Advertisement

ನಿಂಬೆಹಣ್ಣೆಂಬ ಸಂಜೀವಿನಿ

01:43 PM Jul 05, 2021 | Team Udayavani |

ನಮ್ಮ ಪ್ರಕೃತಿಯಲ್ಲಿ ದೊರಕುವ ಹಲವಾರು ಗಿಡಗಳು, ಹಣ್ಣುಗಳು ನಮ್ಮ ದೇಹದ  ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಸಾಲಿನಲ್ಲಿ ತಿನ್ನಲು ಹುಳಿಯಾದರೂ ಆರೋಗ್ಯಕ್ಕೆ ಅತ್ಯುತ್ತಮವಾಗಬಲ್ಲ ಲಿಂಬೆ ಹಣ್ಣು ಕೂಡಾ ಸೇರಿಕೊಳ್ಳುತ್ತದೆ.

Advertisement

ನಿಂಬೆ ಹಣ್ಣಿನ ಸೇವನೆಯನ್ನು ಮಾಡುವುದರಿಂದಾಗಿ ನಮ್ಮ ದೇಹಕ್ಕೆ ನಾನಾ ರೀತಿಯ ಉಪಯೋಗಗಳಿದ್ದು, ಅಪಾರ ಔಷಧೀಯ ಗುಣ ಹೊಂದಿರುವ ಇದು ಅಡುಗೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಬಹು ಮುಖ್ಯ ಸ್ಥಾನ ಪಡೆದಿದೆ.

ನಿಂಬೆಹಣ್ಣಿನ ಉಪಯೋಗಗಳು

-ನಿಂಬೆಹಣ್ಣಿನ ರಸವನ್ನು ಒಂದು ಬಟ್ಟಲಿಗೆ ಹಿಂಡಿ, ಅದರಲ್ಲಿ ಸ್ವಲ್ಪ ಕಲ್ಲು ಸಕ್ಕರೆಯ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ವಾಂತಿ ನಿವಾರಣೆಯಾಗುತ್ತದೆ. ಅಲ್ಲದೆ ಸ್ವಲ್ಪ ನೀರಿಗೆ ಲಿಂಬೆ ಹಣ್ಣಿನ ರಸವನ್ನು ಹಿಂಡಿ ದಿನಕ್ಕೆ ನಾಲ್ಕು ಬಾರಿ ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ

-ನಿಂಬೆಹಣ್ಣಿನ ರಸವನ್ನು ಹಿಂಡಿ ಒಂದು ಚಮಚದಷ್ಟು ದಿನಕ್ಕೆ ಎರಡು ಬಾರಿ ಸೇವಿಸಿದರೆ ಹುಳಿತೇಗು ನಿವಾರಣೆಯಾಗುತ್ತದೆ

Advertisement

-ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ಒಂದು ಬಟ್ಟಲು ಕುರಿಯ ಹಾಲಿನಲ್ಲಿ ಬೆರೆಸಿ ಕುಡಿದರೆ ಆಮಶಂಕೆ ತಕ್ಷಣವೇ ವಾಸಿಯಾಗುವುದು. ಉಪ್ಪು ಬೆರೆಸಿದ ನಿಂಬೆ ಹಣ್ಣಿನ ಪಾನಕ ಸೇವಿಸುವುದರಿಂದ ಆಮಶಂಕೆ ಮತ್ತು ಮೂಲವ್ಯಾಧಿಗಳಲ್ಲಿ ಆಗುವ ರಕ್ತಸ್ರಾವ ಸ್ಥಗಿತವಾಗುತ್ತದೆ.

-ಹಸುವಿನ ತಾಜಾ ನೊರೆ ಹಾಲಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿ ತಕ್ಷಣ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಇದನ್ನು ಒಂದು ವಾರಗಳ ಕಾಲ ಮಾಡಬೇಕು

-ಒಂದು ಬಟ್ಟಲು ನೀರಿಗೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಒಂದು ಚಿಟಿಕೆ ಉಪ್ಪಿನ ಪುಡಿ ಸೇರಿಸಿ ಕುಡಿಯುವುದರಿಂದ ಉರಿಮೂತ್ರ ತಕ್ಷಣವೇ ಗುಣವಾಗುವುದು

-ಮೊಸರು ಅನ್ನಕ್ಕೆ ನಿಂಬೆರಸ ಹಿಂಡಿ ಮೂರು ದಿನಗಳ ಕಾಲ ಊಟ ಮಾಡಿದರೆ ಗುದದ್ವಾರದ ತುರಿಕೆ ನಿವಾರಣೆಯಾಗುತ್ತದೆ.

-ನಿಂಬೆಹಣ್ಣಿನ ರಸಕ್ಕೆ ಸಕ್ಕರೆ ಹಾಕಿ ಪಾನಕ ಮಾಡಿಕೊಂಡು ಕುಡಿದರೆ ಜ್ವರದ ತಾಪದಿಂದ ಉಂಟಾಗಿರುವ ಬಾಯಾರಿಕೆ ನಿವಾರಣೆಯಾಗುತ್ತದೆ ಹಾಗೂ ಬಿಸಿಯಾದ ಚಹಾಕ್ಕೆ ನಿಂಬೆ ಹಣ್ಣಿನ ರಸ ಹಿಂಡಿ ಸೇವಿಸಿದರೆ ನೆಗಡಿ ಗುಣವಾಗುತ್ತದೆ

-ಒಂದು ಚಮಚ ನಿಂಬೆರಸವನ್ನು ಊಟಕ್ಕೆ ಮುಂಚೆ ಸೇವಿಸಿದರೆ ಉಬ್ಬಸ ರೋಗದವರಿಗೆ ಗಣನೀಯ ರೀತಿಯಲ್ಲಿ ಪರಿಹಾರ ದೊರಕುತ್ತದೆ.

-ನಿಂಬೆರಸವನ್ನು ಕಿವಿಗೆ ತೊಟ್ಟು ತೊಟ್ಟಾಗಿ ಬಿಡುತ್ತಿದ್ದರೆ ಕ್ರಮೇಣ ಕಿವಿ ಸೋರುವಿಕೆ ಸಮಸ್ಯೆ ಯಿಂದ ಪರಿಹಾರವನ್ನು ಪಡೆಯಬಹುದಾಗಿದೆ.

-ವಸಡಿಗೆ ನಿಂಬೆರಸ ವನ್ನು ಸವರುತ್ತಿದ್ದರೆ ಹಲ್ಲು ನೋವು ಬಹುಬೇಗ ಉಪಶಮನವಾಗುತ್ತದೆ.

– ನಿಂಬೆಹಣ್ಣಿನ ರಸವನ್ನು ತಲೆಗೆ ಚೆನ್ನಾಗಿ ತಿಕ್ಕಿ ಒಂದು ಗಂಟೆಯ ನಂತರ ನೀರಿನಿಂದ ತೊಳೆಯಬೇಕು. ಇದೇ ಕ್ರಮವನ್ನು ಆಗಾಗ ಅನುಸರಿಸುತ್ತಿದ್ದರೆ ಕೂದಲು ಉದುರುವಿಕೆ ನಿಲ್ಲುತ್ತದೆ. ನಿಂಬೆ ಹಣ್ಣಿನ ರಸವನ್ನು ಸೀಗೆ ಪುಡಿಯೊಂದಿಗೆ ಬೆರೆಸಿ ತಲೆಗೆ ಹಚ್ಚಿ ತೊಳೆದುಕೊಂಡರೆ ತಲೆಯಲ್ಲಿನ ಹೊಟ್ಟು ನಿವಾರಣೆಯಾಗುತ್ತದೆ.

-ಬೇಸಿಗೆಕಾಲದಲ್ಲಿ ಒಂದು ಬಟ್ಟಲು ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ 2 ವಾರಗಳ ಕಾಲ ಸೇವಿಸಿದರೆ ಶರೀರದ ಕೊಬ್ಬಿನಂಶ ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.

-ನಿಂಬೆ ಎಲೆಗಳನ್ನು ನುಣ್ಣಗೆ ರುಬ್ಬಿ ಎಳ್ಳೆಣ್ಣೆಯಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ ಸ್ನಾಯು ನೋವು, ಕೀಲುನೋವು ಇರುವ ಸ್ಥಳಕ್ಕೆ ಲೇಪಿಸಿದರೆ ನೋವು ಬಹುಬೇಗ  ಶಮನವಾಗುತ್ತದೆ.

-ನಿಂಬೆಹಣ್ಣಿನ ರಸದಲ್ಲಿ ತೇಯ್ದ ಗಂಧವನ್ನು ತುರಿಕಜ್ಜಿಗೆ ಹಚ್ಚಿದರೆ ಬೇಗ ಸಮಸ್ಯೆ ವಾಸಿಯಾಗುವುವು

-ನಿಂಬೆರಸದೊಂದಿಗೆ ಹಾಲಿನ ಕೆನೆ, ಕಡಲೆ ಹಿಟ್ಟು, ಕಲಸಿ ಮುಖಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ. ಅಲ್ಲದೆ ನಿಂಬೆರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮೈಯಿಗೆ ಹಚ್ಚಿಕೊಂಡರೆ ಚರ್ಮ ಮೃದುವಾಗುವುದು ಹಾಗೂ ಕಾಂತಿಯುಕ್ತವಾಗುವುದು.

-ಕಾಲಿನಲ್ಲಿ ಉಂಟಾಗಿರುವ ಆಣಿಗಳಿಗೆ ರಾತ್ರಿ ಮಲಗುವಾಗ ನಿಂಬೆಹಣ್ಣಿನ ಹೋಳುಗಳನ್ನು ಕಟ್ಟಿ ಮಲಗಿದರೆ ಆಣಿ ಸಮಸ್ಯೆ ಪರಿಹಾರವಾಗುತ್ತದೆ.

-ನಿಂಬೆಹಣ್ಣಿನ ರಸಕ್ಕೆ ತೇಯ್ದ ಶ್ರೀಗಂಧವನ್ನು ಬೆರೆಸಿ ಕುಡಿಯುವುದರಿಂದ ಬಾಯಿಯ ದುರ್ಗಂಧ ಮಾಯವಾಗಿ ಒಸಡುಗಳು ಬಲಿಷ್ಠವಾಗುತ್ತದೆ.

-ನಿಂಬೆ ರಸವನ್ನು ಕ್ರಮವಾಗಿ ಸೇವಿಸುವುದರಿಂದ ವಾತ-ಪಿತ್ತ ದಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

-ಒಂದು ಟೀ ಚಮಚ ನಿಂಬೆಹಣ್ಣಿನ ರಸಕ್ಕೆ ಒಂದು ಚಮಚ ಈರುಳ್ಳಿ ರಸ ಸೇರಿಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಲೇರಿಯಾ ರೋಗ ನಿಯಂತ್ರಣಕ್ಕೆ ಬರುತ್ತದೆ.

-ಅರ್ಧ ಲೋಟ ನೀರಿಗೆ ಒಂದು ಟೀ ಚಮಚ ನಿಂಬೆಹಣ್ಣಿನ ರಸ, ಸ್ವಲ್ಪ ಅಡುಗೆ ಸೋಡಾ ಸೇರಿಸಿ ಕುಡಿದರೆ ಹೊಟ್ಟೆ ಉಬ್ಬಸದ ಸಮಸ್ಯೆ ನಿವಾರಣೆಯಾಗುತ್ತದೆ.

-ಅಡಿಗೆಯಲ್ಲಿ ನಿಂಬೆಹಣ್ಣನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಇರಬಹುದಾದ ಹಾನಿಕಾರಕ ಕ್ರಿಮಿಗಳು ನಾಶವಾಗುತ್ತದೆ.

-ನಿಂಬೆರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ತಲೆನೋವು ಎದೆ ನೋವು ಉಪಶಮನವಾಗುತ್ತದೆ.

-ಮೀನಿನ ಊಟ ಸೇವಿಸುವಾಗ ಒಂದು ವೇಳೆ ಮೀನಿನ ಮೂಳೆ ಹೊಟ್ಟೆಗೆ ಸೇರಿದ್ದರೆ, ನಿಂಬೆ ಹಣ್ಣಿನ ರಸವನ್ನು ಬಳಸುವುದರಿಂದ ಅದು ಜೀರ್ಣವಾಗುತ್ತದೆ.

-ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಒಂದು ಬಟ್ಟಲು ಮಜ್ಜಿಗೆಗೆ ಒಂದು ನಿಂಬೆಹಣ್ಣಿನ ರಸ ಹಿಂಡಿ ಸೇವಿಸಿದರೆ ತಲೆ ಸುತ್ತುವಿಕೆ ಹಾಗೂ  ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next