Advertisement

ಯೋಗದಿಂದ ಸದೃಢ ಆರೋಗ್ಯ

05:01 PM Jun 18, 2018 | |

ಶಿವಮೊಗ್ಗ: ಯೋಗ ಶರೀರದ ಆರೋಗ್ಯವನ್ನು ಸದೃಢಗೊಳಿಸುವುದರ ಜೊತೆಗೆ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿಸ್‌ ಈಶ್ವರೀಯ ವಿಶ್ವ ವಿದ್ಯಾಲಯ ಶಿವಮೊಗ್ಗ ಸಂಸ್ಥೆ ಸಂಚಾಲಕಿ
ಬ್ರಹ್ಮಕುಮಾರಿ ಅನಸೂಯ ಹೇಳಿದರು.

Advertisement

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾನಸಧಾರ ಮಾನಸಿಕ ಆರೋಗ್ಯ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಕೇಂದ್ರಿಯ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಅನುಸಂಧಾನ ಪರಿಷತ್‌ ಮತ್ತು ಬ್ರಹ್ಮಕುಮಾರೀಸ್‌ ರಾಜಯೋಗ ಎಜುಕೇಶನ್‌ ಅಂಡ್‌ ರಿಸರ್ಚ್‌ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರದಲ್ಲಿ ಅವರು ಮಾತನಾಡಿದರು.

ಸಂಕಲ್ಪದಿಂದ ಸೃಷ್ಟಿ ಎಂಬ ಮಾತಿನಂತೆ ಮನುಷ್ಯ ಮನಸ್ಸು ಮಾಡಿದರೆ ಏನ್ನನ್ನೂ ಬೇಕಾದರೂ ಸಾಧಿಸಬಹುದು. ಆದರೆ ಅದೇ ಮನಸ್ಸು ಯಾವುದೋ ಒತ್ತಡಕ್ಕೆ ಸಿಲುಕಿದರೆ ಅದು ದುಷ್ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ಒತ್ತಡದಿಂದ ಹೊರಬರಲು ಹಾಗೂ ಉತ್ತಮ ಆರೋಗ್ಯ ಹೊಂದುವುದಕ್ಕೆ ಪ್ರತಿನಿತ್ಯ ಯೋಗಾಭ್ಯಾಸದಲ್ಲಿ
ತೊಡಗಿಕೊಳ್ಳಬೇಕೆಂದರು. 

ಆಲೋಚನೆಗಳನ್ನು ಉತ್ಪತ್ತಿ ಮಾಡುವ ಮುಖ್ಯ ಕೇಂದ್ರ ಮನಸ್ಸು. ದಿನನಿತ್ಯದ ಜೀವನದಲ್ಲಿ ಅನೇಕ ಪ್ರಕಾರದ
ಆಲೋಚನೆಗಳನ್ನು ಮನಸ್ಸಿನಲ್ಲಿ ಮಾಡುತ್ತಿರುತ್ತೇವೆ. ಆದರೆ, ಮನಸ್ಸಿನಲ್ಲಿ ಉತ್ಪತ್ತಿಯಾಗುವ ಎಲ್ಲಾ ಆಲೋಚನೆಗಳು
ಸಕಾರಾತ್ಮಕತೆಯಿಂದ ಕೂಡಿರುತ್ತದೆಯೇ ಅಥವಾ ನಕಾರಾತ್ಮಕತೆಯಿಂದ ಕೂಡಿರುತ್ತದೆಯೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ ಎಂದರು.

ಜೀವನದಲ್ಲಿ ಅನೇಕ ಪ್ರಕಾರದ ಒತ್ತಡಗಳಿಗೆ ಒಳಗಾದಾಗ ಅತ್ಯಮೂಲ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ಹೆಚ್ಚು ವ್ಯರ್ಥ ಆಲೋಚನೆಗಳನ್ನು ಮಾಡುವುದರಿಂದ ಮೆದುಳಿನ ಕ್ಷಮತೆ ಕ್ಷೀಣಿಸುತ್ತಾ ಅದು ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಿ ಅದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

Advertisement

ಆದ್ದರಿಂದ ಇಂತಹ ಮಾನಸಿಕ ಒತ್ತಡ, ಜೀವನದಲ್ಲಿ ಅರಿವಿಲ್ಲದಂತೆ ಬರುವಂತಹ ಅನೇಕ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಮುಖ್ಯವಾಗಿ ಆತ್ಮಬಲ ಅಥವಾ ಮನೋಬಲ ಬೇಕಾಗುತ್ತದೆ. ಅಂತಹ ಆತ್ಮ ಶಕ್ತಿ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಯೋಗ ಮತ್ತು ಯೋಗಾಸನ ಅತ್ಯಂತ ಪ್ರಮುಖವಾಗುತ್ತದೆ ಎಂದು ಹೇಳಿದರು. 

ಪ್ರತಿನಿತ್ಯ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಮನಸ್ಸು ಮತ್ತು ಬುದ್ಧಿಯನ್ನು ಏಕಾಗ್ರ ಮಾಡಿ ಪರಮಾತ್ಮನನ್ನು
ಧ್ಯಾನ ಮಾಡುವುದರಿಂದ ಆತ್ಮದಲ್ಲಿ ಸಾಮರ್ಥ್ಯತೆ ಹೆಚ್ಚಾಗಿ ಪರಿಸ್ಥಿತಿಗಳನ್ನು ಅತ್ಯಂತ ಸುಲಭವಾಗಿ ಎದುರಿಸಲು
ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಅಮೃತ ಯೋಗ ಕೇಂದ್ರದ ಯೋಗ ಶಿಕ್ಷಕಿ ಸುಧಾ, ಯೋಗ ಗುರು ವೈಜ್ಯನಾಥ ಮತ್ತಿತರರು ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next