲ್ಯದ ಚಿಕಿತ್ಸೆಗಳು

ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿ ಹೃದಯ ವೈಫ‌ಲ್ಯದ ಕಾರಣವನ್ನು ಕಂಡುಹಿಡಿಯಲು ಕೆಲವು ಮುಖ್ಯವಾದ ತಪಾಸಣೆಗಳನ್ನು ಹೃದ್ರೋಗ ತಜ್ಞರು ಸೂಚಿಸುತ್ತಾರೆ. ಅವುಗಳಲ್ಲಿ ಮುಖ್ಯವಾಗಿ ಇ.ಸಿ.ಜಿ. (ECG), ಹೃದಯದ ಸ್ಕ್ಯಾನಿಂಗ್‌ (Echocardiography), ರಕ್ತ ಪರೀಕ್ಷೆ, ಕ್ಷ-ಕಿರಣ (X-ray) ಪರೀಕ್ಷೆ ಹಾಗೂ ಅಗತ್ಯವೆನಿಸಿದರೆ ಆಂಜಿಯೋಗ್ರಫಿ (Angiography) ಅಥವಾ ಸಿ.ಟಿ. ಸ್ಕ್ಯಾನ್‌ (CT Scan) ಪರೀಕ್ಷೆಗಳು ಮುಖ್ಯವಾಗಿವೆ. ಹೃದಯದ ಎಡಭಾಗದ ವೈಫ‌ಲ್ಯ ಅಥವಾ ಬಲ ಭಾಗದ ವೈಫ‌ಲ್ಯವನ್ನು ಪತ್ತೆಹಚ್ಚಿ ಅದಕ್ಕೆ ಬೇಕಾಗಿರುವ ಔಷಧಿಯನ್ನು ಹೃದ್ರೋಗ ತಜ್ಞರು ಸೂಚಿಸುತ್ತಾರೆ ಹಾಗೂ ಅಗತ್ಯವೆಂದು ಕಂಡುಬಂದಲ್ಲಿ ಆಂಜಿಯೋಪ್ಲಾಸ್ಟಿ (Angioplasty), ಕವಾಟದ ಬಲೂನು ಚಿಕಿತ್ಸೆ, ಅಥವಾ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ವೈದ್ಯರು ಸೂಚಿಸಿದ ನಿರ್ದಿಷ್ಟ ಪ್ರಮಾಣದ ಔಷಧದೊಂದಿಗೆ ನಿಯಮಿತವಾದ ಆಹಾರ ಸೇವನೆ, ಕಡಿಮೆ ಪ್ರಮಾಣದ ಉಪ್ಪಿನಾಂಶ ಸೇವನೆ ಹಾಗೂ ದುಶ್ಚಟಗಳಿದ್ದರೆ ಅವುಗಳನ್ನು ಬಿಡುವಂತೆ ಸೂಚಿಸುತ್ತಾರೆ.

ಈ ರೀತಿಯ ಸಮಪ್ರಮಾಣದ ಆಹಾರ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದ ಆರು ತಿಂಗಳುಗಳ ಅನಂತರವೂ ಕೂಡ ಹೃದಯ ವೈಫ‌ಲ್ಯದ ಲಕ್ಷಣಗಳಲ್ಲಿ ಚೇತರಿಕೆ ಕಂಡುಬರದೆ ಇದ್ದಲ್ಲಿ ನಿಯಮಿತವಾದ ಹಾಗೂ ವಿಶೇಷವಾಗಿ ಪರಿಚಯಿಸಿದ ಯೋಗ ಚಿಕಿತ್ಸೆಯನ್ನು ಪಡೆಯುವದರಿಂದ ಹೃದಯ ವೈಫ‌ಲ್ಯದ ಲಕ್ಷಣಗಳಲ್ಲಿ ಚೇತರಿಕೆ ಕಂಡುಬರುವ ಬಗ್ಗೆ ಹಲವಾರು ಅಧ್ಯಯನಗಳು ಈಗಾಗಲೇ ಸಾಬೀತುಪಡಿಸಿವೆ.

ಆದರೆ ಹೃದಯ ವೈಫ‌ಲ್ಯದ ಲಕ್ಷಣಗಳಿರುವವರು ಹಾಗೂ ಹೃದಯದ ಪಂಪಿಂಗ್‌ ಸಾಮಾನ್ಯಕ್ಕಿಂತ ಕಡಿಮೆ ಇರುವವರು ಇತರರಂತೆ ಹೆಚ್ಚು ಶ್ರಮವಹಿಸಿ ಹೃದಯದ ಮೇಲೆ ಒತ್ತಡ ಬೀಳುವಂತೆ ಯಾವುದೇ ಕಾರಣಕ್ಕೂ ಯೋಗಾಭ್ಯಾಸ ಮಾಡಕೂಡದು. ಮಣಿಪಾಲ ಆಸ್ಪತ್ರೆಯಲ್ಲಿ ಇಂತಹ ಗುಂಪಿನ ಹೃದ್ರೋಗಿಗಳಿಗೆ ತಜ್ಞರ ಮೇಲ್ವಿಚಾರಣೆಯಲ್ಲಿ ನಿಯಮಿತ ಯೋಗ ಚಿಕಿತ್ಸೆ ಹೇಳಿಕೊಡುವ ವ್ಯವಸ್ಥೆ ಇರುತ್ತದೆ. ಇದನ್ನು ನಿಯಮಿತವಾಗಿ ಪಾಲನೆ ಮಾಡಿದ ಹಲವಾರು ಹೃದಯ ವೈಫ‌ಲ್ಯದ ರೋಗಿಗಳಿಗೆ ಉತ್ತಮವಾದ ಪರಿಣಾಮವು ದೊರಕಿರುವುದು ರೋಗಿಗಳ ಮುಖಾಂತರವೇ ಸಾಬೀತಾಗಿರುವುದು ತುಂಬಾ ಸಂತಸದ ವಿಷಯವಾಗಿದೆ.

ಅಂತಿಮವಾಗಿ ಹೇಳುವುದೇನೆಂದರೆ ಹೃದಯ ವೈಫ‌ಲ್ಯ ಇರುವವರು ಅವರ ಕುಟುಂಬಕ್ಕೆ ಹೊರೆಯಾಗದೆ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡು ಸುಖ ಸಮೃದ್ಧಿಯ ಜೀವನವನ್ನು ನಡೆಸುವಂತಾಗುವುದೇ ಈ ಒಂದು ಲೇಖನದ ಸದುದ್ದೇಶವಾಗಿದೆ.

-ಶ್ರೀದೇವಿ ಪ್ರಭು ಸಹ ಪ್ರಾಧ್ಯಾಪಕರು, ಕಾರ್ಡಿಯೋವಾಸ್ಕಾಲಾರ್‌ ಟೆಕ್ನಾಲಜಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

-ಡಾ| ಟಾಮ್‌ ದೇವಸ್ಯ ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು ಹೃದ್ರೋಗ ಚಿಕಿತ್ಸಾ ವಿಭಾಗ ಕೆಎಂಸಿ, ಮಾಹೆ, ಮಣಿಪಾಲ

ಡಾ| ಅನ್ನಪೂರ್ಣಾ ಕೆ. ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು, ಯೋಗ ವಿಭಾಗ ಸಿಐಎಂಆರ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹೃದ್ರೋಗ ಚಿಕಿತ್ಸಾ ವಿಭಾಗ ಮತ್ತು ಯೋಗ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)

Advertisement

Udayavani is now on Telegram. Click here to join our channel and stay updated with the latest news.

Next