ಮೈಸೂರು: ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ವಿಮರ್ಶಕ ಡಾ.ಜಿ.ಆರ್.ತಿಪ್ಪೇಸ್ವಾಮಿ (63) ಮೃತಪಟ್ಟಿದ್ದಾರೆ.
ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಎಂಶ್ರೀ ನೆನಪು ಕಾರ್ಯಕ್ರಮದಲ್ಲಿ ಬಿ.ಎಂ.ಶ್ರೀಕಂಠಯ್ಯನವರ ವಿಮರ್ಶೆ ಕುರಿತು ಉಪನ್ಯಾಸ ನೀಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು, ಕೊನೆಯುಸಿರೆಳೆದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮುಗಿದ ನಂತರ ತಿಪ್ಪೇಸ್ವಾಮಿಯವರು ಮೈಕ್ ಬಳಿ ಬಂದು ಉಪನ್ಯಾಸ ಆರಂಭಿಸಿದರು. ಈ ವೇಳೆ ತೀವ್ರ ಎದೆನೋವಿನಿಂದ ವೇದಿಕೆಯಲ್ಲೇ ಕುಸಿದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ತುಮಕೂರು ಜಿಲ್ಲೆ ಪಾವಗಡ ತಾಲೂಕು ಗುಜ್ಜನಾಡು ಗ್ರಾಮದ ತಿಪ್ಪೇಸ್ವಾಮಿ, ಮೈಸೂರು ವಿಶ್ವವಿದ್ಯಾಲಯದಲ್ಲಿಯೇ ಸ್ನಾತಕ ಪದವಿ ಪಡೆದಿದ್ದರು.
ಪ್ರೊ.ಸಿ.ಪಿ.ಸಿದಾಟಛಿಶ್ರಮ ಅವರ ಮಾರ್ಗದರ್ಶನದಲ್ಲಿ”ಮೈಸೂರಿನ ಚಾಮುಂಡೇಶ್ವರಿ ಒಂದು ಸಾಂಸ್ಕೃತಿಕ ಅಧ್ಯಯನ’ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜಾನಪದ, ವಿಮರ್ಶೆ, ಸಂಶೋಧನೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ತಿಪ್ಪೇಸ್ವಾಮಿ, 50ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಇವರು, ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಉನ್ನತ ಪರಿಶೀಲನಾ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ತಿಪ್ಪೇಸ್ವಾಮಿ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಬೋಗಾದಿ ಎಸ್‌ಬಿಎಂ ಕಾಲೋನಿಯ ಅವರ ಸ್ವಗೃಹದಲ್ಲಿ ಇರಿಸಲಾಗಿದ್ದು, ಶನಿವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.