Advertisement

ಆರೋಗ್ಯಯುತ ಪಿತ್ತಕೋಶಕ್ಕಾಗಿ ಆರೋಗ್ಯಕರ ಜೀವನ ಶೈಲಿ

02:09 PM May 01, 2022 | Team Udayavani |

ಪಿತ್ತಕೋಶವು ನಮ್ಮ ದೇಹದಲ್ಲಿರುವ ಅತ್ಯಂತ ದೊಡ್ಡ ಅಂಗವಾಗಿದ್ದು, ಸುಮಾರು ಒಂದೂವರೆ ಕಿಲೊಗ್ರಾಮ್‌ಗಳಷ್ಟು ತೂಗುತ್ತದೆ ಮತ್ತು ನಾವು ಸಜೀವವಾಗಿ ಇರಲು ಅಗತ್ಯವಾದ ಸುಮಾರು 500ರಷ್ಟು ಜೀವಪೂರಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತದೆ. ರಕ್ತದಲ್ಲಿರುವ ಅಲ್ಕೊಹಾಲ್‌ ಮತ್ತು ಇತರ ವಿಷಾಂಶಗಳನ್ನು ಶೋಧಿಸುವುದು, ಔಷಧ ಚಯಾಪಚಯ ಕ್ರಿಯೆ, ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಾಯ್ದುಕೊಳ್ಳುವುದು ಮತ್ತು ಕೊಲೆಸ್ಟರಾಲ್‌ ಮಟ್ಟವನ್ನು ಕಾಪಾಡಿಕೊಳ್ಳುವುದು, ದೇಹದ ಅಗತ್ಯ ಪೋಷಕಾಂಶಗಳನ್ನು ಸಂಯೋಜಿಸುವುದು, ರಕ್ತ ಹೆಪ್ಪುಗಟ್ಟುವ ಪ್ರೊಟೀನ್‌ಗಳನ್ನು ಉತ್ಪಾದಿಸುವುದು, ವಿಟಮಿನ್‌ಗಳನ್ನು ಸಂಗ್ರಹಿಸುವುದು ಇತ್ಯಾದಿಗಳು ಪಿತ್ತಕೋಶ ನಿರ್ವಹಿಸುವ ಕಾರ್ಯಗಳಲ್ಲಿ ಸೇರಿವೆ.

Advertisement

ಜಾಗತಿಕವಾಗಿ ಪ್ರತೀ ವರ್ಷ ಸಂಭವಿಸುವ ಮರಣಗಳಲ್ಲಿ ಸುಮಾರು 2 ದಶಲಕ್ಷ ಮೃತ್ಯುಗಳು ಪಿತ್ತಕೋಶದ ಕಾಯಿಲೆಗಳಿಂದಾಗಿ ಉಂಟಾಗುತ್ತವೆ. ಅದರಲ್ಲಿ ಭಾರತದ ಪಾಲು ಶೇ. 18.5ರಷ್ಟು ಆಗಿರುತ್ತದೆ. ಭಾರತದಲ್ಲಿ ಪ್ರತೀ ಐವರಲ್ಲಿ ಒಬ್ಬರಿಗೆ ಪಿತ್ತಕೋಶ ಸಂಬಂಧಿ ಕಾಯಿಲೆಗಳು ಬಾಧಿಸುತ್ತವೆ ಎಂದು ಹೇಳಲಾಗಿದೆ. ಆದರೆ ಈ ಬಹುತೇಕ ಪಿತ್ತಕೋಶದ ಕಾಯಿಲೆಗಳನ್ನು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿದರೆ ತಡೆಯಲು ಸಾಧ್ಯವಿದೆ.

ಮದ್ಯಪಾನವನ್ನು ಮಿತಗೊಳಿಸಿ

ಜಾಗತಿಕವಾಗಿ ಪಿತ್ತಕೋಶದ ಕಾಯಿಲೆಗಳಿಗೆ ಮದ್ಯಪಾನವೇ ಮುಖ್ಯ ಕಾರಣವಾಗಿದೆ. ಅತಿಯಾದ ಮದ್ಯಪಾನ (ಪುರುಷರಿಗೆ 120 ಮಿ.ಲೀ. ಮತ್ತು ಮಹಿಳೆಯರಿಗೆ 60 ಮಿ.ಲೀ. ಕಡು ಮದ್ಯ)ದಿಂದ ಪಿತ್ತಕೋಶದ ಅಂಗಾಂಶಗಳಿಗೆ ಹಾನಿ ಉಂಟಾಗಿ ಊತ ಮತ್ತು ಅಂಗಾಂಶಗಳ ಗಾಯ ಉಂಟಾಗಬಹುದು. ಹೀಗಾಗಿ ಮದ್ಯಪಾನವನ್ನು ವರ್ಜಿಸಿ ಅಥವಾ ಮಿತಗೊಳಿಸಿ.

ಲಸಿಕೆಗಳು

Advertisement

ಹೆಪಟೈಟಿಸ್‌ ಬಿ ಮತ್ತು ಹೆಪಟೈಟಿಸ್‌ ಎ ಕಾಯಿಲೆಗಳು ಪಿತ್ತಕೋಶವನ್ನು ಹಾಳುಗೆಡವುವ ಕಾಯಿಲೆಗಳಾಗಿದ್ದು, ಇವುಗಳ ವಿರುದ್ಧ ಪರಿಣಾಮಕಾರಿ ಲಸಿಕೆಗಳು ಈಗ ಲಭ್ಯವಿವೆ.

ಸುರಕ್ಷಿತ ಲೈಂಗಿಕ ಸಂಬಂಧ

ಒಂದೇ ಸಂಗಾತಿಯ ಜತೆಗೆ ಲೈಂಗಿಕ ಸಂಬಂಧ ಹೊಂದುವುದು ಅಥವಾ ಕಾಂಡೋಮ್‌ ಬಳಕೆಯಿಂದ ಹೆಪಟೈಟಿಸ್‌ ಸಿ ಮತ್ತು ಬಿ ಹರಡುವುದನ್ನು ತಡೆಯಬಹುದಾಗಿದೆ.

ನಿಯಮಿತ ವ್ಯಾಯಾಮ

ವೇಗವಾದ ನಡಿಗೆಯಂತಹ ವ್ಯಾಯಾಮಗಳನ್ನು ದಿನವೂ 30 ನಿಮಿಷಗಳ ಕಾಲ ನಡೆಸುವುದರಿಂದ ದೈಹಿಕವಾಗಿ ಆರೋಗ್ಯವಾಗಿರಬಹುದು ಮತ್ತು ಫ್ಯಾಟಿ ಲಿವರ್‌ ಸಮಸ್ಯೆಯಿಂದ ಪಾರಾಗಬಹುದು.

ಆರೋಗ್ಯಯುತ ಮತ್ತು ಸಮತೋಲಿತ ಆಹಾರಾಭ್ಯಾಸ

ವಿಪರೀತ ಕೊಬ್ಬುಳ್ಳ ಆಹಾರವಸ್ತುಗಳನ್ನು ವರ್ಜಿಸಿ. ನಾರಿನಂಶ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಕರಿದ ಆಹಾರಗಳು, ಕೆಂಪು ಮಾಂಸ ಮತ್ತು ಸಂಸ್ಕರಿತ/ ಜಂಕ್‌ ಆಹಾರಗಳನ್ನು ದೂರವಿಡಿ. ಹೆಚ್ಚು ಕ್ಯಾಲೊರಿಯುಕ್ತ ಆಹಾರಗಳು (ಪಿಜ್ಜಾ/ ಬರ್ಗರ್‌) ಇತ್ಯಾದಿಗಳು, ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳು (ಮೈದಾ, ವೈಟ್‌ ಬ್ರೆಡ್‌, ಬೆಳ್ತಿಗೆ ಅನ್ನ/ ಪಾಸ್ತಾ, ನೂಡಲ್ಸ್‌) ಮತ್ತು ಸಕ್ಕರೆ ನೀವು ವರ್ಜಿಸಬೇಕಾದ ಆಹಾರಗಳು. ಹಣ್ಣುಹಂಪಲುಗಳು, ತರಕಾರಿಗಳು ಮತ್ತು ಇಡೀ ಧಾನ್ಯಗಳು ಇತ್ಯಾದಿ ನಾರಿನಂಶ ಸಮೃದ್ಧ ಆಹಾರವಸ್ತುಗಳನ್ನು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಕೆಂಪು ಮಾಂಸ (ಮಟನ್‌, ಗೋಮಾಂಸ ಮತ್ತು ಹಂದಿ ಮಾಂಸ) ಇತ್ಯಾದಿಗಳಿಗಿಂತ ಮೀನು ಮತ್ತು ಬಿಳಿ ಮಾಂಸವನ್ನು ಹೆಚ್ಚು ಆದ್ಯತೆಯಲ್ಲಿ ಸೇವಿಸಿ.

ನಿಮ್ಮ ದೇಹತೂಕದ ಬಗ್ಗೆ ಎಚ್ಚರಿಕೆಯಿಂದಿರಿ

ಹೆಚ್ಚು ದೇಹತೂಕದವರಾಗಿರುವುದು ಅಥವಾ ಸೊಂಟ-ಹೊಟ್ಟೆಯ ಸುತ್ತ ಕೊಬ್ಬು ಬೆಳೆಯುವುದರಿಂದ ಫ್ಯಾಟಿ ಲಿವರ್‌ ಕಾಯಿಲೆಯ ಅಪಾಯ ಹೆಚ್ಚುತ್ತದೆ. ಸೂಕ್ತ ಪಥ್ಯಾಹಾರ ಮತ್ತು ವ್ಯಾಯಾಮದ ಮೂಲಕ ನಿಮ್ಮ ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. 18.5 ಮತ್ತು 22.9 ಕೆ.ಜಿ./ಎಂ2 ಅಂತರದೊಳಗಿನ ಬಿಎಂಐ ಕಾಯ್ದುಕೊಳ್ಳಿ.

ಆಹಾರ ಪೂರಕ (ಡಯಟರಿ ಸಪ್ಲಿಮೆಂಟ್‌ಗಳು/ ನಾಟಿ ಔಷಧ)ಗಳನ್ನು ದೂರಮಾಡಿ

ಔಷಧ ಅಂಗಡಿಗಳಲ್ಲಿ ಓವರ್‌ ದ ಕೌಂಟರ್‌ ಲಭ್ಯವಾಗುವ, ಪರಿಣಿತ ವೈದ್ಯರು ಶಿಫಾರಸು ಮಾಡದೆ ಇರುವ ಕೆಲವು ಸಾಂಪ್ರದಾಯಿಕ ನಾಟಿ ಔಷಧಗಳು ಮತ್ತು ಪೂರಕ ಆಹಾರಗಳಲ್ಲಿ ಭಾರ ಲೋಹಗಳು, ವಿಷಾಂಶಗಳು ಇರಬಹುದಾಗಿದ್ದು, ಇವು ಪಿತ್ತಕೋಶಕ್ಕೆ ಹಾನಿ ಉಂಟು ಮಾಡಬಲ್ಲವು. ಇಂತಹ ಯಾವುದೇ ಔಷಧಗಳನ್ನು ಸೇವಿಸುವುದಕ್ಕೆ ಆರಂಭಿಸುವ ಮುನ್ನ ನಿಮ್ಮ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ.

ವೈದ್ಯಕೀಯ ಸಹಾಯ ಪಡೆಯಿರಿ

ಆರಂಭಿಕ ಮತ್ತು ಗುಣಪಡಿಸಬಹುದಾದ ಹಂತದಲ್ಲಿ ಪಿತ್ತಕೋಶದ ಕಾಯಿಲೆಗಳು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಹೀಗಾಗಿ ಇಮ್ಮಡಿ ಎಚ್ಚರಿಕೆ ಅಗತ್ಯ. ಆದ್ದರಿಂದ ನಿಯಮಿತ ಅವಧಿಗಳಲ್ಲಿ ಫ್ಯಾಟಿ ಲಿವರ್‌, ಮಧುಮೇಹ, ಕೊಲೆಸ್ಟರಾಲ್‌, ಅಧಿಕ ರಕ್ತದೊತ್ತಡ, ಹೆಪಟೈಟಿಸ್‌ ಬಿ, ಹೆಪಟೈಟಿಸ್‌ ಸಿ ಸೋಂಕು ಇತ್ಯಾದಿಗಳಿಗಾಗಿ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಯಾವುದೇ ತೊಂದರೆ ಇದ್ದರೆ ಆದಷ್ಟು ಬೇಗನೆ ಚಿಕಿತ್ಸೆ ಆರಂಭಿಸಿ. ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟರಾಲ್‌ಗ‌ಳ ಮೇಲೆ ಉತ್ತಮ ಆಹಾರ ಕ್ರಮ, ವ್ಯಾಯಾಮ ಮತ್ತು ಔಷಧಗಳ ಮೂಲಕ ಉತ್ತಮ ನಿಯಂತ್ರಣ ಹೊಂದುವುದು ಫ್ಯಾಟಿ ಲಿವರ್‌ ಕಾಯಿಲೆಯ ಮೇಲೆ ನಿಯಂತ್ರಣ ಹೊಂದಲು ಮತ್ತು ಚಿಕಿತ್ಸೆ ನೀಡಲು ಮುಖ್ಯವಾಗಿದೆ.

ವೈಯಕ್ತಿಕ ನೈರ್ಮಲ್ಯ

ಸ್ನಾನ, ಶೌಚಗೃಹ ಬಳಕೆಯ ಬಳಿಕ, ಆಹಾರ ತಯಾರಿಸುವ ಮತ್ತು ಆಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು, ಸರಿಯಾಗಿ ಬೇಯಿಸಿದ/ ಬಿಸಿ ಮಾಡಿದ ಆಹಾರವನ್ನೇ ಸೇವಿಸುವುದು, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಹೆಪಟೈಟಿಸ್‌ ಎ ಮತ್ತು ಇಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ತುಂಬಾ ಮುಖ್ಯವಾಗಿದೆ. ಗಡ್ಡ ತೆಗೆಯುವ ರೇಝರ್‌, ಚುಚ್ಚುಮದ್ದಿನ ಸೂಜಿಗಳು, ಹಲ್ಲುಜ್ಜುವ ಬ್ರಶ್‌, ನೈಲ್‌ ಕಟ್ಟರ್‌ ಇತ್ಯಾದಿಗಳನ್ನು ಇನ್ನೊಬ್ಬರ ಜತೆಗೆ ಹಂಚಿಕೊಳ್ಳದೆ ಇರುವುದು ಹೆಪಟೈಟಿಸ್‌ ಬಿ ಮತ್ತು ಸಿ ಸೋಂಕಿನಿಂದ ದೂರ ಉಳಿಯಲು ತುಂಬಾ ಮುಖ್ಯವಾಗಿದೆ.

ಧೂಮಪಾನ ತ್ಯಜಿಸಿ

ಧೂಮಪಾನವು ಪಿತ್ತಕೋಶ ಕಾಯಿಲೆಗಳು ಹಾಗೂ ಪಿತ್ತಕೋಶದ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸಿ.

ಡಾ| ಅನುರಾಗ್‌ ಶೆಟ್ಟಿ ಕನ್ಸಲ್ಟಂಟ್‌ ಗ್ಯಾಸ್ಟ್ರೊಎಂಟರಾಲಜಿ ಕೆಎಂಸಿ ಆಸ್ಪತ್ರೆ, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next