Advertisement

ಪೌಷ್ಟಿಕ ಆಹಾರ ಸೇವಿಸಿದರೆ ಸದೃಢ ಆರೋಗ್ಯ: ಪೂಜಾರ

05:45 PM May 17, 2019 | Suhan S |

ಯಲಬುರ್ಗಾ: ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ಸರಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.

Advertisement

ತಾಲೂಕಿನ ಯಡ್ಡೋಣಿ ಗ್ರಾಮದ ಸರಕಾರಿ ಆಯುರ್ವೇದಿಕ್‌ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಾಸಿಕ ಪೋಷಣಾ ಅಭಿಯಾನ ಕಾರ್ಯಕ್ರಮದಡಿ ಹಮ್ಮಿಕೊಂಡ ಪೌಷ್ಟಿಕ ಆಹಾರದ ಮಹತ್ವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಕಲುಷಿತ ನೀರು, ಆಹಾರ ಸೇವನೆಯಿಂದ ಲಕ್ಷಾಂತರ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕರು ನೀರು, ಆಹಾರ ಸೇವನೆಯಲ್ಲಿ ಜಾಗೃತಿ ವಹಿಸಿದರೆ ಮಾತ್ರ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಪೌಷ್ಟಿಕತೆ ಎಂದರೆ ಮಾನವನ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಿರುವ ಆಹಾರವನ್ನು ಒದಗಿಸುವ ಮತ್ತು ಪಡೆಯುವ ಪ್ರಕ್ರಿಯೆ. ಜೀವನದುದ್ದಕ್ಕೂ ನಾವು ವಿವಿಧ ಆಹಾರಗಳು, ಪಾನೀಯಗಳು ಮತ್ತು ತಿನಿಸುಗಳನ್ನು ಸೇವಿಸುತ್ತೇವೆ. ಆರೋಗ್ಯಕರ ಆಹಾರವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಗರ್ಭಿಣಿಯರು ದಿನದಲ್ಲಿ ಮಾಮೂಲಿಗಿಂತ ಹೆಚ್ಚು ಆಹಾರ ಸೇವಿಸಬೇಕು. ಹಾಲು, ಹಸಿರು ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು. ಆಹಾರದಲ್ಲಿ ಐಯೋಡಿನಯುಕ್ತ ಉಪ್ಪನ್ನು ಮಾತ್ರ ಬಳಸಬೇಕು. ಗರ್ಭಾವಸ್ಥೆಯಲ್ಲಿ ಆಗಾಗ ವಿಶ್ರಾಂತಿ ಪಡೆಯಬೇಕು ಹಾಗೂ ಅಪೌಷ್ಟಿಕತೆಯನ್ನು ತೊಲಗಿಸಿ, ಪೌಷ್ಟಿಕತೆಯನ್ನು ಸ್ವಾಗತಿಸಿ ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಬೆನ್ನೂರ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.

ಕ್ಷಯರೋಗ ಮೇಲ್ವಿಚಾರಕ ಪ್ರವೀಣ ಎಚ್. ಮಾತನಾಡಿ, ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ರಾತ್ರಿ ಬೆವರುವಿಕೆ, ಹಸಿವು ಆಗದಿರುವುದು ಕ್ಷಯರೋಗದ ಮುಖ್ಯ ಲಕ್ಷಣವಾಗಿವೆ. ಇಂತಹ ಲಕ್ಷಣಗಳು ಕಂಡ ಕೂಡಲೇ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಬ್ಬ ಚಿಕಿತ್ಸೆ ಪಡೆಯದ ಕ್ಷಯರೋಗಿ ಕೆಮ್ಮುವುದರಿಂದ, ಸೀನುವುದರಿಂದ ವರ್ಷದಲ್ಲಿ ಸುಮಾರು ಹತ್ತರಿಂದ ಹದಿನೈದು ಜನರಿಗೆ ರೋಗ ಹರಡುತ್ತಾನೆ. ಅಂತಹ ಜನರನ್ನು ಹುಡುಕಿ ಇಲಾಖೆ ಚಿಕಿತ್ಸೆ ಕೊಡಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

Advertisement

ವಿವಿಧ ತರಕಾರಿ, ಹಣ್ಣು ಹಂಪಲು, ಮೊಳಕೆ ಕಟ್ಟಿದ ಕಾಳುಗಳು, ಹಸಿರು ಸೊಪ್ಪಿನ ತರಕಾರಿ, ಹಾಲು ಮೊಟ್ಟೆಯನ್ನು ಪ್ರದರ್ಶಿಸಲಾಯಿತು.

ಗುನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ದಯಾನಂದ ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವಿ.ಆರ್‌. ತಾಳಿಕೋಟಿ, ಲಕ್ಷ್ಮೀ ಕೆ., ಶೈನಾಜ್‌ಬಿ ವಾಲಿಕಾರ್‌, ಮಲ್ಲಯ್ಯ ಕಟ್ಟಿಮನಿ, ಬಸಮ್ಮ ಅಂಗಡಿ, ಹನಮಕ್ಕ ಗುನ್ನಾಳ, ವಿಜಯಲಕ್ಷ್ಮೀ ಅಂಗಡಿ, ಶಿವಲೀಲಾ ಹುನಗುಂದ, ಕಮಲಾಕ್ಷಿ ಹಿರೇಮಠ, ಸರಸ್ವತಿ ಕೋಳೂರ, ಬಿಬಿಜಾನ್‌ ವಾಲಿಕಾರ್‌, ರೇಣುಖಾ ಬದಗಿ, ಸರೋಜಾ ಮೇಟಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next