Advertisement

ಮಾಧ್ಯಮಗಳ ಜವಾಬ್ದಾರಿಯುತ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣ: ಡಾ|ಆರ್‌. ಸೆಲ್ವಮಣಿ

11:28 PM Apr 29, 2019 | Sriram |

ಮಹಾನಗರ: ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತು ಸೇವೆ ಒದಗಿಸಿದಾಗ ಸಮಾಜ ಸ್ವಸ್ಥವಾಗಿರುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ಅಭಿಪಾಯ ಪಟ್ಟರು.

Advertisement

ನಗರದ ಲೇಡಿಹಿಲ್‌ ಬಳಿ ಇರುವ ಪತ್ರಿಕಾ ಭವನದಲ್ಲಿ ಸೋಮವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಒಂದೇ ಕಡೆಯಲ್ಲಿ ನಡೆಯುವ ಬದಲು ವಿವಿಧ ಜಿಲ್ಲೆಗಳಲ್ಲಿ ನಡೆದಾಗ ಅಲ್ಲಿನ ವಿಶೇಷತೆಗಳು, ಅಲ್ಲಿನ ಮಾದರಿ ಕೆಲಸಗಳನ್ನು ಅರಿತುಕೊಂಡು ಇತರ ಕಡೆಗಳಲ್ಲಿ ಅಳವಡಿಸುವುದರ ಜತೆಗೆ ಅಲ್ಲಿನ ಸಮಸ್ಯೆಗಳನ್ನು ಕೂಡ ಸ್ಥೂಲವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪತ್ರಕರ್ತರ ಸಂಘವು ಡಿ.ವಿ. ಗುಂಡಪ್ಪ ಅವರು 1932ರಲ್ಲಿ ಹುಟ್ಟು ಹಾಕಿದ ಸಂಘವಾಗಿದ್ದು, ದೇಶದ ಅತ್ಯಂತ ಹಳೆಯ, ಉತ್ತಮ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ದ.ಕ. ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆ ವ್ಯವಸ್ಥೆಯು ಮಾದರಿ ಕಾರ್ಯಕ್ರಮವಾಗಿ ಕಂಡು ಬಂದಿದ್ದು, ಇಲ್ಲಿನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸಂಘದ ಜತೆ ಬದ್ಧತೆ ಕಾಣುತ್ತಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸಮ್ಮಾನ
ಹೊಸದಿಲ್ಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ರಾಷ್ಟ್ರೀಯ) ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು. ಅವರನ್ನು ದ.ಕ. ಜಿಲ್ಲಾ ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು. ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ರಾಜ್ಯ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ, ಪುಂಡಲೀಕ ಬಾಳ್ಳೋಜ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಕಾರ್ಯದರ್ಶಿ ಸಂಜೀವರಾವ್‌ ಬಿ. ಕುಲಕರ್ಣಿ, ಕೋಶಾಧಿಕಾರಿ ಡಾ| ಕೆ. ಉಮೇಶ್ವರ, ಎಚ್‌.ಬಿ. ಮದನಗೌಡ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ 80ಕ್ಕೂ ಅಧಿಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next