ಬೀದರ: ಯಾವುದೇ ಸಾಧನೆ ಮಾಡಬೇಕಾದರೆ ಆರೋಗ್ಯ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಯೋಗ ಹಾಗೂ ಆಯುಷ್‌ಗಳು ಆರೋಗ್ಯಕರ ವ್ಯಕ್ತಿಗಳನ್ನು ರೂಪಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದಲ್ಲಿ ಕರ್ನಾಟಕ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತರು ಸಮಾಜದ ಆಸ್ತಿಯಾಗಿರುತ್ತಾರೆ. ಯುವಕರು ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಏನು ಬಯಸುತ್ತೇವೆಯೋ ಅದರ ಬಗ್ಗೆ ಜಾಗೃತಿ ಇರಬೇಕು. ನಾನು ಯಾರು, ನನ್ನ ಕೆಲಸ ಏನು ಎಂಬುದನ್ನು ತಿಳಿದವರು ಮುಂದೆ ದೊಡ್ಡ ವ್ಯಕ್ತಿಗಳಾಗುತ್ತಾರೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಸಮಸ್ಯೆಗಳು ನಮ್ಮನ್ನು ಗಟ್ಟಿ ಮಾಡುತ್ತವೆ ಎಂದು ಹೇಳಿದರು.
ಕರ್ನಾಟಕ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ| ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿ, ಆಯುಷದಿಂದ ಅಡ್ಡ ಪರಿಣಾಮಗಳು ಆಗುವುದಿಲ್ಲ ಆದರೆ ಅಲೋಪತಿಯಲ್ಲಿ ಅಡ್ಡ ಪರಿಣಾಮಗಳಿರುತ್ತವೆ. ಆಯುಷ್ ಚಿಕಿತ್ಸಾ ಪದ್ದತಿ ಪರಂಪರೆಯಿಂದ ಬೆಳೆದು ಬಂದಿದೆ ಎಂದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ| ಶಾರದಾ ಸಂಬ್ರೇಕರ್ ಮಾತನಾಡಿ, ರೋಗಿಗಳನ್ನು ನಿರೋಗಿಯಾಗಿ ಮಾಡುವುದೇ ಇಲಾಖೆಯ ಉದ್ದೇಶವಾಗಿದೆ. ಉತ್ತಮ ಆರೋಗ್ಯಕ್ಕೆ ಆಯುಷ್ ಔಷಧಗಳು ಸೂಕ್ತ ಎಂದರು.
ಕಾರ್ಯಕ್ರಮದ ನಂತರ ಡಾ| ಬಾಬಾಸಾಹೇಬ್ ಗಡ್ಡೆ, ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತು, ಡಾ| ಜಗನ್ನಾಥ ಹೆಬ್ಟಾಳೆ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ ಕುರಿತು, ಡಾ| ವಚನಶೃತಿ ಅವರು ಸ್ತ್ರೀ ರೋಗಗಳು ಹಾಗೂ ಅವುಗಳ ಉಪಚಾರ ಕುರಿತು, ಡಾ| ಉಮಾಕಾಂತ ಪಾಟೀಲ ವ್ಯಕ್ತಿತ್ವ ವಿಕಸನ ಕುರಿತು, ಡಾ| ಲೋನಿಮಠ ಅವರು ಆರ್ಯುವೇದ ಔಷಧಗಳ ಪರಿಚಯ ಕುರಿತು ಉಪನ್ಯಾಸ ನೀಡಿದರು. ಕರಾಶಿ ಸಂಸ್ಥೆಯ ಉಪಾಧ್ಯಕ್ಷ ಸಿದ್ರಾಮ ಪಾರಾ, ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎಸ್. ಪಾಟೀಲ, ಸುನೀತಾ ಕೂಡ್ಲಿಕರ್, ಸುರೇಖಾ ಬಿರಾದಾರ ಸೇರಿದಂತೆ ಆಯುಷ್ ಇಲಾಖೆಯ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.