Advertisement

ರಾಮನಗರಕ್ಕೆ ಆರೋಗ್ಯ ವಿವಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ

12:44 PM Mar 19, 2017 | Team Udayavani |

ಬೆಂಗಳೂರು: ಪೂರ್ವನಿಗದಿಯಂತೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸುವ ಕಾರ್ಯ ಭಾನುವಾರದಿಂದಲೇ ಆರಂಭವಾಗಲಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಆರೋಗ್ಯ ವಿವಿ ಸ್ಥಳಾಂತರಿಸಲು ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರ ವಿಳಂಬವಾಗಲಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಆದರೆ, ರಾಜ್ಯಪಾಲರು ಸ್ಥಳಾಂತರಿಸುವುದು ಬೇಡವೆಂದು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದಷ್ಟೇ ಹೇಳಿದ್ದಾರೆ. 

ಆದರೆ, ಬಿಜೆಪಿಯವರು ಅದನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ತಿಳಿಸಿದರು. ವಿವಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಂದ ಮಾಡಲು ಸಾಧ್ಯವಾಗದ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಈಗಾಗಲೇ ತಾವು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ರಾಜ್ಯಪಾಲರನ್ನು ಭೇಟಿಯಾಗಿ ಸ್ಥಳಾಂತರ ಮಾಡುವ ಕುರಿತು ಅವರಿಗೆ ಮನವರಿಕೆ ಮಾಡಿದ್ದೇವೆ. ಹೀಗಾಗಿ ಭಾನುವಾರವೇ ಸ್ಥಳಾಂತರಕ್ಕೆ ಚಾಲನೆ ನೀಡಲಾಗುವುದು ಎಂದರು.

ಆರೋಗ್ಯ ವಿವಿಯನ್ನು ಬೆಂಗಳೂರು ನಗರದಿಂದ ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ಭೂ ವಿವಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಪ್ರಸ್ತುತ ವಿವಿಯ ಆಡಳಿತ ವಿಭಾಗವನ್ನು ಮಾತ್ರ ರಾಮನಗರದ ಕಂದಾಯ ವಿಭಾಗಕ್ಕೆ
ಸ್ಥಳಾಂತರ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅರ್ಚಕರಹಳ್ಳಿಗೆ ವಿವಿ ಸ್ಥಳಾಂತರ ಮಾಡಲಾಗುತ್ತದೆ.

ಏನಿದು ವಿವಾದ ?
ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿವಿಯನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಿ ಅದಕ್ಕಾಗಿ ಅರ್ಚಕರಹಳ್ಳಿಯನ್ನು ಗುರುತಿಸಲಾಗಿತ್ತು. ಆದರೆ, ಭೂಸ್ವಾಧೀನ ಮತ್ತು ಪರಿಹಾರ ನಿಗದಿಗೆ ಸಂಬಂಧಿಸಿದಂತೆ ವ್ಯಾಜ್ಯ ಉಂಟಾಗಿ ಪ್ರಕರಣ ಸುಪ್ರೀಂಕೋರ್ಟ್‌ವರೆಗೆ ಹೋಗಿ ಇತ್ಯರ್ಥ ವಾಗಿತ್ತು. ಇದೀಗ ಭೂಸ್ವಾಧೀನ ಕುರಿತ ವಿವಾದ ಬಗೆಹರಿದಿದ್ದು, ಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಆದರೆ, ವಿವಿಗೆ ಸಂಬಂಧಿಸಿದ ಕಟ್ಟಡ, ಆಸ್ಪತ್ರೆ ಮತ್ತಿತರೆ ನಿರ್ಮಾಣ ಕಾರ್ಯಗಳು ನಡೆಯಬೇಕಿದೆ. ಹೀಗಾಗಿ ಸದ್ಯಕ್ಕೆ ಆಡಳಿತ ಕಚೇರಿಯನ್ನು ಮಾತ್ರ ರಾಮನಗರದಲ್ಲಿರುವ ಕಂದಾಯ ಭವನಕ್ಕೆ ಸ್ಥಳಾಂತರಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next