ಈ ಆಸನ ಮಾಡುವುದರಿಂದ, ದೇಹದ ತೂಕ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ಸೊಂಟದ ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಹಲವು ರೋಗಗಳು ದೂರವಾಗುತ್ತವೆ.
“ಈಚೆಗೆ ತುಂಬಾ ದಪ್ಪ ಆಗಿಬಿಟ್ಟೆ ಅನ್ನಿಸ್ತಾ ಇದೆ. ಹೊಟ್ಟೆ ಕಾಣಿಸ್ತಾ ಇದೆ. ಸೊಂಟದ ಸುತ್ತ ಬೊಜ್ಜು ಬೆಳೆದಂತೆ ಅನ್ನಿಸ್ತಾ ಇದೆ’- ಕೆಲವರು ಬೇಸರದಲ್ಲಿ ಹೀಗೆ ಮಾತಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅಂಥವರಿಗೆ, ಹೇಗಾದರೂ ಸರಿ, ಸಣ್ಣಗಾಗಬೇಕು ಅನ್ನುವ ಆಸೆ ಇರುತ್ತದೆ. ಅವರೆಲ್ಲಾ ತಪ್ಪದೇ ಮಾಡಬೇಕಿರುವ ಆಸನವೇ ಚಕ್ರಾಸನ.
ಚಕ್ರಾಸನ ಮಾಡುವ ಬಗೆ ಹೀಗಿದೆ. ಮೊದಲು ಅಂಗಾತ ಮಲಗಿ. ಕೈಗಳನ್ನು ನೆಲಕ್ಕೆ ಸಮಾನಾಂತರವಾಗಿ ಇರಿಸಿ. ಕಾಲುಗಳನ್ನು, ಮೊಣಕಾಲಿನವರೆಗೆ ಮಡಚಿಕೊಳ್ಳಿ. ಪಾದಗಳನ್ನು ನೆಲಕ್ಕೆ ತಾಗುವಂತೆ ಇರಿಸಿ. ಈಗ ನಿಧಾನವಾಗಿ ಕೈಗಳನ್ನು ಮೇಲಕ್ಕೆತ್ತಿ, ಮೊಣಕೈವರೆಗೆ ಮಡಿಚಿ, ಅಂಗೈಯನ್ನು ನೆಲಕ್ಕೆ ಊರಬೇಕು. ನಂತರ ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟ ಮತ್ತು ಎದೆಯನ್ನು ಮೇಲಕ್ಕೆ ಎತ್ತಬೇಕು. ಈ ಸಂದರ್ಭದಲ್ಲಿ ದೇಹದ ಒಟ್ಟು ಭಾರ ಅಂಗಾಲು ಮತ್ತು ಅಂಗೈನ ಮೇಲೆ ಇರಬೇಕು. ಹೀಗೆ ಮಾಡಿದಾಗ ದೇಹದ ಒಟ್ಟು ಆಕಾರ ಚಕ್ರದಂತೆ ಕಾಣುತ್ತದೆ. ಆ ಕಾರಣಕ್ಕೇ ಇದು ಚಕ್ರಾಸನ.
ಚಕ್ರಾಸನವು ವಿಶೇಷವಾಗಿ ಕುತ್ತಿಗೆ, ಕೈ- ಕಾಲು ಮತ್ತು ಸೊಂಟದ ಭಾಗಕ್ಕೆ ವಿಶೇಷವಾದ ವ್ಯಾಯಾಮವನ್ನು ಒದಗಿಸುತ್ತದೆ. ಈ ಆಸನ ಮಾಡುವುದರಿಂದ, ದೇಹದ ತೂಕ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ಸೊಂಟದ ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಹಲವು ರೋಗಗಳು ದೂರವಾಗುತ್ತವೆ. ರಕ್ತಸಂಚಾರ ಸರಾಗವಾಗುತ್ತದೆ. ಬೆನ್ನುಮೂಳೆಯು ಸದೃಢವಾಗುವುದು. ಚಕ್ರಾಸನವನ್ನು ಎಳೆಯ ವಯಸ್ಸಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಲ್ಲಿ ವೃದ್ಧಾಪ್ಯದಲ್ಲೂ ಬೆನ್ನು ಬಾಗುವುದಿಲ್ಲ ಎಂಬ ಮಾತೂ ಇದೆ. ಸೊಂಟದ ನೋವು ಇರುವವರು, ಹೃದಯ ಸಂಬಂಧಿ ಕಾಯಿಲೆ ಇರುವವರು ಮತ್ತು ಅಧಿಕ ರಕ್ತದ ಒತ್ತಡ ಇರುವವರು ಈ ಆಸನ ಮಾಡ ಬಾರದು ಎಂಬ ಮಾತುಗಳೂ ಇವೆ.