Advertisement

ಯೋಗ ದಿಂದ ಆರೋಗ್ಯವೃದ್ಧಿ

03:53 PM Dec 29, 2017 | Team Udayavani |

ವಡಗೇರಾ: ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಬೇಕಾದರೆ ನಿತ್ಯ ಯೋಗ ಮಾಡಬೇಕು. ಯಾರು ಯೋಗ ಮಾಡುತ್ತಾರೆ ಅವರಿಗೆ ರೋಗ ಇರುವುದಿಲ್ಲ ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ಡಾ| ಎ. ಬಿ. ಮಾಲಕರಡ್ಡಿ ಹೇಳಿದರು.

Advertisement

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಲಬುರಗಿಯ ಎಚ್‌.ಸಿ.ಜಿ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ಕಲಬುರಗಿಯ
ಸಂಗಮೇಶ್ವರ ಮಹಿಳಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್‌ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರಿಗೆ ಕ್ಯಾನ್ಸರ್‌ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಇಂತಹ
ಶಿಬಿರಗಳಿಂದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

40 ವರ್ಷ ದಾಟಿರುವ ಪ್ರತಿಯೊಬ್ಬರು ವೈದ್ಯರನ್ನು ಸಂಪರ್ಕಿಸಬೇಕು. ಯಾವುದಾದರೂ ರೋಗ ಇದ್ದರೆ ಅದನ್ನು
ಪ್ರಥಮ ಹಂತದಲ್ಲಿಯೆ ನಿಯಂತ್ರಣಕ್ಕೆ ತರಲು ಸಾಧ್ಯ. ಅದಕ್ಕಾಗಿ ವೈದ್ಯರನ್ನು ಗೌರವದಿಂದ ಕಾಣಬೇಕು. ಆಗ ವೈದ್ಯರು ಉತ್ಸಾಹದಿಂದ ರೋಗ ತಪಾಸಣೆ ಮಾಡಿ ಅದಕ್ಕೆ ತಕ್ಕಂತೆ ಔಷಧ ಕೊಟ್ಟು ರೋಗಿ ಜೀವ ಕಾಪಾಡಲು ಶಕ್ತಿ ಮೀರಿ ಶ್ರಮಿಸುತ್ತಾರೆ ಎಂದು ಹೇಳಿದರು. ಡಿಎಚ್‌ಒ ಡಾ| ನರಸಿಂಹಲು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಆಂಗ್ಲ ಭಾಷೆಯ ಮೂರು ಎ ಅಕ್ಷರಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಅ ಎಂದರೆ ಆಶಾ, ಆರೋಗ್ಯ, ಅಂಗನವಾಡಿ ಕಾರ್ಯಕರ್ತರು. ಇವರು ಆರೋಗ್ಯ ಇಲಾಖೆಯ ಮೂರು ಸ್ಥಂಬಗಳು. ಇವರು ಮನೆ ಬಾಗಿಲಿಗೆ ಬಂದಾಗ ಆತ್ಮೀಯತೆಯಿಂದ ಕಂಡು ತಮ್ಮ ಸಮಸ್ಯೆ ಹೇಳಿಕೊಂಡರೆ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಸ್ನೆಹ ಕ್ಲೀನಿಕ್‌ ಹಾಗೂ ಸುರಕ್ಷಾ ಆರೋಗ್ಯ ಟ್ರಸ್ಟ್‌ ವತಿಯಿಂದ ಉಚಿತವಾಗಿ ಸ್ತ್ರೀರೋಗ ತಪಾಸಣೆ ಮಾಡಲಾಗುವುದು. ಜನರ ಆರೋಗ್ಯ ಕಾಪಾಡಲು ಜಿಲ್ಲೆಯ ಶಹಾಪುರ ಮತ್ತು ಯಾದಗಿರಿ ಸೇರಿ 109 ಜನ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರು ಸಮುದಾಯ ಮತ್ತು ಆರೋಗ್ಯ ಇಲಾಖೆ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು. 

Advertisement

ತಡವಾಗಿ ಮದುವೆಯಾಗುವುದು, ಮದುವೆ ನಂತರ ಎರಡು ವರ್ಷದವರೆಗೆ ಮಗು ಪಡೆಯಬಾರದು. ಹಾಗೆಯೆ ಮೊದಲ ಮಗು ಮತ್ತು ಎರಡನೇ ಮಗುವಿಗೂ ಕನಿಷ್ಠ ಪಕ್ಷ ಮೂರು ವರ್ಷಗಳ ಅಂತರವಿರಬೇಕು. 

ಆಗ ಮಾತ್ರ ಜನಸಂಖ್ಯೆ ತಡೆಗಟ್ಟಲು ಸಾಧ್ಯವಾಗಬಹುದು ಎಂದು ನುಡಿದರು. ಕಲಬುರಗಿಯ ಸಂಗಮೇಶ್ವರ ಮಹಿಳಾ
ಮಂಡಳಿ ಉಪಾಧ್ಯಕ್ಷೆ ಡಾ| ಮಹಾದೇವಿ ಮಾಲಕರಡ್ಡಿ, ಜಿಪಂ ಸದಸ್ಯರಾದ ಅಶೋಕರಡ್ಡಿ ಗೋನಾಲ, ಗಿರಿಜಮ್ಮ
ಸದಾಶಿವಪ್ಪಗೌಡ ರೋಟ್ನಡಗಿ, ಗ್ರಾಪಂ ಅಧ್ಯಕ್ಷ ಗೋಪಾಲ ವಿ. ನಾಯಕ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷ ಬಸವರಾಜಪ್ಪಗೌಡ ಪಾಲೀಪಾಟೀಲ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಬಸವರಾಜ ಸೊನ್ನದ, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾರಡ್ಡಿ ಕಂದಕೂರ, ಯೂಥ್‌ ಅಧ್ಯಕ್ಷ ಮಲ್ಲು ಶಿವಪುರ, ಮಕ್ಕಳ ತಜ್ಞರಾದ ಸುಭಾಷ ಕರಣಗಿ, ಸಮುದಾಯ ಆರೋಗ್ಯ ಕೇಂದ್ರದ ಡಾ| ಜಗನ್ನಾಥರಡ್ಡಿ, ಡಾ| ರಮೇಶ ಗುತ್ತೇದಾರ, ಡಾ| ಸವಿತಾ,
ಡಾ| ಪರಿಮಳ, ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ರಾಜೇಶ್ವರಿ ಸ್ವಾಗತಿಸಿದರು. ಆರೋಗ್ಯ ಸಹಾಯಕ ಶಶಿಕಾಂತ ಕಾರ್ಯಕ್ರಮ ನಿರೂಪಿಸಿದರು. ಮಾಣಿಕರಡ್ಡಿ ಕುರಕುಂದಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next